ADVERTISEMENT

ನನ್ನ ಬಗ್ಗೆ ಅಶ್ಲೀಲ ವಿಡಿಯೊ ಹರಿಬಿಟ್ಟವರ ಪತ್ತೆಗಾಗಿ ದೂರು ದಾಖಲಿಸಿದ್ದೇನೆ: ಲೋಣಿ

‘ರಾಜಕೀಯ ಷಡ್ಯಂತ್ರ ರೂಪಿಸಿದವ ವಿರುದ್ಧ ಮಾನನಷ್ಠ ಮೊಕದ್ದಮೆ‘

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 13:18 IST
Last Updated 3 ಜನವರಿ 2022, 13:18 IST
ಮಲ್ಲಿಕಾರ್ಜುನ ಲೋಣಿ
ಮಲ್ಲಿಕಾರ್ಜುನ ಲೋಣಿ   

ವಿಜಯಪುರ: 'ವಿಧಾನ ಪರಿಷತ್‌ ಚುನಾವಣೆ ವೇಳೆ ನನ್ನ ಬಗ್ಗೆ ಅಶ್ಲೀಲ ವಿಡಿಯೊ ಹರಿಬಿಟ್ಟವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ವಿಜಯಪುರ ಗಾಂಧಿಚೌಕಿ ಪೊಲೀಸ್‌ ಠಾಣೆಯ ಕ್ರೈಂ ಬ್ರಾಂಚ್‌ನಲ್ಲಿ ಡಿ.25ರಂದು ದೂರು ದಾಖಲಿಸಿದ್ದೇನೆ ಎಂದು ಪರಾಚಿತ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಶ್ಲೀಲ ವಿಡಿಯೊ ಪ್ರಕರಣದ ತನಿಖೆಗೆ ರಾಜಕೀಯ ಪ್ರಭಾವಿಗಳು ಅಡ್ಡಿಯೊಡ್ಡುವ ಸಾಧ್ಯತೆ ಇದೆ. ಜಿಲ್ಲಾ ಪೊಲೀಸರು ಯಾರ ಒತ್ತಡಕ್ಕೂ ಮಣಿಯದೇನ್ಯಾಯಯುತವಾಗಿ ತನಿಖೆ ನಡೆಯಬೇಕುಎಂದು ಮನವಿ ಮಾಡಿದರು.

ಪೊಲೀಸರ ತನಿಖಾ ವರದಿಯಿಂದ ಯಾರು ಎಂಬುದು ಖಚಿತವಾದ ಬಳಿಕ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ADVERTISEMENT

ವಿಧಾನ ಪರಿಷತ್‌ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೆಟ್ಟ ರಾಜಕಾರಣ ಮಾಡಿದ್ದಾರೆ. ನಾನು ಅನೈತಿಕ ಸಂಬಂಧ ಹೊಂದಿದ್ದರೆ ಅದನ್ನು ಪ್ರಶ್ನಿಸಬೇಕಾದವರು ನನ್ನ ಪತ್ನಿ, ಮನೆಯವರು. ಆದರೆ, ಕೆಲವರು ಅನಗತ್ಯವಾಗಿ ಸುಳ್ಳು ವಿಡಿಯೊ ಸೃಷ್ಟಿ ಮಾಡಿ ನನ್ನನ್ನು ರಾಜಕೀಯವಾಗಿ ಹತ್ತಿಕ್ಕಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.

ಎಂ.ಬಿ.ಪಾಟೀಲ ವಿರುದ್ಧ ಆರೋಪ:ಬಸವಣ್ಣನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಶಾಸಕ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ಪ್ರಬಲ ಜಾತಿ, ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟಿ ಒಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಎಂ.ಬಿ.ಪಾಟೀಲ ಅವರಿಂದ ಜಿಲ್ಲೆಯಲ್ಲಿ ಯಾವುದೇ ಸಮಾಜಕ್ಕೆ ಸಾಮಾಜಿಕ ನ್ಯಾಯ ಲಭಿಸುತ್ತಿಲ್ಲ. ಬಹಳಷ್ಟು ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ನಮ್ಮ ಸಮಾಜದ ಮುಖಂಡರಾದಲಕ್ಷ್ಮಣ ಸವದಿ, ಸಿದ್ದು ನ್ಯಾಮಗೌಡ, ಎಸ್‌.ಕೆ.ಬೆಳ್ಳುಬ್ಬಿ ಸೇರಿದಂತೆ ಅನೇಕರನ್ನು ರಾಜಕೀಯವಾಗಿ ತುಳಿಯಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಇದನ್ನು ಸಮಾಜದವರಿಗೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದರು.

ಅಧಿಕಾರ ಮೊಟಕು:ಗ್ರಾಮ ಪಂಚಾಯ್ತಿಗಳ ಅಧಿಕಾರ ಮೊಟಕು ಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಶೀಘ್ರದಲ್ಲೇ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳ ನಿಯೋಗದಿಂದಿಗೆ ಬೆಂಗಳೂರಿಗೆ ತೆರಳಿ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಗ್ರಾಮ ಪಂಚಾಯ್ತಿಗಳ ಅಧಿಕಾರಿ ಮೊಟಕು ಗೊಳಿಸದಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಮನವಿಗೆ ಸ್ಪಂದಿಸದಿದ್ದರೆ ರಾಜ್ಯಮಟ್ಟದ ಹೋರಾಟವನ್ನು ಬೆಂಗಳೂರಿನಲ್ಲೇ ನಡೆಸಲಾಗುವುದು. ಈ ಸಂಬಂಧ ರಾಜ್ಯಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳ ಒಕ್ಕೂಟವನ್ನು ರಚಿಸಲಾಗುವುದು ಎಂದರು.

ಗ್ರಾಮ ಪಂಚಾಯ್ತಿಗಳು ₹ 50 ಸಾವಿರ ಮೇಲ್ಪಟ್ಟ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನಾ ಜಿಲ್ಲಾ ಪಂಚಾಯ್ತಿ ಅಥವಾ ಸರ್ಕಾರದಿಂದ ಅನುಮತಿ ಪಡೆಯಬೇಕು ಎಂಬ ರಾಜ್ಯ ಸರ್ಕಾರದ ಆದೇಶವು ಗ್ರಾಮ ಪಂಚಾಯ್ತಿ ಅಧಿಕಾರ ಮೊಟಕುಗೊಳಿಸುವ ಹುನ್ನಾರವಾಗಿದೆ ಎಂದು ಹೇಳಿದರು.

ಮುಖಂಡರಾದ ಪ್ರದೀಪ ಪಾಟೀಲ, ಕಾಂತು ಇಂಚಿಗೇರಿ, ಎಂ.ಎಚ್‌.ಪಠಾಣ, ವಿಠಲ ಕತ್ನಳ್ಳಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಬೇಕು, ಆರೋಗ್ಯ ವಿಮಾ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು.
–ಮಲ್ಲಿಕಾರ್ಜುನ ಲೋಣಿ,ಜಿ.ಪಂ.ಮಾಜಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.