ADVERTISEMENT

ಪರಿಹಾರಕ್ಕೆ ಆಗ್ರಹಿಸಿ ಕುರಿಗಾರರ ಪ್ರತಿಭಟನೆ ಇಂದು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:50 IST
Last Updated 24 ನವೆಂಬರ್ 2020, 16:50 IST
ಸುಜಾತಾ ಕಳ್ಳಿಮನಿ 
ಸುಜಾತಾ ಕಳ್ಳಿಮನಿ    

ವಿಜಯಪುರ: ಪ್ರವಾಹ, ಮಳೆ ಮತ್ತು ಅಪಘಾತದಲ್ಲಿ ಸಾವಿಗೀಡಾದ ಕುರಿ ಮತ್ತು ಮೇಕೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಅನುಗ್ರಹ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿ ನ.25ರಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರ ಜಿಲ್ಲಾ ಕುರಿಗಾರರ ಸಂಘದಿಂದ ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ನಗರದ ಕನಕದಾಸ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದ ಹಾಗೂ ಅಪಘಾತದಿಂದ ಸುಮಾರು 500ಕ್ಕೂ ಹೆಚ್ಚು ಕುರಿ ಮತ್ತು ಆಡುಗಳು ಸಾವಿಗೀಡಾಗಿವೆ. ಇದಕ್ಕೆ ಸಂಬಂಧಿಸಿದಂತೆ ₹ 29 ಲಕ್ಷ ಪರಿಹಾರ ಬರುವುದು ಬಾಕಿ ಇದ್ದು, ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆಯನ್ನು ಬಿಜೆಪಿ ಸರ್ಕಾರ ಏಕಾಏಕಿ ಸ್ಥಗಿತಗೊಳಿಸಿದ್ದು, ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳಕ್ಕೆ ಎರಡು ವರ್ಷಗಳಿಂದ ಸೂಕ್ತ ಅನುದಾನ ನೀಡಿಲ್ಲ. ತಕ್ಷಣ ಮಹಾಮಂಡಳಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಕುರಿಗಳನ್ನು ಅರಣ್ಯದಲ್ಲಿ ಮೇಯಿಸಲು ಅನುಕೂಲ ಮಾಡಿಕೊಡಬೇಕು. ಕುರಿಗಾರರ ಪತ್ತಿನ ಸಹಕಾರ ಸಂಸ್ಥೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು.ಜಿಲ್ಲೆಯಲ್ಲಿ ಗೋಮಾಳ ಜಮೀನು ಒತ್ತುವರಿಯಾಗುತ್ತಿದ್ದು, ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಬೀರಪ್ಪ ಜುಮನಾಳ, ಮಲ್ಲಿಕಾರ್ಜುನ ಬಿದರಿ, ದೇವಕಾಂತ ಬಿಜ್ಜರಗಿ, ರವಿ ಕಿತ್ತೂರ, ಕಾಂತು ಇಂಚಿಗೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.