ಸಿಂದಗಿ: ಪಟ್ಟಣದ ಸ.ನಂ 828ರಲ್ಲಿನ ಪಟ್ಟಣದ ವಾರ್ಡ್ ನಂ 13 ಕಾಳಿಕಾನಗರದ ಉದ್ಯಾನ ಹಾಗೂ ಅದಕ್ಕೆ ಹೊಂದಿಕೊಂಡಿರುವ ರಸ್ತೆಯ ಮೇಲೆ ಅನಧಿಕೃತವಾಗಿ ಹಾಕಿಕೊಂಡಿರುವ ಶೆಡ್ಡುಗಳನ್ನು ತೆರುವುಗೊಳಿಸುವಂತೆ ಆಗ್ರಹಿಸಿ ಕಾಳಿಕಾ ನಗರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಿವಾಸಿಗಳು ಗುರುವಾರ ಪುರಸಭೆ ಕಾರ್ಯಾಲಯದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ರಾಜೂ ಕಿಣಗಿ ಮಾತನಾಡಿ, ಉದ್ಯಾನಕ್ಕಾಗಿ ಮೀಸಲಾಗಿದ್ದ ಜಾಗೆಯಲ್ಲಿ ಹಲವಾರು ವರ್ಷಗಳ ಹಿಂದೆ ಅತ್ಯಧಿಕ ಸಂಖ್ಯೆಯಲ್ಲಿ ಶೆಡ್ಡುಗಳನ್ನು ಹಾಕಿಕೊಳ್ಳಲಾಗಿದ್ದು ಅಷ್ಟೇ ಅಲ್ಲದೇ ಅದಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿಯೂ ಶೆಡ್‌ಗಳನ್ನು ಹಾಕಿಕೊಂಡಿದ್ದಾರೆ.
ಅನಧಿಕೃತ ಶೆಡ್‌ಗಳನ್ನು ತೆರುವುಗೊಳಿಸುವಂತೆ 2008ರಲ್ಲಿಯೇ ಜಿಲ್ಲಾಧಿಕಾರಿಗಳಿಂದ ಆದೇಶವಾಗಿದ್ದರೂ ತೆರುವುಗೊಂಡಿಲ್ಲ. ತೆರುವುಗೊಳಿಸುವಂತೆ ಶಾಂತಿಯುತ ಹೋರಾಟದ ಮೂಲಕ ಒತ್ತಾಯಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಪಟ್ಟಣದ ಸೌಂದರ್ಯ ಹೆಚ್ಚಿಸಲು ತಾವು ಈಗಾಗಲೇ ಕೈಗೊಂಡಿರುವ ತೆರುವು ಕಾರ್ಯಾಚರಣೆ ಕಾರ್ಯವೈಖರಿಯನ್ನು ಶ್ಲಾಘಿಸುತ್ತೇವೆ ಎಂದು ಅವರು ಪುರಸಭೆ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಬಹುದಿನಗಳಿಂದ ನನೆಗುದಿಗೆ ಬಿದ್ದ ಕಾಳಿಕಾನಗರ ಉದ್ಯಾನದಲ್ಲಿ ಅನಧಿಕೃತ ಶೆಡ್‌ಗಳ ತೆರುವು ಕಾರ್ಯಾಚರಣೆ ಕ್ರಮಕೈಗೊಳ್ಳುವೆ. ಕೂಡಲೇ ಹೆಸ್ಕಾಂ ಎಇಇ ಅವರಿಗೆ ಪತ್ರ ಬರೆದು ಉದ್ಯಾನ ನಿವೇಶನದಲ್ಲಿ ಮತ್ತು ರಸ್ತೆ ಮೇಲೆ ಹಾಕಿಕೊಂಡಿರುವ ಶೆಡ್‌ಗಳಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಸೂಚಿಸಲಾಗುವುದು.
ಅಲ್ಲದೇ ಅಲ್ಲಿರುವವರಿಗೆ ದೊರಕುವ ಸೌಲಭ್ಯಗಳನ್ನು ಕೂಡ ಸ್ಥಗಿತಗೊಳಿಸುವ ಮೂಲಕ ಅವರನ್ನು ತೆರುವುಗೊಳಿಸಲಾಗುತ್ತದೆ ಎಂದು ಕಾಳಿಕಾ ನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಪುರಸಭೆ ಅಧ್ಯಕ್ಷರು ಭರವಸೆ ನೀಡಿದರು.
ಬಡಾವಣೆಯ ನಿವಾಸಿಗಳಾದ ದಯಾನಂದ ಪತ್ತಾರ, ಬೋಜಪ್ಪ ಸಂಗಮ, ಡಿ.ಜಿ.ಮಠ, ವಿ.ಕೆ.ಹಿರೇಮಠ, ಶಿವಾನಂದ ಕೋರಿ, ಅಶೋಕ ಬಮ್ಮಣ್ಣಿ, ಜಿ.ಎ.ದೇಸಾಯಿ, ಬಸವರಾಜ ಕಂಗಳ, ಬಸವರಾಜ ಪತ್ತಾರ, ಎನ್.ಎಸ್.ದೇಸಾಯಿ, ಎನ್.ಬಿ.ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.