ಸಿಂದಗಿ: ಕೊಡಂಗಲ್ ರಾಜ್ಯ ಹೆದ್ದಾರಿ ಮತ್ತು ಸಿಂದಗಿ-ಶಹಾಪುರ ಮುಖ್ಯರಸ್ತೆ ನಿರ್ಮಾಣಕ್ಕಾಗಿ ಆಗ್ರಹಿಸಿ ಬಿಜೆಪಿ ಮಂಡಲ ವತಿಯಿಂದ ಅಪಾರ ಸಂಖ್ಯೆಯ ಕಾರ್ಯಕರ್ತರು ಬುಧವಾರ ಒಂದು ಗಂಟೆ ಕಾಲ ರಾಜ್ಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.
ಅಪಾರ ಸಂಖ್ಯೆಯಲ್ಲಿ ವಾಹನಗಳು ರಸ್ತೆಯಲ್ಲಿ ನಿಂತುಕೊಂಡಿದ್ದವು. ಸರ್ಕಾರದ ವಿರುದ್ದ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ಗೋಲಗೇರಿ ಯುಕೆಪಿ ಕ್ಯಾಂಪ್ ನಿಂದ ಡಂಬಳ ಕ್ರಾಸ್ ವರೆಗೆ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ಡಂಬಳ, ಗೋಲಗೇರಿ, ಸಾಸಬಾಳ, ಢವಳಾರ, ಖಾನಾಪುರ, ಕರವಿನಾಳ ಗ್ರಾಮ ಮತ್ತು ತಾಂಡಾ, ಹೊನ್ನಳ್ಳಿ, ಬ್ರಹ್ಮದೇವನಮಡು, ಸಲಾದಹಳ್ಳಿ, ಯಂಕಂಚಿ, ಸುಂಗಠಾಣ, ಖೈನೂರ ಗ್ರಾಮಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ನಾನು 12 ವರ್ಷ ಶಾಸಕನಿದ್ದ ಸಂದರ್ಭದಲ್ಲಿ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಾರೆ. ನಾನು ಮಾಡದೇ ಇದ್ದ ಗ್ರಾಮೀಣ ರಸ್ತೆಗಳೇ ಇಲ್ಲ. ಈ ಭಾಗದಲ್ಲಿ ಡಂಬಳ-ಕರವಿನಾಳ, ಗೋಲಗೇರಿ- ಕೊಂಡಗೂಳಿ, ಗೋಲಗೇರಿ-ಗುಬ್ಬೇವಾಡ, ಬ್ರಹ್ಮದೇವನಮಡು ಮತ್ತು ಗೋಲಗೇರಿಯಲ್ಲಿ ಡಬಲ್ ಸಿ.ಸಿ ರಸ್ತೆ ಗಳನ್ನು ಮಾಡಿದವರಾರು... ಎಂದು ಮರು ಪ್ರಶ್ನೆ ಮಾಡಿದರು.
ಕೊಡಂಗಲ್ ಹೆದ್ದಾರಿಯ ಗೋಲಗೇರಿ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಹೀಗಾಗಿ ರಸ್ತೆ ಅಪಘಾತಗಳು ಹೆಚ್ಚಿವೆ. ಇದೇ ರಸ್ತೆಯಲ್ಲಿ ಸಾರಿಗೆ ಬಸ್‌ಗಳು ಪದೇ, ಪದೇ ಪಲ್ಟಿಯಾಗಿವೆ. ಶಾಲಾ ಮಕ್ಕಳು, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು, ಕಿವಿ ಎರಡೂ ಇಲ್ಲ. ಶಾಸಕರು ರಸ್ತೆ ವಿಷಯವಾಗಿ ಪ್ರಸ್ತಾವ ಸಲ್ಲಿಸಿರುವದನ್ನೇ ದೊಡ್ಡದಾಗಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಅವರು ಬಿಜೆಪಿ ವಿರುದ್ದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಶಾಸಕರು ಏನು ಬರೆದು ಕೊಟ್ಟಿದ್ದಾರೆ ಅದನ್ನೇ ಓದಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಬೇಗನೇ ಈ ರಸ್ತೆ ಕಾಮಗಾರಿಗೆ ಮಂಜೂರಾತಿಯೊಂದಿಗೆ ಅನುದಾನ ಬಿಡುಗಡೆಗೊಂಡು ಭೂಮಿಪೂಜೆ ಮಾಡಿದರೆ ನಾನೇ ಶಾಸಕರಿಗೆ ಮೈಸೂರು ಪೇಟಾ ತೊಡಿಸಿ ಗೌರವಿಸುತ್ತೇನೆ. ಮುಂದಿನ ವಾರದಲ್ಲಿ ಹದಗೆಟ್ಟ ಆಲಮೇಲ-ದೇವಣಗಾಂವ ರಸ್ತೆಯಲ್ಲಿ ರಸ್ತೆ ತಡೆ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಸಿದ್ದನಗೌಡ ಪಾಟೀಲ ಗೋಲಗೇರಿ ಅವರು ಕಾಂಗ್ರೆಸ್ ಸರ್ಕಾರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನಕಾರರ ಮನವಿ ಸ್ವೀಕರಿಸಿದ ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕ ಬಸವರಾಜ ಜಂಗಮಶೆಟ್ಟಿ ಮಾತನಾಡಿ, 2012 ರಲ್ಲಿ ಈ ರಸ್ತೆ ಕಾಮಗಾರಿ ನಡೆದಿದೆ. ಹೀಗಾಗಿ ಈಗ ರಸ್ತೆ ಬಹಳ ಹಾಳಾಗಿದೆ. ಮುಂದಿನ ತಿಂಗಳು ನಿರ್ವಹಣೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರಸ್ತೆ ಸುಧಾರಣೆಗಾಗಿ ಸರ್ಕಾರಕ್ಕೆ ಸಲ್ಲಿಸಿದ ₹ 19 ಕೋಟಿ ಪ್ರಸ್ತಾವನೆಗೆ ಡಿಸೆಂಬರ್ ತಿಂಗಳಲ್ಲಿ ಮಂಜೂರಾತಿ ದೊರಕಬಹುದು ಎಂದು ತಿಳಿಸಿದರು.
ಬಿಜೆಪಿ ಮಂಡಲ ಮುಖಂಡರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕ ಮನಗೂಳಿಗೆ ಸವಾಲ್
ಶಾಸಕ ಅಶೋಕ ಮನಗೂಳಿ ತಮ್ಮ ಎರಡೂವರೆ ವರ್ಷದಲ್ಲಿ ಒಂದೇ ಒಂದು ಕೀಲೊ ಮೀಟರ್ ರಸ್ತೆ ಮಾಡಿದ್ದಾರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಶಾಸಕ ರಮೇಶ ಭೂಸನೂರ ಸವಾಲು ಹಾಕಿದರು. ಎರಡೂವರೆ ವರ್ಷದ ತಮ್ಮ ಶಾಸಕ ಅವಧಿಯಲ್ಲಿ ಗೋಲಗೇರಿ ಭಾಗದಲ್ಲಿ ಒಂದೇ ಒಂದು ಹೊಸ ರಸ್ತೆ ಮಾಡಿಲ್ಲ. ಕೊಡಂಗಲ್ ರಾಜ್ಯ ಹೆದ್ದಾರಿ 16 ಕಿ.ಮೀ ರಸ್ತೆ ಸುಧಾರಣೆಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಅದಕ್ಕೆ ಕಾಂಗ್ರೆಸ್ಸಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಾರೆ. ಸುಳ್ಳು ಮೋಸದಾಟ ನಡೆಯುವದಿಲ್ಲ. ನಿಮಗೆ ಮೂರು ತಿಂಗಳ ಕಾಲಾವಕಾಶ ಕೊಡುತ್ತೇನೆ. ಈ ರಸ್ತೆಗೆ ಭೂಮಿಪೂಜೆ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.