ADVERTISEMENT

ಸಿಂದಗಿ ಪಟ್ಟಣದ ಅಭಿವೃದ್ಧಿಗೆ ₹29 ಕೋಟಿ: ಶಾಸಕ ಅಶೋಕ ಮನಗೂಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:32 IST
Last Updated 22 ಸೆಪ್ಟೆಂಬರ್ 2025, 4:32 IST
ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಭಾನುವಾರ ಶಾಸಕ ಅಶೋಕ ಮನಗೂಳಿ ಅವರು ಸಮಾಜಕಲ್ಯಾಣ ಇಲಾಖೆಯಡಿ ನಿರ್ಮಾಣಗೊಳ್ಳುವ ಅಂಬೇಡ್ಕರ್ ಭವನದ ಮುಂದುವರೆದ ಕಟ್ಟಡ ಕಾಮಗಾರಿ ಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು
ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಭಾನುವಾರ ಶಾಸಕ ಅಶೋಕ ಮನಗೂಳಿ ಅವರು ಸಮಾಜಕಲ್ಯಾಣ ಇಲಾಖೆಯಡಿ ನಿರ್ಮಾಣಗೊಳ್ಳುವ ಅಂಬೇಡ್ಕರ್ ಭವನದ ಮುಂದುವರೆದ ಕಟ್ಟಡ ಕಾಮಗಾರಿ ಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು   

ಸಿಂದಗಿ: ಮುಖ್ಯಮಂತ್ರಿ ₹50 ಕೋಟಿ ಅನುದಾನವನ್ನು ಪ್ರತಿಯೊಂದು ಮತಕ್ಷೇತ್ರದ ಶಾಸಕ ನಿಧಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಮ್ಮ ಮತಕ್ಷೇತ್ರಕ್ಕೆ ಬರಬಹುದಾದ ₹ 50 ಕೋಟಿ ಅನುದಾನದಲ್ಲಿ ₹ 29 ಕೋಟಿಯನ್ನು ಪಟ್ಟಣದ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಭಾನುವಾರ ₹ 2 ಕೋಟಿ ವೆಚ್ಚದ ಭವನದ ಮುಂದುವರೆದ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದ 15 ಮತ್ತು 16ನೆಯ ವಾರ್ಡ್ ಪರಿಶಿಷ್ಟ ನಿವಾಸಿ ಕಾಲೊನಿಗಳಲ್ಲಿ ₹1 ಕೋಟಿ ವೆಚ್ಚದಲ್ಲಿ ರಸ್ತೆ ಫೆವರ್ಸ್ ಕಾಮಗಾರಿ ಪೂರ್ಣಗೊಂಡಿದೆ. ಎಸ್‌ಸಿಟಿಪಿ ಯೋಜನೆಯಡಿ ಪರಿಶಿಷ್ಟ ನಿವಾಸಿಗಳ ಕಾಲೊನಿಗಳಲ್ಲಿ ಸಿ.ಸಿ ರಸ್ತೆಗಳಿಗಾಗಿ ತಾಂಬಾ ಗ್ರಾಮದಲ್ಲಿ ₹ 1 ಕೋಟಿ , ಕುಮಸಗಿ ಗ್ರಾಮದಲ್ಲಿ ₹ 50 ಲಕ್ಷ, ನಾಗಾವಿ ಬಿ.ಕೆ, ಬಂಟನೂರ ಗ್ರಾಮಗಳಲ್ಲಿ ₹ 50 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಇಡೀ ದೇಶದಲ್ಲಿಯೇ ಎಸ್‌ಸಿಎಸ್‌ಟಿಟಿಪಿ ಯೋಜನೆ ಜಾರಿಗೆ ತಂದಿರುವ ಏಕಮೇವ ರಾಜ್ಯ ನಮ್ಮದಾಗಿದೆ. ಈ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷದ ಟೀಕೆ ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದರು.

ಸಿಂದಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಇನ್ನು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೊಳ್ಳುತ್ತದೆ. ಎಲ್ಲ 23 ವಾರ್ಡ್‌ಗಳನ್ನು ಮಾದರಿಯಾಗಿ ಅಭಿವೃದ್ದಿ ಪ್ರಾರಂಭಗೊಳ್ಳುತ್ತವೆ ಎಂದು ತಿಳಿಸಿದರು.

ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿಯ ಅಂಬೇಡ್ಕರ್ ಭವನ ನಿರ್ಮಾಣಗೊಂಡು ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಹಿಂದಿನ ಶಾಸಕ ರಮೇಶ ಭೂಸನೂರ ₹ 1 ಕೋಟಿ ಅನುದಾನ ನೀಡಿದ್ದಾರೆ. ಸಿಂದಗಿಯಲ್ಲಿ ನಿರ್ಮಾಣಗೊಳ್ಳುವ ಬುದ್ಧ ವಿಹಾರಕ್ಕೆ ₹4 ಕೋಟಿ ಅನುದಾನ ಶಾಸಕರು ಬಿಡುಗಡೆಗೊಳಸುವಂತೆ ಅವರು ಮನವಿ ಮಾಡಿಕೊಂಡರು.

‘ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಬಿಡುಗಡೆಗೊಳಿಸಿದ ₹ 2 ಕೋಟಿ ಅನುದಾನದಲ್ಲಿ ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಅಂಬೇಡ್ಕರ್ ಗ್ಲಾಸ್ ಹೌಸ್ ನಿರ್ಮಾಣಕ್ಕಾಗಿ ₹1.50 ಕೋಟಿ ಜೊತೆಗೆ ₹ 50 ಲಕ್ಷ ವೆಚ್ಚದಲ್ಲಿ ಭವನ ನವೀಕರಣಗೊಳಿಸಲಾಗುವುದು’ ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ಸದಸ್ಯರಾದ ರಾಜಣ್ಣ ನಾರಾಯಣಕರ, ಬಸವರಾಜ ಯರನಾಳ ಹಾಗೂ ಯಮನಪ್ಪ ಹೊಸಮನಿ, ಚಂದ್ರಾಮ ಜಾಬನ್ನವರ, ವಿಠ್ಠಲ ಹೊಸಮನಿ, ಶರಣಪ್ಪ ಸುಲ್ಪಿ, ದೇವಕಿ ಮಣೂರ, ನಿರ್ಮಿತಿ ಕೇಂದ್ರದ ಎಇಇ ಅರವಿಂದ ದನಗೊಂಡ, ಬಾಲಕೃಷ್ಣ ಛಲವಾದಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.