ಸಿಂದಗಿ: ಗಂಡ-ಹೆಂಡತಿ ಜಗಳದ ನಡುವೆ ಕೂಸು ಬಡವಾಯಿತು ಎಂಬಂತೆ ಪುರಸಭೆ ಅಧ್ಯಕ್ಷ- ಸದಸ್ಯರ ಕಿತ್ತಾಟದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾದ ಸ್ಥಿತಿ ಇಲ್ಲಿಯ ಪುರಸಭೆಯಲ್ಲಿ ನಿರ್ಮಾಣವಾಗಿದೆ.
2-3 ತಿಂಗಳಿಂದ ಪುರಸಭೆ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ನಿತ್ಯ ನೂರಾರು ಸಾರ್ವಜನಿಕರು ತಮ್ಮ ಆಸ್ತಿ, ಮನೆ ತೆರಿಗೆ ತುಂಬಲು ಪುರಸಭೆ ಕಾರ್ಯಾಲಯಕ್ಕೆ ಅಲೆದಾಡುವುದು ಸಾಮಾನ್ಯವಾಗಿದೆ. ಏಪ್ರಿಲ್/ಮೇ ತಿಂಗಳಲ್ಲಿ ತೆರಿಗೆ ತುಂಬಿದರೆ ರಿಯಾಯತಿ ಸಿಗುತ್ತದೆ ಎಂಬ ಕಾರಣಕ್ಕಾಗಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಹಣ ತುಂಬಲು ಬಂದರೆ ಕಾರ್ಯಾಲಯದಲ್ಲಿ ತುಂಬಿಸಿಕೊಳ್ಳಲು ಆಗುವುದಿಲ್ಲ ಎಂಬ ಉತ್ತರ ಕಾದಿರುತ್ತದೆ.
ಮಾರ್ಚ್ 27 ರಂದು ನಡೆಯಬೇಕಿದ್ದ 2025-26 ನೆಯ ಸಾಲಿನ ಪುರಸಭೆ ಬಜೆಟ್ ಅನುಮೋದನೆಯ ತುರ್ತು ಸಾಮಾನ್ಯ ಸಭೆ ಏಕಾಏಕಿ ರದ್ದುಗೊಂಡಿದೆ. ‘ನನ್ನ ಗಮನಕ್ಕೆ ತರದೇ ಬಜೆಟ್ ಸಭೆಯನ್ನು ಮುಖ್ಯಾಧಿಕಾರಿ ಎಸ್. ರಾಜಶೇಖರ್ ರದ್ದು ಪಡಿಸಿರುವುದು ಕಾನೂನುಬಾಹಿರ. ಹೀಗಾಗಿ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂಬುದು ನನ್ನ ಆಗ್ರಹ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಪುರಸಭೆ ಕಾರ್ಯಾಲಯದ ಎಲ್ಲ ಕಾರ್ಯಗಳು ಸ್ಥಗಿತಗೊಂಡು ಪುರಸಭೆಗೆ ಕೋಟ್ಯಂತರ ಹಣ ನಷ್ಟ ಉಂಟಾಗಿದೆ. ಬಜೆಟ್ ಸಭೆ ನಡೆಯದ ಕಾರಣ ವಾರ್ಷಿಕ ಹಣಕಾಸಿನ ವಿಷಯವಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ದೂರಿದ್ದಾರೆ.
‘ಪುರಸಭೆಯ ಇತಿಹಾಸದಲ್ಲಿ ಮಾರ್ಚ್ ತಿಂಗಳಲ್ಲಿ ಬಜೆಟ್ ಸಭೆ ನಡೆಸದ ಮೊದಲ ಪುರಸಭೆ ಸಿಂದಗಿ ಎಂಬ ಕುಖ್ಯಾತಿ ಪಡೆದುಕೊಂಡಿದೆ. ಕೊರೊನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜ್ಯದಾದ್ಯಂತ ಎಲ್ಲ ಪುರಸಭೆಗಳಲ್ಲಿ ಬಜೆಟ್ ಸಭೆಗಳು ನಡೆದಿವೆ’ ಎಂದು ರಾಜ್ಯ ಪೌರ ನೌಕರರ ಸಂಘ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಎಂ. ಗುರುನಾಥ ಬೇಸರ ವ್ಯಕ್ತ ಪಡಿಸಿದ್ದಾರೆ.
‘ಬಜೆಟ್ ಮಂಡನೆ ಸಭೆ ನಡೆಯದಿರುವುದು ಪಟ್ಟಣದ ಅಭಿವೃದ್ಧಿಗೆ ಮತ್ತು ಪುರಸಭೆ ದೈನಂದಿನ ಕೆಲಸಗಳಿಗೆ ಅಡಚಣೆಯಾಗಿದೆ. ಆದಷ್ಟು ಬೇಗ ಬೇಗ ಬಜೆಟ್ ಮಂಡನೆ ಪ್ರಕ್ರಿಯೆ ನಡೆಯಬೇಕು’ ಎಂದು ಪುರಸಭೆ ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ನಾಗೂರ ಒತ್ತಾಯಿಸಿದ್ದಾರೆ.
ಈ ಬಗ್ಗೆ ಶಾಸಕ ಅಶೋಕ ಮನಗೂಳಿ ಮೌನ ಮಂತ್ರ ಜಪಿಸುತ್ತಿದ್ದಾರೆ. ಉತಾರ ಕೂಡ ದೊರಕದೇ ಬ್ಯಾಂಕ್ ವ್ಯವಹಾರಕ್ಕೆ, ಮನೆ ಕಟ್ಟಡ ಅನುಮತಿ ಪಡೆಯಲು, ಪ್ಲಾಟ್ ಖರೀದಿ ಹೀಗೆ ಎಲ್ಲ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರು ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಅಧ್ಯಕ್ಷರು ಬಜೆಟ್ ಸಭೆಗೆ ಸಹಿ ಮಾಡಿಲ್ಲ’
ಪುರಸಭೆ ಅಧ್ಯಕ್ಷರು ಬಜೆಟ್ ಸಭೆಗೆ ಸಹಿ ಮಾಡಿಕೊಟ್ಟಿಲ್ಲ. ಹೀಗಾಗಿ ಆಡಳಿತಕ್ಕೆ ತೊಂದರೆಯಾಗಿದೆ. ಸಾರ್ವಜನಿಕರು ತೆರಿಗೆ ತುಂಬಲು ಬಂದರೆ ಆನ್‌ಲೈನ್‌ನಲ್ಲಿ ಅಪಲೋಡ್ ಆಗುತ್ತಿಲ್ಲ. ಯೋಜನಾನಿರ್ದೇಶಕರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿದ್ದು ನಿರ್ದೇಶಕರಿಂದ ಅನುಮತಿ ಪಡೆದು ಒಂದು ವಾರದಲ್ಲಿ ಸ್ಥಗಿತಗೊಂಡ ಆಡಳಿತ ಕಾರ್ಯ ಆರಂಭಿಸಲಾಗುವುದು ಎಸ್. ರಾಜಶೇಖರ್ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.