ಸಿಂದಗಿ: ‘ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಮತ್ತು ಇಂಡಿ ಶಾಖಾ ಕಾಲುವೆಗಳಿಂದ ಈ ಭಾಗದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಇದಕ್ಕಾಗಿ ಅಂದಾಜು ₹2,000 ಕೋಟಿ ವೆಚ್ಚದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ’ ಕೃಷ್ಣಾ ಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಹೇಳಿದರು.
ಪಟ್ಟಣ ಸಮೀಪದ ಮಂಗಳವಾರ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ 31 ‘ಎ’ ಕಾಲುವೆಯನ್ನು ವೀಕ್ಷಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
‘ವಿದ್ಯುತ್ ಪರಿವರ್ತಕ ಸಮಸ್ಯೆ ಕಾರಣ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಿಂದ ಕಾಲುವೆಗಳಿಗೆ ನೀರೆತ್ತಲು ತೊಂದರೆಯಾಗಿದೆ. ಅದನ್ನು ಸರಿಪಡಿಸಲು ಒಂದು ಪರಿವರ್ತಕವನ್ನು ಎರವಲು ಪಡೆದುಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಕಾಯಂ ಪರಿವರ್ತಕ ಅಳವಡಿಸಿದ ಬಳಿಕ ಎರವಲು ಪಡೆದ ಪರಿವರ್ತಕ ಮರಳಿಸಲಾಗುವುದು’ ಎಂದರು.
‘ಕಾಲುವೆಗಳಿಗೆ ಸಮಪರ್ಕವಾಗಿ ನೀರು ಪೂರೈಕೆ ಆಗಬೇಕೆಂದು ಈ ಭಾಗದ ಶಾಸಕರು ಸರ್ಕಾರದ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸ್ಕಾಡಾ ಗೇಟ್ ಅಳವಡಿಕೆ ಕುರಿತು ಸಮಗ್ರ ಯೋಜನಾ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಒಂದೂವರೆ ತಿಂಗಳಲ್ಲಿ ವರದಿ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.
‘ಈಗಾಗಲೇ, ಇಂಡಿ ಶಾಖಾ ಕಾಲುವೆಯ 64 ಕಿ.ಮೀ.ವರೆಗೆ ದುರಸ್ತಿ ಕೆಲಸ ನಡೆದಿದೆ. ಕೆಲವೆಡೆ ಕಾಲುವೆ ಕುಸಿದಿದೆ. ಹೀಗಾಗಿ, ಮುಂದಿನ 172 ಕಿ.ಮೀ.ವರೆಗೆ ದುರಸ್ತಿ ಕೆಲಸ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಇದರ ಯೋಜನಾ ವರದಿ ಸಹ ಅಂತಿಮ ಹಂತದಲ್ಲಿದೆ’ ಎಂದರು.
‘ಈ ಕಾಲುವೆಯ ಅಂತಿಮ ಹಂತದವರೆಗೆ ನೀರು ತಲುಪದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆಂದು ಶಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಗಾನೂರ ಕೆರೆಗೆ ಸೇರುವ ಕಾಲುವೆ ನೀರು ಅಲ್ಲಿಂದ ಮುಂದಿನ ಕಾಲುವೆಗೆ ಹರಿಯುವ ವೇಗ ಕಡಿಮೆಯಾಗುವುದರಿಂದ ಈ ಸಮಸ್ಯೆ ಆಗುತ್ತಿದೆ. ನೀರಿನ ವೇಗ ಹೆಚ್ಚಿಸುವ ಕುರಿರು ವರದಿ ಬಂದಿದೆ’ ಎಂದು ತಿಳಿಸಿದರು.
‘ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ವ್ಯಾಪ್ತಿಯ ಪ್ರದೇಶದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಆಲಮೇಲ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ, ಕ್ರೀಡಾಂಗಣ, ನ್ಯಾಯಾಲಯ ಕಟ್ಟಡ, ಪ್ರಜಾಸೌಧ ಕಟ್ಟಡ, ಸುಂಗಠಾಣ ಹಾಸ್ಟೆಲ್ ಕಟ್ಟಡ, ಹೊನ್ನಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಒಟ್ಟು 15 ಎಕರೆಯಷ್ಟು ಜಮೀನು ನೀಡಲು ನಿಗಮದ ಆಡಳಿತ ಮಂಡಳಿ ಮಂಜೂರಾತಿ ನೀಡಿದೆ. ಸರ್ಕಾರದಿಂದ ಆದೇಶ ಹೊರಬರಬೇಕಿದೆ’ ಎಂದು ಹೇಳಿದರು.
ಮುಖ್ಯ ಎಂಜಿನಿಯರ್ ರವಿಶಂಕರ, ಸೂಪರಿಂಟೆಂಡೆಂಟ್ ಎಂಜಿನಿಯರ್ ಮನೋಜಕುಮಾರ ಇದ್ದರು.
‘ನೀರು ಸಮರ್ಪಕ ಪೂರೈಕೆ ಆಗಲಿ’
‘ಸಿಂದಗಿ ಮತಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಕಾಲುವೆ ದುರಸ್ತಿ ಆಗದ ಕಾರಣದಿಂದ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ‘30 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಇಂಡಿ ಶಾಖಾ ಕಾಲುವೆಗಳನ್ನು ಮರು ದುರಸ್ತಿಗೊಳಿಸಲು ಇಂಡಿ ಮತ್ತು ನಾಗಠಾಣ ಕ್ಷೇತ್ರಗಳ ಶಾಸಕರೊಂದಿಗೆ ಆರು ತಿಂಗಳ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಇದಕ್ಕೆ ಸ್ಪಂದಿಸಿ ಕಾಲುವೆಗಳನ್ನು ವೀಕ್ಷಣೆ ಮಾಡಿ ವರದಿ ಸಲ್ಲಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.