ADVERTISEMENT

ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:59 IST
Last Updated 29 ಮೇ 2025, 14:59 IST
ಶಾಂತವೀರ ಬಿರಾದಾರ
ಶಾಂತವೀರ ಬಿರಾದಾರ   

ಸಿಂದಗಿ: ‘ನಿಷ್ಠಾವಂತ ಕಾಂಗ್ರೆಸ್ಸಿಗನಾದರೂ ನನ್ನನ್ನು ಪುರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಮೂಲಕ ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ ಮಾಡಲಾಗಿದೆ. ಶಾಸಕ ಅಶೋಕ ಮನಗೂಳಿ ಅವರ ಈ ನಡೆ ಖಂಡಿನೀಯ’ ಎಂದು ಶಾಂತವೀರ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ‘ಬಿ’ ಫಾರ್ಮ್ ಪಡೆದು  ಸದಸ್ಯನಾಗಿ ಆಯ್ಕೆಗೊಂಡ ಶಾಂತವೀರ ಮನಗೂಳಿ ಅವರನ್ನು ಅಧ್ಯಕ್ಷರಾಗಿ ಮಾಡಿದ್ದು ಷಡ್ಯಂತ್ರ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಿರುವ ಶಾಸಕರು, ಮೂಲ ಕಾಂಗ್ರೆಸ್ಸಿಗರನ್ನು ತುಳಿಯುತ್ತಲೇ ಇದ್ದಾರೆ. ವಿವಿಧ ನೇಮಕದಲ್ಲಿ ಕಡೆಗಣಿಸುತ್ತಿದ್ದಾರೆ. ಈ ಅನ್ಯಾಯದ ವಿರುದ್ದ ಹೋರಾಟ ಮಾಡಲು ರಾಜಕಾರಣದಲ್ಲಿ ಸಕ್ರಿಯನಾಗುವೆ’ ಎಂದರು.

ADVERTISEMENT

‘ಪುರಸಭೆಯಬಹುತೇಕ ಸದಸ್ಯರು ನನ್ನ ಬೆಂಬಲಕ್ಕೆ ಇದ್ದರು. ಮುಂಬರುವ ಪುರಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಭಯ ಅವರನ್ನು ಕಾಡಿದೆ. ರಾಜಕೀಯವಾಗಿ ನನ್ನನ್ನು ತುಳಿಯುವುದೇ ಅವರ ಉದ್ದೇಶವಾಗಿತ್ತು. ಅಭಿವೃದ್ಧಿಗೆ ಸಹಕರಿಸದೇ ಪುರಸಭೆ ಅನುದಾನವನ್ನು ಬೇರೆ ಕಾಮಗಾರಿಗೆ ವರ್ಗಾಯಿಸಿಕೊಂಡಿದ್ದಾರೆ. ಆರು ತಿಂಗಳು ಶಾಸಕರು ಮತ್ತು ಅವರ ಸಹೋದರ ನನಗೆ ಕಿರುಕುಳ ನೀಡುತ್ತಲೇ ಬಂದಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಯೋಗಪ್ಪಗೌಡ ಪಾಟೀಲ ಮಾತನಾಡಿ, ‘ಶಾಂತವೀರ ಬಿರಾದಾರ ಅವರಿಗೆ ಶಾಸಕರು ಮಾಡಿದ ಅನ್ಯಾಯದ ಕುರಿತು ಕಾಂಗ್ರೆಸ್ ವರಿಷ್ಠರ ಗಮನಕ್ಕೆ ತರುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.