ADVERTISEMENT

ಸಮಾಜವಾದ, ಜಾತ್ಯತೀತ ಆತಂಕಕಾರಿ ಪದಗಳಲ್ಲ: ಮಾಜಿ ಶಾಸಕ ಪ್ರೊ.ರಾಜು

ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:03 IST
Last Updated 28 ಜೂನ್ 2025, 16:03 IST
ಪ್ರೊ.ರಾಜು ಆಲಗೂರ
ಪ್ರೊ.ರಾಜು ಆಲಗೂರ   

ವಿಜಯಪುರ: ‘ಸಮಾಜವಾದ, ಜಾತ್ಯತೀತ ಎಂಬ ಪದಗಳು ದೇಶಕ್ಕೆ ಆತಂಕಕಾರಿಯಲ್ಲ; ಇಡೀ ಸಮಾಜವನ್ನು ಜೋಡಿಸುವ ಪದಗಳಾಗಿವೆ’ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಸಂವಿಧಾನದ ಪೀಠಿಕೆಯಿಂದ ಸಮಾಜವಾದ, ಜಾತ್ಯತೀತ ಪದಗಳ ತೆಗೆಯಬೇಕು ಎಂದು ಹೇಳಿರುವುದರ ಹಿಂದಿನ ಉದ್ದೇಶ ಡಾ.ಬಿ.ಆರ್‌.ಅಂಬೇಡ್ಕರ್‌ ರಚಿತ ಸಂವಿಧಾನ ತೆಗೆದು, ಮನುಸ್ಮತಿಯನ್ನು ಜಾರಿಗೊಳಿಸುವುದಾಗಿದೆ’ ಎಂದು ಆರೋಪಿಸಿದರು.

‘ಆರ್.ಎಸ್ ಎಸ್, ಜನಸಂಘ ಹೊರತು ಪಡಿಸಿ ಈ ದೇಶದಲ್ಲಿ ಯಾರಿಗೂ ಸಮಾಜವಾದ, ಜಾತ್ಯತೀತ ಪದಗಳ ಬಗ್ಗೆ ಆಕ್ಷೇಪ ಇಲ್ಲ, ಸಮಗ್ರ ಭಾರತದ ದೃಷ್ಟಿಯಿಂದ ಈ ಪದಗಳು ಅಗತ್ಯ’ ಎಂದು ಹೇಳಿದರು.

ADVERTISEMENT

‘ಈ ಹಿಂದೆ ಬಿಜೆಪಿ, ಸಂಘ ಪರಿವಾರದವರು ರಾಮಲೀಲಾ ಮೈದಾನದಲ್ಲಿ ಸಂವಿಧಾನ ಪ್ರತಿ ಸುಟ್ಟು ಹಾಕಿದ್ದರು, ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ್ದರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದರು. ಇದನೆಲ್ಲ ಗಮನಿಸಿದರೆ ಸಂವಿಧಾನದ ಮೇಲೆ ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ಗೌರವ ಇಲ್ಲ, ಸಂವಿಧಾನದ ತತ್ವ, ಸಿದ್ಧಾಂತದ ಮೇಲೆ ನಂಬಿಕೆ ಇಲ್ಲ ಎಂಬುದು ಸಾಬೀತಾಗಿದೆ’ಎಂದರು. 

‘ದಲಿತರಿಗೆ, ಹಿಂದುಳಿದವರಿಗೆ ಸಮಾನತೆ ನೀಡಬಾರದು ಎಂಬುದು ಅವರ ಉದ್ದೇಶವಾಗಿದೆ, ದೇಶದ ಸಂಪತ್ತು ಸರ್ವ ಸಮಾಜಗಳಿಗೆ ಹಂಚಿಕೆಯಾಗಬಾರದು ಎಂಬುದು ಅವರ ಉದ್ದೇವಾಗಿದೆ. ಜಾತಿವಾದಿಗಳು, ಕೋಮುವಾದಿಗಳು, ಬ್ರಾಹ್ಮಣ್ಯಶಾಹಿಗಳು ಸಂವಿಧಾನ ಬುಡಮೇಲು ಮಾಡಲು ದುಷ್ಠ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಸಮಾಜವಾದ ಸಿದ್ಧಾಂತ, ಜಾತ್ಯತೀತ ತತ್ವದ ಬಗ್ಗೆ ಬಿಜೆಪಿ, ಆರ್‌ಎಸ್ಎಸ್ ಮೊದಲಿನಿಂದಲೂ ವಿರೋಧ ಇದೆ. ಆದ ಕಾರಣಕ್ಕೆ ಇಂದಿರಾ ಗಾಂಧಿ ಅವರು ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಪದಗಳನ್ನು ಸೇರಿಸಿದರು. ಸಂವಿಧಾನ ರಚನಾ ಕರಡನ್ನು ಬಿಜೆಪಿ, ಆರ್‌ಎಸ್ಎಸ್‌ನವರು ಮೊದಲು ಓದಿ ತಿಳಿಯಬೇಕು’ ಎಂದರು.

‘ಸಮಾಜವಾದ, ಜಾತ್ಯತೀತ ಪದ ತೆಗೆಯಬೇಕೆಂಬ ಆರ್‌ಎಸ್‌ಎಸ್‌ ನಿಲುವಿನ ಬಗ್ಗೆ ಕಾಂಗ್ರೆಸ್‌ನ ಸಚಿವರು,ಶಾಸಕರು ಮೌನ ವಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮನುವಾದಿ, ಜಾತಿವಾದಿ ಮನಸ್ಥಿತಿಯವರು ಕಾಂಗ್ರೆಸ್‌ನಲ್ಲೂ ಇದ್ದಾರೆ’ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉದಾಹರಿಸಿದರು’ ಎಂದರು.

‘ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಯಾವುದೇ ತಾತ್ವಿಕ ಸಿದ್ಧಾಂತದ ಮೇಲೆ ರಾಜಕೀಯಕ್ಕೆ ಬಂದಿಲ್ಲ, ಅವಕಾಶವಾದಿ ರಾಜಕಾರಣಿ, ಅವರಿಗೆ ಯಾವುದೇ ಚಿಂತನೆ ಇಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ  ಗಂಗಾಧರ ಸಂಬಣ್ಣಿ, ಪ್ರಧಾನ ಕಾರ್ಯದರ್ಶಿ ಎಂ.ವೈ. ಯಂಕಂಚಿ, ವಸಂತ ಹೊನಮೊಡೆ, ಸುರೇಶ ಘೋಣಸಗಿ, ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಅಧ್ಯಕ್ಷ ಸಾಹೇಬ ಗೌಡ ಬಿರಾದಾರ, ಮುಖಂಡರಾದ ತಮ್ಮಣ್ಣ ಮೇಲಿನಕೇರಿ, ಶಾಂತಪ್ಪ ಶಹಾಪುರ, ದಿಲೀಪ ಪ್ರಭಾಕರ ಇದ್ದರು.

ಆರ್‌ಎಸ್ಎಸ್ ಬಿಜೆಪಿಯವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಆಕ್ರೋಶ ಇದೆ. ಬಿಜೆಪಿಯಲ್ಲಿ ಇರುವ ದಲಿತ ನಾಯಕರಿಗೆ ಕಿಂಚಿತ್ತು ಸ್ವಾಭಿಮಾನ ಇದ್ದರೆ  ಈ ಕ್ಷಣವೇ ಬಿಜೆಪಿ ತೊರೆದು ಬರಬೇಕು

- ಪ್ರೊ.ರಾಜು ಆಲಗೂರ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.