
ಸೋಲಾಪುರ: ಪ್ರಯಾಣಿಕರು ಮತ್ತು ನಾಗರಿಕರಿಂದ ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ಪ್ರತಾಪ ಸರನಾಯ್ಕ್ ಶನಿವಾರ ಆಕಸ್ಮಿಕ ಭೇಟಿ ನೀಡಿ ಶೌಚಾಲಯ ಪರಿಶೀಲಿಸಿ, ಅಲ್ಲಿರುವ ಅಸ್ವಚ್ಛತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಬಂಧಿತ ಡಿಪೊ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ಶೌಚಾಲಯವನ್ನು ನೋಡಿಕೊಳ್ಳುತ್ತಿರುವ ಖಾಸಗಿ ಸಂಸ್ಥೆ ಮಹಿಳಾ ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯ ಮಹಿಳೆಯರು ಸಚಿವರಿಗೆ ನೇರವಾಗಿ ತಿಳಿಸಿದರು. ಈ ಬಗ್ಗೆ ಡಿಪೊ ವ್ಯವಸ್ಥಾಪಕ ಮತ್ತು ಸಾರಿಗೆ ನಿಯಂತ್ರಕರಿಂದ ತೃಪ್ತಿಕರ ಉತ್ತರ ದೊರಕದೇ ಇದ್ದುದರಿಂದ, ಸಚಿವರು ತಕ್ಷಣವೇ ಸಂಬಂಧಿತ ಮೇಲಧಿಕಾರಿಗಳಿಗೆ ಡಿಪೊ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ನಿರ್ದೇಶಿಸಿದರು.
ನಾಲ್ಕು ದಿನಗಳೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.
ಮುಂದಿನ ಪರಿಶೀಲನಾ ಭೇಟಿಯಲ್ಲಿಯೂ ಇದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿತ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.