ಸೋಲಾಪುರ: ಈ ವರ್ಷ ಗಣೇಶೋತ್ಸವದಲ್ಲಿ ಭಕ್ತರು ಎರಡು ಒಳ್ಳೆಯ ವಿಷಯದಲ್ಲಿ ಒಪ್ಪಿಕೊಂಡಿದ್ದಾರೆ. ಒಂದು ಡಿಜೆ ಮುಕ್ತ ಮೆರವಣಿಗೆ ಹಾಗೂ ಎರಡನೆಯದು ಆಜೋಬಾ ಗಣಪತಿಯ ಮೆರವಣಿಗೆ ರಾತ್ರಿ 12ರ ಒಳಗೆ ಸಮಾರೋಪ ಮಾಡುವುದು.
ಡಿಜೆ ಮುಕ್ತ ಮೆರವಣಿಗೆಯ ಘೋಷಣೆಯಾಗುತ್ತಿದ್ದಂತೆ ನಗರದಲ್ಲಿ ಏಳು ಮಧ್ಯವರ್ತಿ ಮಹಾಮಂಡಲಗಳ ಮೆರವಣಿಗೆ ಮಧ್ಯದಲ್ಲಿ ಡೊಳ್ಳು -ಕಂಸಾಳೆ ವಾದ್ಯಗಳ ಮೇಲೆ ಲೆಜಿಮ್ ನೃತ್ಯ ದೊಂದಿಗೆ ನಗರದಲ್ಲಿ ಸುಮಾರು 25 ಸಾವಿರ ತರುಣ- ತರುಣಿಯರು ಪ್ರದರ್ಶನ ಮಾಡಿದರು.
ನಗರದಲ್ಲಿ ಒಟ್ಟು 1200 ಸಾರ್ವಜನಿಕ ಮಂಡಲಗಳು ಗಣೇಶನ ಪ್ರತಿಷ್ಠಾಪನೆ ಮಾಡಿದ್ದಾರೆ. ಇವುಗಳ ಪೈಕಿ 350 ಮಂಡಲಗಳು ಮಧ್ಯವರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಹಳಷ್ಟು ಗಣೇಶ ಮಂಡಲಗಳು ಡೊಳ್ಳು- ಕಂಸಾಳೆ ವಾದ್ಯ ಗಳ ಮೇಲೆ ಲೆಜಿಮ್ ನೃತ್ಯ ಪ್ರದರ್ಶನ ಮಾಡುವ ನಿರ್ಣಯವನ್ನು ತೆಗೆದುಕೊಂಡಿದ್ದರು.
11 ಸ್ಥಳಗಳಲ್ಲಿ ವಿಸರ್ಜನೆಗಾಗಿ ಕುಂಡಗಳ ಸ್ಥಾಪನೆ: ಗಣೇಶ ವಿಸರ್ಜನೆಗಾಗಿ ಮಹಾನಗರ ಪಾಲಿಕೆ 11 ಸ್ಥಳಗಳಲ್ಲಿ ಕೃತಕ ಕುಂಡಗಳನ್ನು ಸ್ಥಾಪನೆ ಮಾಡಲಾಗಿದೆ.79 ಸ್ಥಳಗಳಲ್ಲಿ ಮೂರ್ತಿಗಳ ಸಂಗ್ರಹಣೆ ಸೌಲಭ್ಯ ಮಾಡಲಾಗಿತ್ತು. ಗಣಪತಿ ಘಾಟ್, ವಿಷ್ಣು ಘಾಟ್ ಮಾಡಾ ಭಾವಿ ವಿಡಿ ಘರಕುಲ, ಹಿಪ್ಪರಗಾ ಖಣಿ, ಎಂಐಡಿಸಿ ಪ್ರಿಸಿಜನ್ ಹತ್ತಿರ, ಕಂಬರ ತಲಾವ, ರಾಮಲಿಂಗ ಸೊಸೈಟಿ, ಕೊಯ್ನಾ ನಗರ, ದೇಗಾವ, ಸುಭಾಷ ಉದ್ಯಾನ, ಮಾರ್ಕಂಡೇಯ ಉದ್ಯಾನ ಈ 11 ಕುಂಡಗಳ ಸ್ಥಳಗಳಲ್ಲಿ 60 ಜೀವ ರಕ್ಷಕರು ಮೂರು ಶಿಫ್ಟ್ ಗಳ ಮಧ್ಯೆ ಕೆಲಸ ಮಾಡಿದರು. ಮೆರವಣಿಗೆ ಮಾರ್ಗದಲ್ಲಿ ತಗ್ಗುಗಳನ್ನು ಮುಚ್ಚಿ ಮಹಾನಗರ ಪಾಲಿಕೆ ಭಕ್ತರಿಗೆ ಅಡೆತಡೆಯಾಗದಂತೆ ವ್ಯವಸ್ಥೆ ಮಾಡಿದರು.
ಪೊಲೀಸ್ ಆಯುಕ್ತರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾವಿರಾರು ಪೊಲೀಸ್ ಸಿಬ್ಬಂದಿಗಳನ್ನು ಬಂದೊ ಬಸ್ತ್ ವ್ಯವಸ್ಥೆಗಾಗಿ ನೇಮಕ ಮಾಡಿದ್ದರು. ಮೆರವಣಿಗೆ ಮೇಲೆ ಕಣ್ಗಾವಲು ಇರಿಸಲು ಚೌಕಗಳಲ್ಲಿ ಸಿಸಿಟಿವಿ ಕ್ಯಾಮೆರಾ ಗಳನ್ನು ಇರಿಸಲಾಗಿತ್ತು.
ಭಕ್ತರ ಸುರಕ್ಷತೆಗಾಗಿ ಮಹಾನಗರ ಪಾಲಿಕೆ, ವಿದ್ಯುತ್ ಮಹಾವಿತರಣೆ, ಪೋಲಿಸ್ ಆಡಳಿತ, ಜಿಲ್ಲಾ ಆಡಳಿತ ವ್ಯವಸ್ಥಿತ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಂಡಿತು. ನಗರದಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ನಿಷೇಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.