ADVERTISEMENT

ವಿಜಯಪುರ | ಒಂದೆಡೆ ಮೌಢ್ಯ; ಇನ್ನೊಂದೆಡೆ ಉತ್ಸಾಹ

ಸಂಘ–ಸಂಸ್ಥೆಗಳ ನೇತೃತ್ವ; ‘ಕಂಕಣ’ ಸೂರ್ಯ ಗ್ರಹಣ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 16:48 IST
Last Updated 26 ಡಿಸೆಂಬರ್ 2019, 16:48 IST
ವಿಜಯಪುರದಲ್ಲಿ ಗುರುವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಸಲಾಗಿತ್ತು
ವಿಜಯಪುರದಲ್ಲಿ ಗುರುವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಸಲಾಗಿತ್ತು   

ವಿಜಯಪುರ: ಮೌಢ್ಯ, ಮೂಢ ನಂಬಿಕೆಗಳ ನಡುವೆಯೇ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಸಂಘ–ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು ಸೇರಿದಂತೆ ಅನೇಕರು ಗುರುವಾರ ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಿಸಿದರು.

ಗ್ರಹಣದ ಹಿನ್ನೆಲೆಯಲ್ಲಿ ಬೆಳಿಗ್ಗೆ 8 ರಿಂದ 11.30 ಗಂಟೆಯವರೆಗೆ ನಗರದ ಪ್ರಮುಖ ವೃತ್ತ, ರಸ್ತೆಗಳು, ಬಡಾವಣೆಗಳ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ರಸ್ತೆಗಳು ಬಿಕೋ ಎನ್ನುತ್ತಿರುವುದು ಕಂಡು ಬಂತು. ಅನೇಕರು ಗ್ರಹಣ ಮುಗಿದ ಬಳಿಕವೇ ಅಂಗಡಿ–ಮುಂಗಟ್ಟುಗಳನ್ನು ತೆರೆದರು. ಹೋಟೆಲ್‌ಗಳೂ ಖಾಲಿಯಾಗಿದ್ದವು.

ಗ್ರಹಣ ಮುಕ್ತಾಯವಾದ ಬಳಿಕ ಜನರು ರಸ್ತೆಗೆ ಬಂದರು. ಅನೇಕರು ತಮ್ಮ ಮನೆಗಳಲ್ಲಿದ್ದ ನೀರನ್ನು ಚೆಲ್ಲಿ, ಬೇರೆ ನೀರನ್ನು ಸಂಗ್ರಹಿಸಿದರು. ಗರ್ಭಿಣಿಯರು, ಬಾಣಂತಿಯರು ಆಸ್ಪತ್ರೆ ಮತ್ತು ಮನೆಯಿಂದ ಹೊರಬರಲಿಲ್ಲ.

ದೇವಸ್ಥಾನಗಳಿಗೆ ಬೀಗ: ಗ್ರಹಣದ ಹಿನ್ನೆಲೆಯಲ್ಲಿ ಸಿದ್ಧೇಶ್ವರ ದೇವಸ್ಥಾನ, ಕಪಿಲೇಶ್ವರ ದೇವಾಲಯ, ನೀಲಕಂಠೇಶ್ವರ ದೇವಾಲಯ, 770 ಲಿಂಗದ ದೇವಸ್ಥಾನಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು. ಗ್ರಹಣ ಮುಕ್ತಾಯದ ಬಳಿಕ ವಿಶೇಷ ಪೂಜೆ ಸಲ್ಲಿಸಿ, ಬಾಗಿಲು ತೆರೆದು, ಎಂದಿನಂತೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ADVERTISEMENT

ಸಾರ್ವಜನಿಕರಿಗೆ ಅವಕಾಶ: ಸಾರ್ವಜನಿಕ ಶಿಕ್ಷಣ ಇಲಾಖೆ, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್, ಗಣಿತ ಮತ್ತು ವಿಜ್ಞಾನ ಪರಿವೀಕ್ಷಕ ಎಂ.ಎಸ್.ಬ್ಯಾಹಟ್ಟಿ, ನಿವೃತ್ತ ಪ್ರಾಚಾರ್ಯ ಡಾ.ಬಿ.ಜಿ.ಮಠ ಅವರು ಗ್ರಹಣದ ಕುರಿತು ಮಾಹಿತಿ ನೀಡಿದರು.

ಕೆಜೆವಿಎಸ್‌ ಸಹ ಕಾರ್ಯದರ್ಶಿ ರಾಘವೇಂದ್ರ ಮಿಸಾಳೆ, ಕೆಆರ್‌ವಿಪಿ ಸಂಚಾಲಕ ಶ್ರೀರಾಮ್ ಭಟ್, ಜಿಲ್ಲಾ ವಿಜ್ಞಾನ ಕೇಂದ್ರದ ನಾಗರಾಜ ಮಂಡೆಕಾರ, ಚಂದ್ರಶೇಖರ ಆಣಮಿ ಅವರು ಗ್ರಹಣ ವೀಕ್ಷಣೆಗೆ ಮಾರ್ಗದರ್ಶನ ಮಾಡಿದರು.

ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಗೀತಾ ಪಾಟೀಲ, ಜಿಲ್ಲಾ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಸುಮಾ ಚೌಧರಿ ಇದ್ದರು.

ಬಾಳೆ ಹಣ್ಣು ಸೇವನೆ: ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಬ್ರೇಕ್ ಥ್ರೂ ಸೈನ್ಸ್‌ ಸೊಸೈಟಿ ವತಿಯಿಂದ ಬಾಳೆ ಹಣ್ಣುಗಳನ್ನು ಸೇವಿಸುವ ಮೂಲಕ ಸೂರ್ಯ ಗ್ರಹಣವನ್ನು ವೀಕ್ಷಿಸಲಾಯಿತು.

ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸನ್‌ ಫಿಲ್ಟರ್‌ ಮೂಲಕ ಕಂಕಣ ಸೂರ್ಯ ಗ್ರಹಣವನ್ನು ಕಣ್ತುಂಬಿಕೊಂಡರು.

ಸೊಸೈಟಿ ಸಂಚಾಲಕ ಶರತ್ ಕೆ.ಪಿ. ಮಾತನಾಡಿ, ನಗರದ ಜೊತೆಗೆ ಈ ಬಾರಿ ಬಬಲೇಶ್ವರ, ನಿಡೋಣಿಯಂತಹ ಗ್ರಾಮೀಣ ಶಾಲೆಗಳಲ್ಲಿ ಪ್ರಾತ್ಯಕ್ಷಿಕೆ ಹಾಗೂ ಗ್ರಹಣ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು’ ಎಂದರು. ಶಿಕ್ಷಕ ನಟರಾಜ ಕುಂಬಾರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.