
ವಿಜಯಪುರ: ‘ಒತ್ತಡದ ಜೀವನ ಶೈಲಿಯಲ್ಲಿ ಕ್ರೀಡೆ ಅತ್ಯಮೂಲ್ಯ ಪರಿಹಾರ ಸಾಧನ. ಸದೃಢ ಆರೋಗ್ಯ ಹೊಂದಿ ಕ್ರೀಯಾಶೀಲತೆ ಮೈಗೂಡಿಸಿಕೊಂಡು ನೆಮ್ಮದಿ ಹಾಗೂ ಉಲ್ಲಸಿತವಾಗಿರಲು ಆಟೋಟ ಹಾಗೂ ಸಾಂಸ್ಕೃತಿಕವಾಗಿ ತೊಡಗಿಕೊಳ್ಳುವುದು ಅಗತ್ಯ’ ಎಂದು ಮೇಯರ್ ಎಂ.ಎಸ್. ಕರಡಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ವಿಜಯಪುರ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ್ ಮಾತನಾಡಿ, ‘ಚೈತನ್ಯದಿಂದರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ದೈನಂದಿನ ಬದುಕಿನ ಜೀವನ ಶೈಲಿಯಾಗಿಸಿಕೊಳ್ಳಬೇಕು’ ಎಂದು ಹೇಳಿದರು.
‘ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಲು ನಮ್ಮ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಆರೋಗ್ಯ ಕಾಳಜಿ ಬಗ್ಗೆಯೂ ನಿಗಾ ವಹಿಸಬೇಕು. ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮಾತನಾಡಿ, ‘ಕ್ರೀಡೆ ನಮ್ಮ ಆರೋಗ್ಯ ಹಾಗೂ ಆಲೋಚನಾ ಮಟ್ಟ ಹೆಚ್ಚಿಸುವಲ್ಲಿ ಹಾಗೂ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ಸಮರ್ಪಣೆ ಹಾಗೂ ತಾಳ್ಮೆಯ ಮೌಲ್ಯ ಕಲಿಸಿಕೊಡುವಲ್ಲಿ ಪಾತ್ರ ಬಹುಮುಖ್ಯ’ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಅಡಿವೆಪ್ಪ ಸಾಲಗಲ್, ಜಾವೀದ್ ಜಮಾದಾರ ಇದ್ದರು.
ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಜೊತೆಗೆ ಸಂವಹನ ಕೌಶಲ ವೃದ್ಧಿಯಾಗುತ್ತದೆ
-ರಿಷಿ ಆನಂದ್ ಜಿ.ಪಂ. ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.