ವಿಜಯಪುರ: ಶ್ರೀ ಸಿದ್ದೇಶ್ವರ ಬ್ಯಾಂಕ್ ಸರ್ವತೋಮುಖ ಪ್ರಗತಿ ದೃಷ್ಟಿಕೋನದಿಂದ ಹಾಲಿ ಇರುವ ಪೆನಲ್ ನಿರ್ದೇಶಕರನ್ನೇ ಮರು ಆಯ್ಕೆ ಮಾಡಬೇಕು, ಈ ಬ್ಯಾಂಕ್ ಷೆಡ್ಯೂಲ್ಡ್ ಬ್ಯಾಂಕ್ ಆಗಿಸುವ ಕಾರ್ಯಕ್ಕೆ ನಾನು ಸಹ ಬೆಂಬಲವಾಗಿ ನಿಲ್ಲುವೆ ಎಂದು ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ನಗರದ ಶ್ರೀ ಗುರುಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಂಗವಾಗಿ ಸಹಕಾರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಸೇರಿದಂತೆ ಎಲ್ಲರೂ ಇರುವ ಶ್ರೀ ಸಿದ್ದೇಶ್ವರ ಬ್ಯಾಂಕ್ ಜಾತ್ಯತೀತ ಬ್ಯಾಂಕ್, ಈ ಹಿಂದೆ ಪ್ರಯತ್ನ ಪಟ್ಟರೆ ಎಂಎಲ್ಎ ಟಿಕೆಟ್ ಸಿಗುತ್ತಿತ್ತು.ಆದರೆ, ಶ್ರೀ ಸಿದ್ದೇಶ್ವರ ಬ್ಯಾಂಕ್ ಸದಸ್ಯತ್ವ ಸಿಗುತ್ತಿರಲಿಲ್ಲ, ನಾನು ಸಹ ಬ್ಯಾಂಕಿನ ಸದಸ್ಯ, ಇದು ನನಗೆ ಹೆಮ್ಮೆಯ ಸಂಗತಿ ಎಂದರು.
ಪ್ಯಾನೆಲ್ ಸದಸ್ಯರು ತಂಡದ ಎಲ್ಲ ಸದಸ್ಯರ ಗೆಲುವಿಗೆ ಮತಯಾಚಿಸಬೇಕೇ ಹೊರತು ವೈಯಕ್ತಿಕ ಗೆಲುವು ಮಾತ್ರ ನೋಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜಿಲ್ಲೆಯ ವ್ಯಾಪಾರಸ್ಥರ ಆರ್ಥಿಕ ಜೀವನಾಡಿಯಾಗಿರುವ ಶ್ರೀ ಸಿದ್ದೇಶ್ವರ ಬ್ಯಾಂಕ್ ಈ ಹಿಂದೆ ಅನೇಕ ಅಡೆತಡೆ ಎದುರಿಸಿದರೂ ಅವುಗಳನ್ನು ಸಮರ್ಥವಾಗಿ ಎದುರಿಸಿ ಫೈನಾನ್ಸ್, ವಿವಿಧ ಆರ್ಥಿಕ ಸಂಸ್ಥೆಗಳಿಗೆ ಉತ್ತಮ ಸ್ಪರ್ಧೆ ನೀಡುತ್ತಿದೆ. ಈ ಬ್ಯಾಂಕ್ ಅಜರಾಮರ, ಎಲ್ಲ ಬ್ಯಾಂಕುಗಳಿಗೆ ಈ ಬ್ಯಾಂಕ್ ಹಿರಿಯಣ್ಣ ಎಂದರು.
ಶ್ರೀ ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ರಮೇಶ ಬಿದನೂರ ಮಾತನಾಡಿ, ಬ್ಯಾಂಕ್ ಅನ್ನು ಷೆಡ್ಯೂಲ್ಡ್ ಬ್ಯಾಂಕ್ ಆಗಿಸುವ ಸಂಕಲ್ಪ ಈಡೇರಿಸಲು ದುಡಿಯುವ ಬಂಡವಾಳವನ್ನು ₹1 ಸಾವಿರ ಕೋಟಿಗೆ ಏರಿಕೆ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು, ಹಾಲಿ ಇರುವ ಪೆನಲ್ ನಿರ್ದೇಶಕರನ್ನೇ ಮರು ಆಯ್ಕೆ ಮಾಡಿ ಮತ್ತೊಮ್ಮೆ ಸೇವೆ ಅವಕಾಶ ನೀಡಬೇಕು ಎಂದರು.
ಕಲಬುರ್ಗಿ, ಬೆಳಗಾವಿ ಸೇರಿದಂತೆ ಹೊರ ಜಿಲ್ಲೆಗಳಲ್ಲೂ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.
ಮುಖಂಡರಾದ ಮಲ್ಲಿಕಾರ್ಜುನ ಲೋಣಿ, ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ವಿ.ಸಿ.ನಾಗಠಾಣ, ಸುರೇಶ ಗಚ್ಚಿನಕಟ್ಟಿ, ಶ್ರೀಕಾಂತ ಶಿರಾಡೋಣ, ರಾಜಶೇಖರ ಮಗಿಮಠ, ಶ್ರೀಹರ್ಷಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ರವೀಂದ್ರ ಬಿಜ್ಜರಗಿ, ಪ್ರಕಾಶ ಬಗಲಿ, ಗುರು ಗಚ್ಚಿನಮಠ, ವೈಜನಾಥ ಕರ್ಪೂರಮಠ, ಭೌರಮ್ಮ ಗೊಬ್ಬೂರ, ಸೌಮ್ಯಾ ಭೋಗಶೆಟ್ಟಿ, ವಿರೇಶ ಮುದುಕಾಮಠ ಉಪಸ್ಥಿತರಿದ್ದರು.
ಸಹಕಾರ ರಂಗದಲ್ಲಿ ಚುನಾವಣೆ ಆಗಬಾರದು ಸಾಮರಸ್ಯದಿಂದ ಆಯ್ಕೆಯಾಗಬೇಕು ಎನ್ನುವುದು ನನ್ನ ಭಾವನೆ. ಅವಿರೋಧವಾಗಿ ಆಯ್ಕೆ ಬಗ್ಗೆ ಅನೇಕ ರೀತಿ ಶ್ರಮಿಸಿದೆ ಅದು ಸಾಧ್ಯವಾಗಲಿಲ್ಲ ಈಗ ಚುನಾವಣೆ ಕಣ ಸಿದ್ದವಾಗಿದೆ-ಶಿವಾನಂದ ಪಾಟೀಲಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.