ADVERTISEMENT

ಸೂಫಿಯಾನ್ ಬದುಕಿಗೆ ‘ರೇಷ್ಮೆ’ ಹೊಳಪು

ಕಡಿಮೆ ಪ್ರದೇಶ, ಕಡಿಮೆ ವೆಚ್ಚ, ಹೆಚ್ಚು ಆದಾಯ

ಬಸವರಾಜ ಎಸ್.ಉಳ್ಳಾಗಡ್ಡಿ
Published 18 ನವೆಂಬರ್ 2019, 19:45 IST
Last Updated 18 ನವೆಂಬರ್ 2019, 19:45 IST
ಕೊಲ್ಹಾರದ ತಮ್ಮ ಜಮೀನಿನಲ್ಲಿರುವ ಹಿಪ್ಪು ನೇರಳೆ ಬೆಳೆ ಮಧ್ಯೆ ನಿಂತಿರುವ ಸೂಫಿಯಾನ್ ಕಂಕರಪೀರ್
ಕೊಲ್ಹಾರದ ತಮ್ಮ ಜಮೀನಿನಲ್ಲಿರುವ ಹಿಪ್ಪು ನೇರಳೆ ಬೆಳೆ ಮಧ್ಯೆ ನಿಂತಿರುವ ಸೂಫಿಯಾನ್ ಕಂಕರಪೀರ್   

ಕೊಲ್ಹಾರ: ಕಡಿಮೆ ಪ್ರದೇಶ ಹಾಗೂ ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ ನೀಡುವ ರೇಷ್ಮೆ ಬೆಳೆಯತ್ತ ಆಕರ್ಷಿತರಾಗಿ, ಮೂರು ವರ್ಷಗಳಿಂದ ತಿಂಗಳಿಗೆ ಸುಮಾರು ₹60-70 ಸಾವಿರ ಆದಾಯ ಗಳಿಸಿಕೊಳ್ಳುವ ಮೂಲಕ ಯುವ ರೈತ ಸೂಫಿಯಾನ್ ರೇಷ್ಮೆ ಕೃಷಿಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

ಕೊಲ್ಹಾರದ ನಿವಾಸಿ ಸೂಫಿಯಾನ್ ಝಾಕೀರಹುಸೇನ್ ಕಂಕರಪೀರ್ ಓದಿದ್ದು 10 ನೇ ತರಗತಿ. ತಂದೆಯೊಂದಿಗೆ ಜೆಸಿಬಿ ಹಾಗೂ ಹಿಟಾಚಿ ಆಪರೇಟರ್ ಆಗಿದ್ದ ಇವರು ಪಟ್ಟಣ ಹೊರವಲಯದಲ್ಲಿರುವ ತಮ್ಮ 4 ಎಕರೆ ಜಮೀನಿನಲ್ಲಿ ಬದುಕು ರೂಪಿಸಿಕೊಳ್ಳಲು ಮುಂದಾದರು. ರೇಷ್ಮೆ ಹುಳು ಸಾಕಾಣಿಕೆ ಬಗ್ಗೆ ಆಸಕ್ತರಾಗಿ ಸ್ಥಳೀಯ ರೇಷ್ಮೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೇಷ್ಮೆ ಹುಳು ಸಾಕಾಣಿಕೆ ಪ್ರಾರಂಭಿಸಿದರು. ಮೊದಲು ಒಂದು ವರ್ಷ ರೇಷ್ಮೆ ಹುಳು ಸಾಕಾಣಿಕೆ ಬಗ್ಗೆ ಅಧಿಕಾರಿಗಳಿಂದ ಹಾಗೂ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ರೇಷ್ಮೆ ಹುಳುಗಳಿಗೆ ಹಿಪ್ಪು ನೇರಳೆ ತಪ್ಪಲು ಆಹಾರವೇ ಆಧಾರ. ಅದನ್ನು ಬೆಳೆಯಲು ₹40-50 ಸಾವಿರ ವೆಚ್ಚದಲ್ಲಿ ಹಿಪ್ಪು ನೇರಳೆ ಬೆಳೆದರು. ಇದು 20 ವರ್ಷಗಳವರೆಗೂ ತಪ್ಪಲು ನೀಡುತ್ತದೆ. ಯಾವುದೇ ಔಷಧಿ ಗೊಬ್ಬರ ಹಾಕಬೇಕಾಗಿಲ್ಲ. ನಂತರ ₹1.5 ಲಕ್ಷ ವೆಚ್ಚದಲ್ಲಿ 20X50 ಅಳತೆಯಲ್ಲಿ 12 ಅಡಿ ಎತ್ತರದ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಿದರು.

ADVERTISEMENT

ಸ್ಥಳೀಯ ಬಸವನಬಾಗೇವಾಡಿ, ಗದ್ಯಾಳ, ಬಬಲೇಶ್ವರದಿಂದ ರೇಷ್ಮೆ ಹುಳುಗಳನ್ನು ತಂದು ಸಾಕಿದರು. 28 ರಿಂದ 30 ದಿನದ ಅವಧಿಯಲ್ಲಿ ಮುಗಿಯುವ ರೇಷ್ಮೆಹುಳು ಜೀವನ ಚಕ್ರ, ಹುಳುಗಳಿಗೆ 4ನೇ ದಿನ ಹಾಗೂ 8 ನೇ ದಿನದ ಅವಧಿಯಲ್ಲಿ ಎರಡು ಜ್ವರ ಬರುತ್ತವೆ. ಜ್ವರದ ದಿನ 36 ಗಂಟೆಗಳವರೆಗೆ ಹುಳುಗಳಿಗೆ ತಪ್ಪಲು ಹಾಕುವಂತಿಲ್ಲ. ಜ್ವರದ ಅವಧಿ ಮುಗಿದ 5 ದಿನಗಳ ನಂತರ 6 ದಿನಗಳವರೆಗೆ ತಪ್ಪಲು ತಿನ್ನುತ್ತವೆ. ಅಂದರೆ, 19ನೇ ದಿನಕ್ಕೆ ಹುಳುಗಳು ಗೂಡು ಕಟ್ಟಿಕೊಳ್ಳಲು ಚಂದ್ರಿಕೆಗಳನ್ನು ಇಡುತ್ತಾರೆ. ಚಂದ್ರಿಕೆಯಲ್ಲಿ ಗೂಡು ಕಟ್ಟಿದ 5 ದಿನಗಳ ನಂತರ ಗೂಡು ಬಿಡಿಸಿ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬರುತ್ತಾರೆ.

ಕಳೆದ ವಾರ 220 ಕೆ.ಜಿ ಮಾರಾಟ ಮಾಡಿದ್ದಾರೆ. ಕೆ.ಜಿಗೆ ₹360-400 ದರ ಸಿಕ್ಕಿದ್ದು, ಖರ್ಚು ಕಳೆದು ₹60-70 ಸಾವಿರ ಲಾಭ ಗಳಿಸಿದ್ದಾರೆ. ಈಗಿರುವ ರೇಷ್ಮೆ ಹುಳುವಿನ ಶೆಡ್ ಎರಡು ಎಕರೆ ಪ್ರದೇಶದ ತಪ್ಪಲು ಸಾಕಾಗುತ್ತದೆ. ಒಟ್ಟು ನಾಲ್ಕು ಎಕರೆ ಜಮೀನು ಇರುವುದರಿಂದ ಸೂಫಿಯಾನ್ ಇನ್ನೊಂದು ಶೆಡ್ ನಿರ್ಮಿಸಿ ತಮ್ಮ ಆದಾಯ ವೃದ್ಧಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ.

ಸಂಪರ್ಕ ಸಂಖ್ಯೆ: 85480 14544

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.