ADVERTISEMENT

ಗುಣಮಟ್ಟದ ಶಿಕ್ಷಣದ ‘ಸರ್ವಜ್ಞ’ ಶಾಲೆ

2004–05ರಲ್ಲಿ ಪ್ರಾರಂಭ; 1,300 ವಿದ್ಯಾರ್ಥಿಗಳು ದಾಖಲು

ಶರಣಬಸಪ್ಪ ಎಸ್‌.ಗಡೇದ
Published 7 ಡಿಸೆಂಬರ್ 2019, 9:48 IST
Last Updated 7 ಡಿಸೆಂಬರ್ 2019, 9:48 IST
ತಾಳಿಕೋಟೆ ಪಟ್ಟಣದಲ್ಲಿರುವ ಸರ್ವಜ್ಞ ಶಾಲೆ ಮುಂದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು
ತಾಳಿಕೋಟೆ ಪಟ್ಟಣದಲ್ಲಿರುವ ಸರ್ವಜ್ಞ ಶಾಲೆ ಮುಂದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು   

ತಾಳಿಕೋಟೆ: ಗ್ರಾಮೀಣ ಭಾಗದಲ್ಲಿ ಉತ್ಕೃಷ್ಟ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಹಿರಿದಾಸೆಯಿಂದ ಸ್ಥಾಪನೆಯಾದುದು ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆ.

2004-05ರಲ್ಲಿ ಬಾಡಿಗೆ ಕಟ್ಟಡದಲ್ಲಿ ಶಾಲೆ ಪ್ರಾರಂಭವಾದಾಗ ಇದ್ದದ್ದು ಕೇವಲ 23 ವಿದ್ಯಾರ್ಥಿಗಳು. ಈಗ 1,300 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆರಂಭದಲ್ಲಿ ಪ್ರಾಥಮಿಕ ವಿಭಾಗಕ್ಕೆ ಸೀಮಿತಗೊಂಡಿದ್ದ ಶಾಲೆಯು ಪಾಲಕರ ಒತ್ತಾಯದ ಮೇರೆಗೆ ಪ್ರೌಢಶಾಲೆಗೆ ವಿಸ್ತಾರಗೊಂಡಿತು. ನಂತರದ ಹಂತಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನೂ ಆರಂಭಿಸಲಾಗಿದೆ.

ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ 1ನೇ ವರ್ಗದಿಂದ 10ನೇ ವರ್ಗದವರೆಗೆ ಇರುವ ಈ ಶಾಲೆಯಲ್ಲಿ, ಸದ್ಯ ಕನ್ನಡ ಮಾಧ್ಯಮದಲ್ಲಿ 912 ಹಾಗೂ ಆಂಗ್ಲ ಮಾಧ್ಯಮದಲ್ಲಿ 384 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ADVERTISEMENT

ಪ್ರತಿ ವರ್ಷ 10 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಬಾಡಿಗೆ ಶಾಲಾ ಸ್ಥಳದಿಂದ ಸ್ವಂತವಾಗಿ 4 ಎಕರೆಯಲ್ಲಿ ಸುಂದರವಾದ ಮೂರಂತಸ್ತಿನ ಕಟ್ಟಡ ತಲೆಯೆತ್ತಿ ನಿಂತಿದೆ. ಇದಕ್ಕೆ ಸಂಸ್ಥೆಯ ಅಧ್ಯಕ್ಷ ಸಿದ್ಧನಗೌಡ ಮಂಗಳೂರ ಹಾಗೂ ಶಿಕ್ಷಕರ ಪರಿಶ್ರಮವೇ ಕಾರಣ. ಸುಸಜ್ಜಿತ ಕಟ್ಟಡ, ವಿಶಾಲವಾದ ವರ್ಗಕೋಣೆಗಳು, ಗಾಳಿ-ಬೆಳಕು, ವಿದ್ಯುತ್ ವ್ಯವಸ್ಥೆ, ಮಕ್ಕಳಿಗೆ ಆಸನಗಳು, ಶೌಚಾಲಯ, ಶುದ್ಧ ಕುಡಿಯುವ ನೀರಿನ, ಸುಸಜ್ಜಿತ ಪ್ರಯೋಗಾಲಯ ಹಾಗೂ ಬಸ್ ಸೌಕರ್ಯವನ್ನು ಹೊಂದಿದೆ.

ವಿಶಾಲ ಸಭಾಂಗಣ ಹಾಗೂ ಆಟದ ಮೈದಾನ, ಉದ್ಯಾನ ನೆನಪಿಸುವಂತೆ ಆವರಣದ ಸುತ್ತ ಮೂರು ಸಾಲುಗಳಲ್ಲಿ ಹಚ್ಚ ಹಸಿರಿನ ವಿವಿಧ ಜಾತಿಯ ಫಲಭರಿತ ಮರಗಳು, ಸ್ಮಾರ್ಟ್‌ ಕ್ಲಾಸ್‌ ಬೋಧನೆ, ಎಲ್‌ಸಿಡಿ ಪ್ರೊಜೆಕ್ಟರ್‌, ಸಿ.ಡಿ ಬಳಸಗ ಪಾಠ, ಪ್ರತಿ ವರ್ಗ ಕೋಣೆಯಲ್ಲೂ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು, ಮಕ್ಕಳು ಹಾಗೂ ಶಿಕ್ಷಕರ ಚಲನವಲನದ ಮೇಲೆ ನಿಗಾ ವಹಿಸಲಾಗಿದೆ. ಅಗತ್ಯ ವಿದ್ಯಾರ್ಹತೆ, ಹೆಚ್ಚಿನ ಅನುಭವ ಹೊಂದಿರುವ ನುರಿತ ಮಂಗಳೂರ ಮತ್ತು ಕಾರವಾರ ಜಿಲ್ಲೆಯ ಶಿಕ್ಷಕಿಯರು ನಿರಂತರ ಬೋಧನೆ ಜೊತೆಗೆ ಅಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಒತ್ತು ನೀಡುತ್ತಿದ್ದಾರೆ.

ಶಾಲೆಯಲ್ಲಿ ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ,
ಭಾಷಣ, ನೈತಿಕ ಶಿಕ್ಷಣ ಬೋಧನೆ ಮಾಡಲಾಗುತ್ತದೆ.

ಗುಣಮಟ್ಟದ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಇಲ್ಲಿನ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರತಿಭಾ ಕಾರಂಜಿ, ಆಟೋಟಗಳಲ್ಲೂ ತಾಲ್ಲೂಕು ಹಾಗೂ ಜಿಲ್ಲಾ ಹಂತದವರೆಗೆ ಸಾಧನೆ ಮಾಡಿದ್ದಾರೆ. ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭವಾದಾಗಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ 6 ಬಾರಿ ಶೇ 100ರ ಫಲಿತಾಂಶ ಸಾಧಿಸಿದ ಹೆಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.