ಇಂಡಿ: ಬೇಸಿಗೆ ಬೇಗೆಗೆ ತಾಲ್ಲೂಕಿನ ಬಹುತೇಕ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ವಸತಿ ಪ್ರದೇಶಗಳಲ್ಲಿ ಪ್ರಸಕ್ತ ವರ್ಷದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಸಮಸ್ಯೆ ಬಗೆಹರಿಸುವಂತೆ ಗ್ರಾಮದ ಮತ್ತು ವಸತಿ ಪ್ರದೇಶಗಳಲ್ಲಿ ವಾಸಿಸುವ ಜನರು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಪ್ರಶ್ನಿಸಿದರೆ, ತಾಲ್ಲೂಕು ಬರಗಾಲ ಪ್ರದೇಶವೆಂದು ಘೋಷಿಸಿದರೆ ಮಾತ್ರ ವಸತಿ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಅವಕಾಶ ಇರುತ್ತದೆ ಎನ್ನುತ್ತಾರೆ. ಹೀಗಾಗಿ ಅನಿವಾರ್ಯವಾಗಿ ವಸ್ತಿ ಪ್ರದೇಶದ ಜನರು ಖಾಸಗಿಯಾಗಿ ತಾವೇ ಹಣ ಸಂದಾಯ ಮಾಡಿ ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದಾರೆ.
ಚಿಕ್ಕಬೇವನೂರ ಅಡವಿ ವಸ್ತಿ, ಇಂಗಳಗಿ ಅಡವಿ ವಸ್ತಿ, ಮಾನೆ ವಸ್ತಿ, ತಾಂಡಾ ವಸ್ತಿ, ಅಗರಖೇಡ ಕ್ರಾಸ್, ನಾದ (ಬಿಕೆ) ಗ್ರಾಮದ ಅಂಬಾರೆ ವಸ್ತಿ, ದ್ಯಾಮಗೊಂಡ ವಸ್ತಿ, ಆಲಮೇಲ ರೋಡ ವಸ್ತಿ ಪ್ರದೇಶ, ಅಂಜುಟಗಿ ಗ್ರಾಮದ ಕವಡಿ, ಡೆಂಗಿ, ಪೂಜಾರಿ, ಹಳ್ಳೆನವರ, ಸ್ವಾಮಿ ವಸ್ತಿ ಸೇರಿದಂತೆ ಸುಮಾರು 150 ಹೆಚ್ಚು ವಸತಿ ಪ್ರದೇಶಗಳ ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.
ಹೊರ್ತಿ ಭಾಗದಲ್ಲಿ ವಿದ್ಯುತ್ ಮೋಟಾರು ಸುಟ್ಟಿರುವದರಿಂದ ಆ ಭಾಗದ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಸರಿಯಾಗಿ ಪೂರೈಕೆ ಆಗದೆ ಗ್ರಾಮಸ್ಥರು ಪರದಾಡುವಂತಾಗಿದೆ.
ಇಂಡಿ ಮತ್ತು ಝಳಕಿ ಗ್ರಾಮಗಳಲ್ಲಿ ಶಾಲೆ, ಕಾಲೇಜು, ವಸತಿ ನಿಲಯಗಳಿದ್ದು, ಅಲ್ಲಿಯೂ ಕುಡಿಯುವ ನೀರಿನ ತೊಂದರೆ ಎದುರಾಗಿದೆ. ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಅಗತ್ಯತೆ ಇದೆ.
ತಾಲ್ಲೂಕಿನ ಸಂಗೋಗಿ, ಹಂಜಗಿ, ಲೋಣಿ ಬಿಕೆ ಮತ್ತು ಅರ್ಜನಾಳ ಕೆರೆಗಳು ಕೃಷ್ಣಾ ಕಾಲುವೆಯಿಂದ ತುಂಬಿದ್ದು, ರೈತರು ಒಂದು ವೇಳೆ ಕೃಷಿಗೆ ನೀರು ತೆಗೆದುಕೊಳ್ಳದೆ, ಕುಡಿಯಲು ಮಾತ್ರ ಈ ನೀರು ಬಳಸಿದರೆ ಯಾವುದೇ ತೊಂದರೆ ಆಗುವದಿಲ್ಲ. ಕೃಷಿಗೆ ಕೆರೆ ನೀರು ಬಳಸಿದರೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿದ್ದ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಕೆಲವೊಂದು ಗ್ರಾಮಗಳಲ್ಲಿ, ಬಹು ಹಳ್ಳಿಗಳಿಗೆ ನೀರು ಪೂರೈಸುವ ಗ್ರಾಮ ಪಂಚಾಯತಿಗಳಲ್ಲಿ ನೀರು ಬಿಡುವವರು ಕೆಲವೊಮ್ಮೆ ಒಂದೇ ಕಡೆ ನೀರು ಬಿಟ್ಟು, ಇನ್ನುಳಿದ ಗ್ರಾಮಗಳಿಗೆ ನೀರು ಬಿಡದೇ ಸಮಸ್ಯೆ ಮಾಡುವುದು ಕೂಡ ಕಂಡುಬಂದಿದೆ. ಆದಷ್ಟು ಬೇಗ ತಾಲ್ಲೂಕು ಅಧಿಕಾರಿಗಳು ಕುಡಿಯವ ನೀರಿನ ಸಮಸ್ಯೆ ನಿವಾರಿಸಬೇಕು’ ಎನ್ನುವುದು ಈ ಭಾಗದ ಗ್ರಾಮಗಳ ಜನರ ಮನವಿಯಾಗಿದೆ.
ಕುಡಿಯುವ ನೀರಿಗಾಗಿ ಟ್ಯಾಂಕರ್ ಮೊರೆ ಅನಿವಾರ್ಯವಾಗಿ ದುಬಾರಿ ಹಣ ತೆತ್ತು ನೀರು ಖರೀದಿ ತಾಲ್ಲೂಕಾಡಳಿತ ನೆರವಿಗೆ ಧಾವಿಸುವಂತೆ ಜನರ ಮನವಿ
ಚಿಕ್ಕಬೇವನೂರ ಅಡವಿ ವಸ್ತಿ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ನೀರಿನ ತೊಂದರೆ ಇದೆ. ಹೀಗಾಗಿ ಖಾಸಗಿ ಟ್ಯಾಂಕರ್ ಮೂಲಕ ಹಣ ಕೊಟ್ಟು ನೀರು ಪಡೆಯುತ್ತಿದ್ದೇವೆಮಾಳಪ್ಪ ಗುಡ್ಲ ಪ್ರಗತಿಪರ ರೈತ ಚಿಕ್ಕಬೇವನೂರ ಗ್ರಾಮದ ಅಡವಿ ವಸ್ತಿ
ಇಂಡಿ ತಾಲ್ಲೂಕಿನ ಕೆಲವು ಅಡವಿ ವಸ್ತಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಜಿಲ್ಲಾ ಪಂಚಾಯಿತಿ ಸಿಇಒ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ನೀರಿನ ತೊಂದರೆಯಾಗದಂತೆ ಕ್ರಮವಹಿಸುತ್ತೇವೆನಂದೀಪ ರಾಠೋಡ ತಾಲ್ಲೂಕು ಪಂಚಾಯತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.