ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ವಸತಿ ಶುಲ್ಕ ರದ್ದುಗೊಳಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.
ವಿಶ್ವ ವಿದ್ಯಾಲಯದ ಮುಖ್ಯದ್ವಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ‘ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಸತಿ ನಿಲಯಕ್ಕೆ ದಾಖಲಾಗುವ ಸಮಯದಲ್ಲಿ ಆಡಳಿತಾಧಿಕಾರಿಗಳು ಕೇವಲ ₹100 ಮಾತ್ರ ಶುಲ್ಕವಿದೆ ಎಂದು ಹೇಳಿ, ವಿದ್ಯಾರ್ಥಿಗಳಿಗೆ ವಸತಿ ನಿಲಯಕ್ಕೆ ಪ್ರವೇಶ ಮಾಡಿಕೊಂಡಿರುತ್ತಾರೆ. ಎರಡು ವರ್ಷಗಳಿಂದ ಯಾವುದೇ ಶುಲ್ಕ ಕೇಳದೆ ಈಗ ಏಕಾಏಕಿ ಎರಡೂ ವರ್ಷದ ಶುಲ್ಕವನ್ನು ಒಟ್ಟಿಗೆ ತುಂಬಬೇಕು ಎಂದು ವಿದ್ಯಾರ್ಥಿನಿಯರಿಗೆ ದಿನ ನಿತ್ಯ ಕಿರುಕುಳ ನೀಡುತ್ತಿರುವುದು ಖಂಡನೀಯ’ ಎಂದರು.
ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮಾನಿ ಮಾತನಾಡಿ, ‘ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಮಹಿಳಾ ವಿಶ್ವವಿದ್ಯಾಲಯದ ಸ್ಥಾಪನೆ ಆಗಿದೆ. ಆದರೆ, ಇಲ್ಲಿ ವಿದ್ಯಾರ್ಥಿನಿಯರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ವಸತಿ ಪ್ರವೇಶ ನೀಡಿ, ಇದೀಗ ಏಕಾಏಕಿ ಎಲ್ಲ ವರ್ಷದ ಶುಲ್ಕದ ಕಟ್ಟಿ ಎಂದು ಹೇಳಿ ಬಡ ದಲಿತ ವಿದ್ಯಾರ್ಥಿನಿಯರಿಂದ ದುಡ್ಡು ವಸೂಲಿಗೆ ಇಳಿದಿರುವುದೂ ದುರಂತ’ ಎಂದರು.
‘ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಸತಿ ಶುಲ್ಕದ ನೆಪದಲ್ಲಿ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ಮತ್ತು ಉದ್ದಟತನದ ಮಾತನಾಡುವ ನಿಲಯ ಪಾಲಕರನ್ನು ಕೊಡಲೇ ಅಮಾನತು ಮಾಡಬೇಕು’ ಎಂದು ಪರಿಷತ್ ಮುಖಂಡರು ಆಗ್ರಹಿಸಿದರು.
ವಿದ್ಯಾರ್ಥಿ ಮುಖಂಡರು ವಿಶ್ವವಿದ್ಯಾಲಯದ ಆಡಳಿತ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಶಂಕರಗೌಡ ಸೋಮನಾಳ ಮತ್ತು ಸಿಂಡಿಕೇಟ್ ಸದಸ್ಯರು ಮನವಿ ಸ್ವೀಕರಿಸಿ, ವಿದ್ಯಾರ್ಥಿನಿಯರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು, ಸದ್ಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಂದಿಗೆ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಈ ಕುರಿತು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಾಗ್ದಾನ ನೀಡಿದ ಮೇಲೆ ಪ್ರತಿಭಟನೆ ಮೊಟಕುಗೊಳಸಲಾಯಿತ್ತು.
ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕ ಆದರ್ಶ ಗಸ್ತಿ, ಮಾದೇಶ ಛಲವಾದಿ, ಸಂದೇಶ ಕುಮಟಗಿ, ಪಂಡಿತ್ ಯಲಗೋಡ, ಪ್ರಶಾಂತ ದಾಂಡೇಕರ, ಲತಾ ರಾಠೋಡ, ಪ್ರತಾಪ ತೋಳನೂರ, ಭೀಮರಾಯ ಬಡಿಗೇರ, ನಿಂಗಣ್ಣ ವಾಲಿಕಾರ, ಅಜಯ ತಮ್ಮಗೋಳ, ಪ್ರವೀಣ್ ಚವ್ಹಾಣ, ಉಜಾಲ ಕೇರುಟಗಿ, ಪುಟ್ಟಿ ಜಾದಾವ, ರಶ್ಮಿ ಕಾಂಬಳೆ, ಸಾಕ್ಷಿ ಕಾಲೇಬಾಗ, ಪೂಜಾ ರಾವೂರ, ಮೇಗಶ್ರೀ ನಾಟಿಕಾರ, ಅಶ್ವಿನಿ ದಾಳಿ, ಗೀತಾ ರಾಠೋಡ, ಪದ್ಮಾವತಿ ನಾಯಕ, ಪ್ರತಿಭಾ ಪೂಜಾರಿ, ಅರ್ಪಿತಾ ಬನಸೋಡೆ, ಕವಿತಾ ರಾಠೋಡ, ಅಕ್ಷತಾ ದಾಶಾಳ, ಅನ್ನಪೂರ್ಣ ಬಂಜಾಳೆ, ಸುಜಾತ ಚವಾಣ, ಸೋನಾಲಿ ಹಿರೇನಾಯಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶುಲ್ಕ ಕಟ್ಟಿದಿದ್ದರೆ ಶೈಕ್ಷಣಿಕ ಕ್ಲಿಯರೆನ್ಸ್ ನೀಡುವುದಿಲ್ಲ ಎಂದು ಹೇಳುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಅಂತಕ ನಿರ್ಮಾಣವಾಗಿದೆ. ನಿಲಯ ಪಾಲಕರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ-ಅಕ್ಷಯಕುಮಾರ ಅಜಮಾನಿಜಿಲ್ಲಾ ಸಂಚಾಲಕ ಡಿವಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.