ಸಿಂದಗಿ ಪಟ್ಟಣದ ಸೋಮಪುರ ರಸ್ತೆಯಲ್ಲಿನ 2 ಎಕರೆ 10 ಗುಂಟೆ ಜಮೀನಿನಲ್ಲಿ ವಾಸಿಸುವ 80 ಕುಟುಂಬಗಳ ಮನೆಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಜರುಗಿದ ಸಭೆ
ಸಿಂದಗಿ: ಪಟ್ಟಣದ ಸೋಮಪುರ ರಸ್ತೆಯಲ್ಲಿನ ಸ.ನಂ.842/2X2ರ 2 ಎಕರೆ 10 ಗುಂಟೆ ಜಮೀನಿನಲ್ಲಿ ಕಳೆದ 20 ವರ್ಷಗಳ ಹಿಂದೆ ಪುರಸಭೆ ನೀಡಿದ ನಿವೇಶನದಲ್ಲಿ ವಾಸಿಸುತ್ತಿರುವ 80 ಕುಟುಂಬಗಳ ಮನೆಗಳನ್ನು ತೆರುವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಕಾರ್ಯಾಲಯದಿಂದ ಗುರುವಾರ ನೋಟಿಸ್ ನೀಡಿ ಆ.23 ರೊಳಗಾಗಿ ಮನೆಗಳನ್ನು ತೆರವುಗೊಳಿಸಬೇಕು ಎಂದು ಗಡುವು ನೀಡಲಾಗಿದೆ.
ಈ ಜಾಗದಲ್ಲಿ 13 ಪಕ್ಕಾ ಕಟ್ಟಡಗಳು, 20 ಕಚ್ಚಾ ಕಟ್ಟಡಗಳು, 38 ಶೆಡ್‌ಗಳು, 9 ಖುಲ್ಲಾ ಪ್ಲಾಟ್‌ಗಳಿವೆ. ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಈಗಾಗಲೇ ನ್ಯಾಯಾಧೀಶರ ಬಳಿ ಕಾಲಾವಕಾಶ ಕೇಳಲಾಗಿತ್ತು. ಆದರೆ ಈಗ ತೆರುವುಗೊಳಿಸುವುದು ಅನಿವಾರ್ಯವಾಗಿದೆ. ನಿವಾಸಿಗಳು ನಮಗೆ ಸಹಕರಿಸಿ ಮನೆಗಳ ನ್ನು ತೆರುವುಗೊಳಿಸಬೇಕು ಎಂದು ಮುಖ್ಯಾಧಿಕಾರಿ ಗುರುವಾರ ಸ್ಥಳದಲ್ಲಿನಡೆದ ಸಭೆಯಲ್ಲಿ ಮನವಿ ಮಾಡಿಕೊಂಡರು.
ಮನವಿಗೆ ನಿವಾಸಿಗಳು ವಿರೋಧಿಸಿ ನಾವೆಲ್ಲ ನಿರ್ಗತಿಕರು ವಾಸ ಮಾಡುವುದು ಎಲ್ಲಿ? ಎಂದು ಕಣ್ಣೀರು ಹಾಕಿದರು.
‘ಈಗಾಗಲೇ ಪುರಸಭೆ ಮುಖ್ಯಾಧಿಕಾರಿ ಕೋರ್ಟ್‌ಗೆ ಒಪ್ಪಿಗೆ ಪತ್ರ ನೀಡಿ ಕಾಲಾವಕಾಶವೂ ಪಡೆದುಕೊಂಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶಕ್ಕನುಗುಣವಾಗಿ ನಡೆದುಕೊಳ್ಳಲೇಬೇಕಾಗುತ್ತದೆ’ ಎಂದು ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ನಿವಾಸಿಗಳಿಗೆ ತಿಳಿಸಿದರು.
‘ಈ ಜಮೀನು ವಿವಾದ ಬಹಳ ವರ್ಷಗಳ ನಡೆದಿದ್ದರೂ ಪುರಸಭೆ ಆಡಳಿತ ಮಂಡಳಿ ಈ ಕುರಿತು ಒಂದು ಇತ್ಯರ್ಥಕ್ಕೆ ಬರಬೇಕಿತ್ತು. ಇನ್ನಾದರೂ ಕೂಡಲೇ ನಿರ್ಣಯಕ್ಕೆ ಬರಬೇಕು’ ಎಂದು ಇಂಡಿ ಡಿವೈಎಸ್ಪಿ ಎಚ್.ಎಸ್.ಜಗದೀಶ ಕೇಳಿಕೊಂಡರು.
ಕಾಲಾವಕಾಶ ನೀಡಲು ಮನವಿ
‘ಪುರಸಭೆ ಕಾರ್ಯಾಲಯದಿಂದ ಆಗಿರುವ ಪ್ರಮಾದಕ್ಕೆ ಬಡ ನಿವಾಸಿಗಳು ಬಲಿಪಶು ಆಗಿದ್ದಾರೆ. ಹೀಗಾಗಿ ಪುರಸಭೆಯ ಹೆಸರಿನಲ್ಲಿರುವ 2-3 ಜಮೀನುಗಳಲ್ಲಿ ಯಾವುದಾದರೂ ಒಂದು ಮಾರಾಟ ಮಾಡಿ ಆ ಹಣವನ್ನು ಸ.ನಂ 842/2X2 ಮಾಲೀಕರಾದ ಮರಿಯಂಬಿ ಅಬ್ದುಲಖಾದರ ಕರ್ಜಗಿ ಅವರಿಗೆ ಪರಿಹಾರವಾಗಿ ನೀಡುವ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ ಸಲಹೆ ನೀಡಿದರು.
‘ನಿವಾಸಿಗಳಿಗೆ ಪುರಸಭೆ ಮುಖ್ಯಾಧಿಕಾರಿ ಇಂದೇ ಮೊದಲ ನೋಟಿಸ್ ನೀಡಿ, ಏಕಾಏಕಿ ಮನೆ ತೆರವುಗೊಳಿಸುವಂತೆ ತಿಳಿಸಿದರೆ ಬಡ ಜನರು ಬೀದಿಪಾಲಾಗುತ್ತಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಬೇಕು’ ಎಂದರು.
ಆ.23 ರೊಳಗಾಗಿ ಮನೆಗಳನ್ನು ತೆರವುಗೊಳಿಸಬೇಕು. ಈ ಕುರಿತು ನಿವಾಸಿಗಳಿಗೆ ತಿಳಿ ಹೇಳುವಂತೆ ಡಿ.ಸಿ ಸೂಚನೆ ನೀಡಿದ್ದಾರೆ. ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು. ಅಹಿತಕರ ಘಟನೆ ನಡೆಯಬಾರದುಅನುರಾಧಾ ವಸ್ತ್ರದ, ಉಪವಿಭಾಗಾಧಿಕಾರಿ, ಇಂಡಿ
ತೆರವುಗೊಳಿಸದ ಕಾರಣ ಕೋರ್ಟ್ ನ್ಯಾಯಾಧೀಶರು ನನ್ನ ಮೇಲೆ ಬಂಧನ ವಾರೆಂಟ್ ಹೊರಡಿಸಿದ್ದಾರೆ. ನೀವಾಗಿಯೇ ತೆರುವುಗೊಳಿಸದಿದ್ದರೆ ನಾವು ತೆರುವುಗೊಳಿಸುವುದು ಅನಿವಾರ್ಯವಾಗುತ್ತದೆರಾಜಶೇಖರ ಎಸ್. ಮುಖ್ಯಾಧಿಕಾರಿ, ಪುರಸಭೆ
ಕಳೆದ 20 ವರ್ಷಗಳಿಂದ ಈ ಜಾಗದಲ್ಲಿ ನಿವಾಸಿಗಳು ವಾಸ ಮಾಡುತ್ತಿದ್ದಾರೆ. ಇಂದೇ ಮೊದಲನೆಯ ನೋಟಿಸ್ ನೀಡಿ ಮನೆ ಖಾಲಿ ಮಾಡಿ ಎನ್ನುವುದು ನ್ಯಾಯೋಚಿತವಲ್ಲ. ಮೂರು ನೋಟಿಸ್ ನೀಡಿ ಕಾಲಾವಕಾಶ ಕೊಡಬೇಕುಶಿವಾನಂದ ಆಲಮೇಲ, ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.