ತಾಳಿಕೋಟೆ: ಮಳೆಯಿಂದಾಗಿ ಪಟ್ಟಣದ ಮೂಲಕ ಹಾಯ್ದುಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಟೀಷರ ಕಾಲದ ಸೇತುವೆ ಸೋಮವಾರವೂ ಜಲಾವೃತವಾಗಿದ್ದು ಕಳೆದ ಐದು ದಿನಗಳಿಂದ ರಸ್ತೆ ಸಂಪರ್ಕ ಸ್ಥಗಿತವಾಗಿದೆ.
ಈ ಹಿನ್ನೆಲೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ಹಡಗಿನಾಳ ಮಾರ್ಗದಲ್ಲಿ ನಿರ್ಮಿಸಿರುವ ಮೇಲು ಸೇತುವೆ ಬಳಸಿ ಮೂಕಿಹಾಳ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ವಿಜಯಪುರ, ಬಸವನಬಾಗೇವಾಡಿ ಸುತ್ತಮುತ್ತಲ ಊರುಗಳಿಗೆ ಹೋಗಲು 15ಕಿಮೀ ಸುತ್ತುಹಾಕಿ ಹೋಗುವುದು ಮುಂದುವರೆದಿದೆ.
ವಾಹನಗಳ ದಟ್ಟಣೆಯಿಂದ ಮೂಕಿಹಾಳ ಸೋಗಲಿ ಹಳ್ಳದ ಸೇತುವೆ ಬಳಿ ಅಪಾಯಕಾರಿಯಾಗುವಂತಹ ಆಳದ ಹೊಂಡಗಳಾಗಿದ್ದು ಸ್ವಲ್ಪ ಜಾಗರೂಕತೆ ತಪ್ಪಿದರೂ ವಾಹನ ಪಲ್ಟಿಯಾಗುವ ಸಾಧ್ಯತೆಗಳಿವೆ ಎಂದಯ ಮಿಣಜಗಿ ಗ್ರಾಮದ ಪ್ರಮುಖ ಬಸನಗೌಡ ಬಾಗೇವಾಡಿ ಆತಂಕ ವ್ಯಕ್ತಪಡಿಸಿದರು.
ಮೂಕಿಹಾಳ ಬಳಿಯ ಸೋಗಲಿ ಹಳ್ಳವು ಸಹ ಪದೇಪದೇ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗುತ್ತಿದೆ. ಆದ್ದರಿಂದ ಈ ಸೇತುವೆಯನ್ನು ಮೇಲುಸೇತುವೆಯಾಗಿ ನಿರ್ಮಿಸಬೇಕು ಎಂದು ಮೂಕಿಹಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಚ್.ಪಾಟೀಲ ಒತ್ತಾಯಿಸಿದರು. ಹೊಸಸೇತುವೆ ನಿರ್ಮಾಣದವರೆಗೆ ತಾಳಿಕೋಟೆ ಸಂಪರ್ಕಿಸುವ ಎರಡು ಮಾರ್ಗಗಳಲ್ಲಿ ಕನಿಷ್ಠ ಒಂದಾದರೂ ಸಂಚಾರಕ್ಕೆ ಲಭ್ಯವಾಗುತ್ತದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.