ತಾಳಿಕೋಟೆ: ಪಟ್ಟಣದ ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆಯ ಮೇಲಿನ ಪ್ರವಾಹ ಇನ್ನಷ್ಟು ಹೆಚ್ಚಿದ್ದು, ಶುಕ್ರವಾರವೂ ರಸ್ತೆ ಸಂಚಾರವು ಹಡಗಿನಾಳ, ಮೂಕಿಹಾಳ, ಮಿಣಜಗಿ ಮಾರ್ಗದಿಂದ ಸಂಚರಿಸಿದ್ದವು. ಶುಕ್ರವಾರ ಸಂಜೆ ಮೂಕಿಹಾಳ ಬಳಿಯ ಸೋಗಲಿ ಹಳ್ಳದ ಪ್ರವಾಹದಿಂದ ನೆಲಮಟ್ಟದ ಸೇತುವೆ ಮೇಲೆ ಪ್ರವಾಹ ಹೆಚ್ಚಾಗಿದ್ದುದರಿಂದ ತಾಳಿಕೋಟೆಯ ಪಶ್ಚಿಮ ದಿಕ್ಕಿನ ಗ್ರಾಮ, ಪಟ್ಟಣಗಳ ಸಂಪರ್ಕ ಕಡಿತವಾಗಿ ಹೋಗಿದೆ.
ಇದರಿಂದಾಗಿ ತಾಳಿಕೋಟೆ ಮೂಲಕ ಹಾಯ್ದು ಹೋಗುತ್ತಿದ್ದ ಮುದ್ದೇಬಿಹಾಳ, ಬಸವನ ಬಾಗೇವಾಡಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಮೊದಲಾದ ದೊಡ್ಡ ಪಟ್ಟಣಗಳ ಜೊತೆ ಪಕ್ಕದ ಗ್ರಾಮಗಳ ಸಂಪರ್ಕವೂ ಕಡಿತವಾಗಿದೆ. ಅದೇ ರೀತಿ ತಾಳಿಕೋಟೆಯ ಮೂಲಕ ಹೋಗುತ್ತಿದ್ದ ಹುಣಸಗಿ, ಸುರಪುರ, ಕಲಬುರ್ಗಿ, ಲಿಂಗಸೂರು, ರಾಯಚೂರು, ಬೀದರ ಮೊದಲಾದ ಮಾರ್ಗಗಳೂ ಬಂದ್ ಆಗಿವೆ.
ತಾಳಿಕೋಟೆಯಲ್ಲಿ ಶುಕ್ರವಾರ ಸಂಜೆ ಮತ್ತು ಶನಿವಾರ ನಡೆಯಲಿರುವ ಇಸ್ತಮಾ ಕಾರ್ಯಕ್ರಮಕ್ಕೆಂದು ವಿಜಯಪುರ ಮೊದಲಾದೆಡೆಯಿಂದ ಬಂದಿದ್ದ ಐವತ್ತಕ್ಕೂ ಅಧಿಕ ವಾಹನಗಳು, ಮೂಕಿಹಾಳ ದರ್ಗಾದಲ್ಲಿ ಬೀಡುಬಿಟ್ಟಿವೆ. ಇಸ್ತಮಾ ಮುಗಿಸಿಯೆ ಹೋಗುವುದಾಗಿ ಅವರು ತಿಳಿಸಿದ್ದಾರೆಂದು ಮೂಕಿಹಾಳ ಗ್ರಾಮದ ಮುಖಂಡ ಕೆ.ಎಚ್.ಪಾಟೀಲ ತಿಳಿಸಿದರು.
ಎಲ್ಲೆಡೆ ಮಳೆ ಹೆಚ್ಚಿದ್ದು ಪ್ರವಾಹದಿಂದಾಗಿ ಡೋಣಿ ನದಿ ದಡದಲ್ಲಿನ ಜಮೀನುಗಳಲ್ಲಿ ಪ್ರವಾಹದ ನೀರು ತುಂಬಿಕೊಂಡಿದ್ದು ಬೆಳೆನಾಶದ ಭೀತಿಯಲ್ಲಿ ರೈತರಿದ್ದಾರೆ. ಡೋಣಿ ನದಿ ದಡದ ಗುತ್ತಿಹಾಳ, ಬೋಳವಾಡ, ತುಂಬಗಿ ಸಾಸನೂರ ಮೊದಲಾದ ಗ್ರಾಮಗಳ ಸುಮಾರು ಇನ್ನೂರಕ್ಕೂ ಅಧಿಕ ಹೆಕ್ಟೇರ್ ಜಮೀನು ಜಲಾವೃತವಾಗಿದ್ದು ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆಗಳು ನೀರಲ್ಲಿ ಮುಳುಗಿಹೋಗಿವೆ.
ಪ್ರವಾಹಪೀಡಿತ ಜಮೀನುಗಳಿಗೆ ವಿಪತ್ತು ನಿರ್ವಹಣಾ ನೋಡಲ್ ಅಧಿಕಾರಿ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮತ್ತು ತಾಳಿಕೋಟೆ ತಹಶೀಲ್ದಾರ ವಿನಯಾ ಹೂಗಾರ ಜಂಟಿಯಾಗಿ ದೋಣಿ ನದಿ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹದ ಕುರಿತು ಪರಿಶೀಲಿಸಿದರು. ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಡೋಣಿ ನದಿ ದಡದಲ್ಲಿ ಅಪಾರ ಪ್ರಮಾಣದ ಜಮೀನುಗಳಲ್ಲಿ ಪ್ರವಾಹದ ನೀರಿದೆ, ಅದನ್ನು ಸಮೀಕ್ಷೆ ವರದಿ ಪಡೆಯಲಾಗುವುದು ಎಂದರು.
ತಾಳಿಕೋಟೆ ಪಟ್ಟಣದ ವಿಜಯಪುರ ರಸ್ತೆಯಲ್ಲಿ 110 ಕೆಎಚ್.ಬಿ ಸ್ಥಾವರದ ಬಳಿ ಇರುವ ಜಮೀನಿನಲ್ಲಿ ವಾಸವಾಗಿರುವ ರೈತ ಮಹಿಳೆ ಚಂದ್ರಮ್ಮ ಹದಗಲ್ಲ ಅವರ ವಾಸದ ಮನೆ ಡೋಣಿ ನದಿ ಪ್ರವಾಹದಿಂದ ಸುತ್ತುವರಿದಿದ್ದು, ವಿಷ ಜಂತುಗಳು ಮನೆಯೊಳಕ್ಕೆ ಬರುತ್ತಿದ್ದು ಭಯವಾಗಿದೆ. ಮನೆಯ ಸರಂಜಾಮು ನೀರಲ್ಲಿ ಮುಳುಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗುತ್ತಿಹಾಳ ಗ್ರಾಮದಲ್ಲಿನ ನೂರಾರು ಎಕರೆ ಜಮೀನುಗಳು ಡೋಣಿ ನದಿ ಪ್ರವಾಹದಿಂದ ಜಲಾವೃತಗೊಂಡಿದ್ದು ಹಾಳಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮದ ರೈತರಾದ ಸಂಪತ್ತಕುಮಾರ ಪಾಟೀಲ, ಸಚೀನಗೌಡ ಪಾಟೀಲ, ಅಪ್ಪನಗೌಡ ಬಿರಾದಾರ, ಬಸವರಾಜ ಬಿರಾದಾರ, ಶರಣಗೌಡ ಬಿರಾದಾರ, ನಾನಾಗೌಡ ಬಿರಾದಾರ, ಹುಸೇನಭಾಷಾ ನಾಯ್ಕೊಡಿ, ಬಸವರಾಜ ಬಾಪುಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಶರಣಗೌಡ ಬಿರಾದಾರ, ಗುರಣ್ಣ ಬಸವಂತ್ರಾಯ ಬಿರಾದಾರ, ಬಸವರಾಜ ಭೀಮನಗೌಡ ಬಿರಾದಾರ, ಕಸ್ತೂರಿಬಾಯಿ ಬಸನಗೌಡ ಪಾಟೀಲ, ಮಲ್ಲವ್ವ ಮಾದರ, ಚನ್ನಪ್ಪ ಜಂಬಗಿ ಇತರರು ಆಗ್ರಹಿಸಿದರು.
ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಜಲಾವೃತ ಹಿನ್ನೆಲೆಯಲ್ಲಿ ಹಡಗಿನಾಳ ಮೂಕಿಹಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಮೂಕಿಹಾಳ ಬಲಿಯ ಸೋಗಲಿ ಹಳ್ಳದ ನೆಲಮಟ್ಟದ ಸೇತುವೆ ಜಲಾವೃತವಾಗಿ ಶುಕ್ರವಾರ ಸಂಜೆ ತಾಳಿಕೋಟೆಗೆ ಬರುತ್ತಿದ್ದ ಎಲ್ಲ ಗ್ರಾಮ ಪಟ್ಟಣಗಳ ಸಂಪರ್ಕ ಕಡಿತವಾದವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.