ADVERTISEMENT

ತಾಂಬಾ ನಾಡದೇವಿ ಉತ್ಸವ ನಾಳೆಯಿಂದ

ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 13:57 IST
Last Updated 24 ಸೆಪ್ಟೆಂಬರ್ 2022, 13:57 IST
ದೇವಾನಂದ ಚವ್ಹಾಣ
ದೇವಾನಂದ ಚವ್ಹಾಣ   

ವಿಜಯಪುರ: ‘ಎರಡನೇ ಮೈಸೂರು ದಸರಾ’ ಎಂದೇ ಬಿಂಬಿತವಾಗಿರುವ ತಾಂಬಾ ನಾಡದೇವಿಯ 51ನೇ ವರ್ಷದ ನವರಾತ್ರಿ ಉತ್ಸವ ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 5ರ ವರೆಗೆ ನಡೆಯಲಿದೆ ಎಂದು ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಮತ್ತು ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸೆ.26ರಂದು ಆರಂಭಗೊಳ್ಳುವ ಉತ್ಸವದ ಉದ್ಘಾಟನಾ ಸಮಾರಂಭದ ಅಂಗವಾಗಿ ಪೂರ್ಣಕುಂಭ, ಆನೆ ಕುದುರೆ, ಯಕ್ಷಗಾನ, ಲೇಜಿಮ್‌ ಕುಣಿತ, ನಾಶಿಕ್‌ ಡೋಲ್‌, ಜಗ್ಗಲಗಿ ಮೇಳ, ಡಿ.ಜೆ.ಸೌಂಡ್‌ ಸಿಸ್ಟಂ, ಕೀಲು ಕುದುರೆ ಕುಣಿತ, ನವಿಲು ಕುಣಿತ, ಮಹಿಳಾ ಡೊಳ್ಳು ಕುಣಿತ, ಝಾಂಜ್‌ ಪಥಕ್‌ ಸಕಲ ವಾದ್ಯ ವೈಭವದೊಂದಿಗೆ ತಾಂಬಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.

ADVERTISEMENT

ಸೆ.26ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಉತ್ಸವ ಉದ್ಘಾಟನೆ ನೆರವೇರಿಸುವರು. ಪಯ್ಯನೂರಿನ ಜ್ಯೋತಿಷಿ ತಿಲಕಂ, ಸುಕ್ಷೇತ್ರ ವೀರಗೋಟದ ಅಡವಿಲಿಂಗ ಮಹಾರಾಜರು ಸಾನ್ನಿಧ್ಯ ವಹಿಸುವರು. ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ನಾಡದೇವಿ ಪೂಜೆ ನೆರವೇರಿಸುವರು. ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ ಪೂರ್ಣಕುಂಭಕ್ಕೆ ಚಾಲನೆ ನೀಡುವರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಮೆರವಣಿಗೆಗೆ ಚಾಲನೆ ನೀಡುವರು ಎಂದು ತಿಳಿಸಿದರು.

ಸೆ.27ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ, ಸೆ.28ರಂದು ರಕ್ತದಾನ ಶಿಬಿರ,ಸೆ.29 ರಂದು ಅಂತರರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿ, ಸೆ.30ರಂದು ನವಚಂಡಿ ಹೋಮ, ಅಕ್ಟೋಬರ್‌ 1ರಂದು ಅಂತರರಾಜ್ಯ ಮಟ್ಟದ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿ, ಅ.2ರಂದು ತರಳಬಾಳು ಜನಪದ ಸಿರಿ ನೃತ್ಯ ಪ್ರದರ್ಶನ, ಅ.3ರಂದು ಪುರುಷರಿಗಾಗಿ ಭಾರ ಎತ್ತುವ ಸ್ಪರ್ಧೆ, ಅ.4ರಂದು ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಎಂದರು.

ನಾಡು,ನುಡಿ, ಕಲೆ, ಸಂಸ್ಕೃತಿ, ಕೃಷಿ ಮತ್ತು ಸಾಮಾಜಿಕ, ಧಾರ್ಮಿಕ ಚಿಂತನೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನನ್ನ ತಂದೆಯವರಾದ ಫೂಲಸಿಂಗ್ ನಾರಾಯಣ ಚವ್ಹಾಣ ಅವರಿಂದ 51 ವರ್ಷಗಳ ಹಿಂದೆ ತಾಂಬಾದಲ್ಲಿನಾಡದೇವಿ ಉತ್ಸವ ಆರಂಭವಾಗಿ, ಇಂದಿನವರೆಗೂ ಪ್ರತಿ ವರ್ಷ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ತಾಂಬಾ ದಸರಾ ಮಹೋತ್ಸವದ ಸಂಘಟಕರಾದ ರವಿಕುಮಾರ್ ಎಫ್‌.ಚವ್ಹಾಣ, ಗುಲಾಬ್‌ ಚವ್ಹಾಣ, ವಸಂತ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

*****

‘ಜೆಡಿಎಸ್‌ ಜೀತ ಮುಗಿದ ಬಳಿಕ ತೀರ್ಮಾನ’

ವಿಜಯಪುರ:ಕಾಂಗ್ರೆಸ್‌, ಬಿಜೆಪಿ ಸೇರ್ಪಡೆಗೆ ನನಗೆ ಆಹ್ವಾನ ಬಂದಿದೆ. ಆದರೆ, ಸದ್ಯ ನಾನು ಜೆಡಿಎಸ್‌ನಿಂದ ಶಾಸಕನಾಗಿದ್ದು, ಐದು ವರ್ಷಗಳ ಕಾಲ ಆ ಪಕ್ಷದ ನಿಷ್ಠಾವಂತ ಜೀತದಾಳಿನಂತೆ ಇರುತ್ತೇನೆ. ಬಳಿಕ ಕ್ಷೇತ್ರದ ಜನರ, ಹಿತೈಷಿಗಳ ಆಶಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಅವರು ನನ್ನನ್ನು ಗುರುತಿಸಿ, ಅವಕಾಶ ನೀಡಿದ್ದಾರೆ. ಹೀಗಾಗಿ ಜೆಡಿಎಸ್‌ ತೊರೆಯುವ ಪ್ರಶ್ನೆ ಇಲ್ಲ ಎಂದರು.

ಅಭಿವೃದ್ಧಿ ವಿಷಯದಲ್ಲಿ ನಾಗಠಾಣ ಕ್ಷೇತ್ರವನ್ನು ಬಿಜೆಪಿ ಸರ್ಕಾರ ಕಡೆಗಣಿಸಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರೂ ಪ್ರಯೋಜನವಾಗಿಲ್ಲ.ಸದನ ಹೆಸರಿಗಷ್ಟೇ ನಡೆಯುತ್ತದೆ. ಯಾವುದೇ ಅಭಿವೃದ್ಧಿ ಪರ ನಿರ್ಣಯಗಳು ನಡೆಯುತ್ತಿಲ್ಲ ಎಂದು ದೂರಿದರು.

ನಾಗಠಾಣ ಕ್ಷೇತ್ರ ವ್ಯಾಪ್ತಿಯ ನಗರದ ರೈಲು ನಿಲ್ದಾಣ ಎದುರಿನ ರಸ್ತೆಯನ್ನು ₹ 1.40 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಪಡಿಸಲು ಎರಡು ವರ್ಷಗಳ ಹಿಂದೆ ಟೆಂಡರ್‌ ಆಗಿ, ಭೂಮಿ ಪೂಜೆ ನೆರವೇರಿಸಿದರೂ ಇನ್ನೂ ಕಾಮಗಾರಿ ಆರಂಭವಾಗದಂತೆ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದರು.

ನಾಗಠಾಣ ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾಡಳಿತ ಕಣ್ಣಿದ್ದು ಕುರುಡಾಗಿದೆ. ಕಿವಿಯಿದ್ದು ಕಿವುಡಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.