ADVERTISEMENT

ತೆಲಂಗಾಣಕ್ಕೆ ಆಲಮಟ್ಟಿ ನೀರು: ವಿರೋಧ

​ಪ್ರಜಾವಾಣಿ ವಾರ್ತೆ
Published 12 ಮೇ 2019, 6:13 IST
Last Updated 12 ಮೇ 2019, 6:13 IST
ಆಲಮಟ್ಟಿ ಜಲಾಶಯ (ಸಂಗ್ರಹ ಚಿತ್ರ)
ಆಲಮಟ್ಟಿ ಜಲಾಶಯ (ಸಂಗ್ರಹ ಚಿತ್ರ)   

ಆಲಮಟ್ಟಿ: ನಾರಾಯಣಪುರ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ 2 ಟಿಎಂಸಿ ಅಡಿ ನೀರು ಹರಿಸುತ್ತಿರುವುದಕ್ಕೆ ಈ ಭಾಗದಲ್ಲಿ ವ್ಯಾಪಕ ಖಂಡನೆ ಉಂಟಾಗಿದೆ.

ಆಲಮಟ್ಟಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಈ ಬಾರಿ ಹಿಂಗಾರಿಗೂ ನೀರು ನೀಡದೆ, ಮತ್ತೊಂದು ರಾಜ್ಯಕ್ಕೆ ನೀರು ನೀಡುವುದು ಯಾವ ನ್ಯಾಯ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲಂಗಾಣಕ್ಕೆ ನೀರು ಹರಿಸುತ್ತಿರುವುದು ಹಿಂದೆ ಅಡಗಿರುವ ರಾಜಕೀಯ ಉದ್ದೇಶವಾದರೂ ಏನು? ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಪ್ರಶ್ನಿಸಿದರು.

ADVERTISEMENT

ತೆಲಂಗಾಣ ಸರ್ಕಾರದ ಮನವಿ ಮೇರೆಗೆ ರಾಜ್ಯ ಸರ್ಕಾರ 2 ಟಿಎಂಸಿ ಅಡಿ ನೀರು ಬಿಡಲು ಒಪ್ಪಿರುವುದು ಖಂಡನೀಯ. ನಾವು ಮಹಾರಾಷ್ಟ್ರದಿಂದ ಹಣ ಕೊಟ್ಟು ನೀರು ಪಡೆಯುತ್ತೇವೆ. ಆದರೆ, ತೆಲಂಗಾಣಕ್ಕೆ ಯಾವ ರೀತಿ ಮತ್ತು ಏಕೆ ನೀರು ಒದಗಿಸಿದೆ ಎಂದು ಸರ್ಕಾರ ಸ್ಪಷ್ಟ ಪಡಿಸಬೇಕು ಎಂದು ಅವರು ಆಗ್ರಹಿಸಿದರು.

2 ಟಿಎಂಸಿ ಅಡಿ ನೀರು ಬಿಡುಗಡೆ: ಸರ್ಕಾರದ ಆದೇಶದಂತೆ ವಾರದಿಂದ ನಾರಾಯಣಪುರ ಜಲಾಶಯಕ್ಕೆ ಎರಡು ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ನಾರಾಯಣಪುರ ಜಲಾಶಯದ ಎಡಭಾಗದಲ್ಲಿ ಬರುವ ಮೆಹಬೂಬ್ ನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬರ ಪರಿಸ್ಥಿತಿ ನಿಯಂತ್ರಣಕ್ಕಾಗಿ 2.5 ಟಿಎಂಸಿ ಅಡಿ ನೀರು ಹರಿಸುವಂತೆ ಮನವಿ ಮಾಡಿತ್ತು. ರಾಜ್ಯ ಸರ್ಕಾರ 2 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ. ಹೀಗಾಗಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗಿದೆ. ಅಲ್ಲಿಂದ ತೆಲಂಗಾಣಕ್ಕೆ ನೀರು ಹರಿಯುತ್ತಿದೆ. ಸರ್ಕಾರದ ಈ ನಿರ್ಧಾರಕ್ಕೆ ಕೃಷ್ಣಾ ಕಣಿವೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.