ADVERTISEMENT

ಟೆನ್ನಿಸ್‌ ಬಾಲ್ ಕ್ರಿಕೆಟ್ ಟೂರ್ನಿ ನಾಳೆಯಿಂದ

ವಿಜಯಪುರ ಜಿಲ್ಲಾ ಪಂಚಾಯ್ತಿ ಮೈದಾನದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 15:19 IST
Last Updated 23 ನವೆಂಬರ್ 2022, 15:19 IST
ಡಾ.ಬಾಬು ರಾಜೇಂದ್ರ ನಾಯಕ
ಡಾ.ಬಾಬು ರಾಜೇಂದ್ರ ನಾಯಕ   

ವಿಜಯಪುರ: ಡಾ.ಅಬ್ದುಲ್‌ ಹಕೀಮ್‌ ಸ್ಮರಣಾರ್ಥಕರ್ನಾಟಕ ರಾಜ್ಯ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಅಸೋಸಿಯೇಷನ್‌, ಬಿಜಾಪುರ ಲಯನ್ಸ್‌ ಕ್ಲಬ್‌ ಸಹಯೋಗದೊಂದಿಗೆ ನಗರದ ಜಿಲ್ಲಾ ಪಂಚಾಯ್ತಿ ಮೈದಾನದಲ್ಲಿ ನವೆಂಬರ್‌ 25ರಿಂದ 29ರ ವರೆಗೆರಾಷ್ಟ್ರಮಟ್ಟದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಚಾಂಪಿಯನ್‌ಶಿಫ್‌ ಆಯೋಜಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷಡಾ.ಬಾಬು ರಾಜೇಂದ್ರ ನಾಯಕ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.25 ರಂದು ಬೆಳಿಗ್ಗೆ 10ಕ್ಕೆ ವಿವಿಧ ರಾಜ್ಯಗಳ ತಂಡಗಳು ನಗರದ ರೈಲು ನಿಲ್ದಾಣಕ್ಕೆ ಬರಲಿದ್ದು, ಅಂದು ಎಲ್ಲ ತಂಡಗಳಿಗೆ ಅದ್ದೂರಿ ಸ್ವಾಗತ ಮಾಡಲಾಗುವುದು. ಮಧ್ಯಾಹ್ನ 2.30ಕ್ಕೆ ಸಿದ್ದೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್.ಅಂಬೇಡ್ಕರ್‌ ಕ್ರೀಡಾಂಗಣದ ವರೆಗೆ ಬಾಜಾ-ಭಜಂತ್ರಿಗಳೊಂದಿಗೆ ಕ್ರೀಡಾಪಟುಗಳನ್ನು ಮೆರವಣಿಗೆ ಮೂಲಕ ಕ್ರೀಡಾಂಗಣಕ್ಕೆ ಕರೆತರಲಾಗುವುದು ಎಂದರು.

ಅಂದು ಸಂಜೆ 4.30ಕ್ಕೆ ಜಿಲ್ಲಾ ಪಂಚಾಯ್ತಿ ಕ್ರೀಡಾಂಗಣದಲ್ಲಿ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷಎಂ.ಬಿ.ಪಾಟೀಲ ಕ್ರಿಕೆಟ್‌ ಟೂರ್ನಿಯನ್ನುಉದ್ಘಾಟಿಸಲಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ವಿಜಯಮಹಾಂತೇಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ರಾಷ್ಟ್ರೀಯ ಟೆನ್ನಿಸ್‌ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಕಿಶನ್‌ ಯಾದವ, ಕಾರ್ಯದರ್ಶಿ ಸುಭಾಷಚಂದ್ರ ವಶಿಷ್ಠ, ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷೆ ಶಾಹೇದ ಬೇಗಂ ಹಕೀಂ ಉಪಸ್ಥಿತರಿರಲಿದ್ದಾರೆ ಎಂದರು.

ADVERTISEMENT

ನವೆಂಬರ್‌ 29 ರಂದು ಬೆಳಿಗ್ಗೆ 11ಕ್ಕೆ ಪ್ರೆಸ್ಸ್ ಆ್ಯಂಡ್ ಮೀಡಿಯಾ ಪ್ರತಿನಿಧಿಗಳ ಹಾಗೂ ಟೂರ್ನಿಯ ಆಯೋಜಕರ ತಂಡಗಳ ಮಧ್ಯ ವಿಶೇಷ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ಹೇಳಿದರು.

ನ.29 ರಂದು ಫೈನಲ್ ಪಂದ್ಯಗಳು ಹಾಗೂ ಸಂಜೆ 4ಕ್ಕೆ ಸಮಾರೋಪ, ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಶಾಸಕ ಶಿವಾನಂದ ಪಾಟೀಲ ಬಹುಮಾನ ವಿತರಣೆ ಮಾಡಲಿದ್ದಾರೆ. ಶಾಸಕ ದೇವಾನಂದ ಚವ್ಹಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಂತರ ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಪಟು ರಾಜೇಶ್ವರಿ ಗಾಯಕವಾಡ, ಕೆ.ಪಿ.ಎಲ್ ಬಿಜಾಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕ ಕಿರಣ ಕಟ್ಟಿಮನಿ ವಿಶೇಷ ಆಹ್ವಾನಿರಾಗಿ ಆಗಮಿಸಲಿದ್ದಾರೆ ಎಂದರು.

ದೇವರ ಹಿಪ್ಪರಗಿ, ಬನಹಟ್ಟಿಯಲ್ಲೂ ಕೆಲ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ₹ 4 ಲಕ್ಷ ಮೊತ್ತದ ಟ್ರೋಫಿ, ಪ್ರಶಸ್ತಿ ಪತ್ರಗಳನ್ನು ಟೂರ್ನಿಯಲ್ಲಿ ಇಡಲಾಗಿದೆ. ಯಾವುದೇ ನಗದು ಬಹುಮಾನ ಇರುವುದಿಲ್ಲ ಎಂದರು.

ಸುನೀತಾ ಚವ್ಹಾಣ, ಫಯಾಜ್‌ ಕಲಾದಗಿ, ಅಶೋಕ ಕುಮಾರ ಜಾಧವ, ಎನ್ ಎಂ.ಹುಟಗಿ, ಸುರೇಶ ಬಿಜಾಪುರ, ಶಶಿಕಲಾ ಇಜೇರಿ, ಉಷಾರಾವ್‌ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

ಟೂರ್ನಿಯಲ್ಲಿ 17 ತಂಡಗಳು ಪೈಪೋಟಿ

ವಿಜಯಪುರ: ಕರ್ನಾಟಕ, ಆಂಧ್ರಪ್ರದೇಶ, ಓಡಿಸ್ಸಾ, ಸಿಕ್ಕಿಂ ರಾಜ್ಯಗಳಮಹಿಳಾ ತಂಡಗಳು ಹಾಗೂ ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಓಡಿಸ್ಸಾ, ಆಸ್ಸಾಂ, ಸಿಕ್ಕಿಂ, ಉತ್ತರ ಪ್ರದೇಶ, ಪೂರ್ವಾಂಚಲ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪುದುಚೇರಿಯ ಪುರುಷರ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ ಎಂದು ಅಶೋಕ ಕುಮಾರ ಜಾಧವ ತಿಳಿಸಿದರು.

ಆರಂಭಿಕ ಪಂದ್ಯಗಳು ಎಂಟು ಓವರ್‌ ಹಾಗೂ ಸೆಮಿ ಫೈನಲ್‌, ಫೈನಲ್‌ ಪಂದ್ಯಗಳು 12 ಓವರ್‌ ಇರಲಿವೆ ಎಂದು ಹೇಳಿದರು.

ಈ ಟೂರ್ನಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಕೂಡ ನಡೆಯಲಿದೆ. ಮುಂಬರುವ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಈ ತಂಡ ಭಾರತವನ್ನು ಪ್ರತಿನಿಧಿಸಲಿದೆ ಎಂದರು.

ಎಂಟು ಜನ ಅನುಭವಿ ಅಂಪೈರ್‌ಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಯೂಟ್ಯೂಬ್‌ ಚಾನಲ್‌ನಲ್ಲಿ ಪಂದ್ಯಗಳ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.