ADVERTISEMENT

ತಂಗಡಗಿಯಲ್ಲಿ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 15:13 IST
Last Updated 28 ಜುಲೈ 2021, 15:13 IST
ಮುದ್ದೇಬಿಹಾಳ ತಾಲ್ಲೂಕಿನ ಪ್ರವಾಹ ಪೀಡಿತ ಕುಂಚಗನೂರ ಕಮಲದಿನ್ನಿ ಗ್ರಾಮಗಳಿಗೆ ಬುಧವಾರ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಭೇಟಿ ನೀಡಿ ಪರಸ್ಥಿತಿ ಪರಿಶೀಲಿಸಿದರು
ಮುದ್ದೇಬಿಹಾಳ ತಾಲ್ಲೂಕಿನ ಪ್ರವಾಹ ಪೀಡಿತ ಕುಂಚಗನೂರ ಕಮಲದಿನ್ನಿ ಗ್ರಾಮಗಳಿಗೆ ಬುಧವಾರ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಭೇಟಿ ನೀಡಿ ಪರಸ್ಥಿತಿ ಪರಿಶೀಲಿಸಿದರು   

ಮುದ್ದೇಬಿಹಾಳ(ವಿಜಯಪುರ): ಆಲಮಟ್ಟಿ ಜಲಾಶಯದಿಂದ ಹೆಚ್ಚು ನೀರು ಹೊರಗೆ ಹರಿಸಿದ್ದರಿಂದ ತಾಲ್ಲೂಕಿನ ತಂಗಡಗಿ ಸಮೀಪದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಪ್ರವಾಹದಿಂದ ತೊಂದರೆಗೊಳಗಾಗುವ ತಾಲ್ಲೂಕಿನ ಕುಂಚಗನೂರ ಹಾಗೂ ಕಮಲದಿನ್ನಿ ಗ್ರಾಮಗಳಿಗೆ ಬುಧವಾರ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಈಗ 3.80 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಸದ್ಯಕ್ಕೆ ತಾಲ್ಲೂಕಿನ ಯಾವುದೇ ಗ್ರಾಮಗಳ ಜನರಿಗೆ ತೊಂದರೆಯಾಗಿಲ್ಲ. ತೀರಾ ತೊಂದರೆಯಾದರೆ ಆಯಾ ಗ್ರಾಮದ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆಗೆಯಲಾಗುವುದು ಎಂದರು.

ADVERTISEMENT

ಈ ಸಂಬಂಧ ಬಿಸಿಯೂಟದ ಸಿಬ್ಬಂದಿಗೆ ತಯಾರಿರುವಂತೆ ಸೂಚಿಸಲಾಗಿದೆ ಎಂದರು.

ಬಹಳಷ್ಟು ಮನೆಗಳಿಗೆ ನೀರು ನುಗ್ಗಿದರೆ ಕುಂಚಗನೂರ ಗ್ರಾಮದಲ್ಲಿ, ಕಮಲದಿನ್ನಿಯ ಜನರನ್ನು ತಂಗಡಗಿಗೆ, ನಾಗರಾಳ ಹಾಗೂ ಹಂಡರಗಲ್ಲದ ಜನರನ್ನು ಯರಝರಿ ಗ್ರಾಮಕ್ಕೆ, ದೇವೂರ ಗ್ರಾಮದ ಜನರನ್ನು ನೇಬಗೇರಿ ಗ್ರಾಮದ ಶಾಲೆಗಳಿಗೆ ಸ್ಥಳಾಂತರಿಸಲು ಯೋಜಿಸಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಇ.ಒ ಹೊಕ್ರಾಣಿ, ಪಿ.ಎಸ್‌ಐ ಎಂ.ಬಿ.ಬಿರಾದಾರ, ಪಿ.ಡಿ.ಒ ಉಮೇಶ ರಾಠೋಡ, ಪ್ರವಾಹ ನೋಡಲ್ ಅಧಿಕಾರಿ ವಿಶ್ವನಾಥ ಬಡಿಗೇರ, ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ಗ್ರಾಮ ಲೆಕ್ಕಿಗ ಸಚಿನ ಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.