ADVERTISEMENT

ಆಕಾಂಕ್ಷಿಗಳಲ್ಲಿ ಗರಿಗೆದರಿದ ಆಸೆ

ಅಧ್ಯಕ್ಷ, ಉಪಾಧ್ಯಕ್ಷ  ಮೀಸಲಾತಿ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 4:57 IST
Last Updated 9 ಆಗಸ್ಟ್ 2024, 4:57 IST
ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯ
ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯ   

ದೇವರಹಿಪ್ಪರಗಿ: ರಾಜ್ಯದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ ವಿವಿಧ ಪಕ್ಷಗಳ ಸದಸ್ಯರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೇರುವ ಆಸೆ ಗರಿಗೆದರಿದಂತಾಗಿದೆ.

ಪಟ್ಟಣದ ಪಂಚಾಯಿತಿಯ 17 ವಾರ್ಡ್‌ಗಳಿಗೆ 2021ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿಯಿಂದ 4, ಕಾಂಗ್ರೆಸ್‌ನಿಂದ 7, ಜೆಡಿಎಸ್‌ನಿಂದ 4 ಹಾಗೂ ಪಕ್ಷೇತರರಾಗಿ ಇಬ್ಬರು ಆಯ್ಕೆಯಾಗಿದ್ದರು. ಈಗ ಮೂರು ವರ್ಷಗಳ ತರುವಾಯ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಹಾಗೂ ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಈಗ ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಒಟ್ಟು ನಾಲ್ವರು ಸದಸ್ಯರು ಮೀಸಲಾತಿಯಡಿ ಅರ್ಹರಾಗಿದ್ದಾರೆ. ಇದರಲ್ಲಿ 10ನೇ ವಾರ್ಡ್‌ನ ಕಾಸಪ್ಪ ಜಮಾದಾರ ಹಾಗೂ 15ನೇ ವಾರ್ಡ್‌ನ ಬಶೀರ್ ಅಹ್ಮದ್ ಕಸಾಬ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇನ್ನೂ ಜೆಡಿಎಸ್ ಪಕ್ಷದಿಂದ ಜಯಶ್ರೀ ದೇವಣಗಾಂವ ಅರ್ಹ ಆಯ್ಕೆಯಾಗಿದ್ದರೆ, ಬಿಜೆಪಿಯಿಂದ 5ನೇ ವಾರ್ಡ್‌ನ ಮಂಗಳೇಶ ಕಡ್ಲೇವಾಡ ಅರ್ಹ ಹಾಗೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಬಹುಮತಕ್ಕೆ 9 ಜನ ಸದಸ್ಯ ಬಲ ಅಗತ್ಯವಾಗಿದ್ದು, ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನೋಡಲಾಗಿ ಇಲ್ಲಿ ಎರಡು ಪಕ್ಷಗಳ ಸೇರಿದ 8 ಜನ ಸದಸ್ಯರಿದ್ದು ಬಹುಮತಕ್ಕೆ ಒಬ್ಬ ಸದಸ್ಯರ ಕೊರತೆಯಿದೆ. ಇಲ್ಲಿ 3ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಕಾಸುಗೌಡ ಬಿರಾದಾರ ಮೈತ್ರಿ ಪರವಾಗಿ ನಿಂತಲ್ಲಿ ಅಧ್ಯಕ್ಷ ಹುದ್ದೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಒಲಿಯುವುದರಲ್ಲಿ ಸಂದೇಹವಿಲ್ಲ.

ಕಾಂಗ್ರೆಸ್ ಪಕ್ಷದಿಂದ 7 ಜನ ಸದಸ್ಯರು ಆಯ್ಕೆಯಾಗಿದ್ದು, ಇವರಲ್ಲಿ ನಾಲ್ವರು ಸದಸ್ಯರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಅಧ್ಯಕ್ಷ ಹುದ್ದೆಗೆ ಮೀಸಲಾತಿಯಡಿ ಅರ್ಹರಾಗಿದ್ದಾರೆ. ಆದರೆ, ಬಹುಮತಕ್ಕೆ ಇಬ್ಬರು ಸದಸ್ಯರ ಅಗತ್ಯತೆಯಿದೆ. ಇಬ್ಬರು ಪಕ್ಷೇತರರಲ್ಲಿ 6 ನೇ ವಾರ್ಡ್‌ನ ಗುರುರಾಜ ಗಡೇದ ಒಬ್ಬರು ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ 8 ಜನ ಸದಸ್ಯರ ಬಲ ದೊರಕಿದಂತಾಗುತ್ತದೆ. ಒಂದು ವೇಳೆ ರಾಜ್ಯದಲ್ಲಿ ಪಕ್ಷಗಳ ಮೈತ್ರಿ ಕುರಿತಾಗಿ ತಲೆಕೆಡಿಸಿಕೊಳ್ಳದೇ ಜೆಡಿಎಸ್‌ನ ಒಬ್ಬ ಸದಸ್ಯ ಹಾಗೂ ಪಕ್ಷೇತರ ಅಭ್ಯರ್ಥಿಗಳಿಬ್ಬರು ತಮಗೆ ಬೇಕಾದ ಅನುಕೂಲಕರ ಅಭ್ಯರ್ಥಿಗೆ ಮತ ನೀಡಬೇಕು ಎಂದು ಭಾವಿಸಿ ಮತ ಚಲಾಯಿಸಿದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಧ್ಯಕ್ಷ ಹುದ್ದೆಗೆ ಏರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಪಟ್ಟಣ ಪಂಚಾಯಿತಿಗೆ 2021ರ ಡಿಸೆಂಬರ್ ನಲ್ಲಿ ಸದಸ್ಯರಾಗಿ ಆಯ್ಕೆಯಾಗಿ ಕಳೆದ ಎರಡುವರೆ ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಲು ಕಾತರದಿಂದ ಕಾಯುತ್ತಿರುವ ಆಕಾಂಕ್ಷಿಗಳಿಗೆ ಸರ್ಕಾರ ಚುನಾವಣೆಯ ದಿನಾಂಕ ಘೋಷಣೆ ಮಾಡಿ ಕೂಡಲೇ ಚುನಾವಣೆ ನಡೆಸುವವರೆಗೆ ನಂಬಿಕೆಯೇ ಇಲ್ಲದಂತಾಗಿದೆ.

ಒಂದು ವೇಳೆ ಮೀಸಲಾತಿ ಪ್ರಶ್ನಿಸಿ ರಾಜ್ಯದ ಯಾವುದೇ ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯ ಕೋರ್ಟ್‌ ಮೆಟ್ಟಿಲು ತುಳಿದಲ್ಲಿ ಮತ್ತೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮುಂದೂಡಬಹುದು ಎಂಬ ಆತಂಕ ಮನೆಮಾಡಿದೆ. ಆದ್ದರಿಂದ ಮೊದಲು ಚುನಾವಣೆ ಜರುಗಬೇಕು ಎಂದು ಪಟ್ಟಣ ಪಂಚಾಯಿತಿ ಬಹುತೇಕ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.