ವಿಜಯಪುರ: ಕೊರ್ತಿ ಕೊಲ್ಹಾರ ಸೇತುವೆ ನಿರ್ಮಾಣ, ನೀರಾವರಿ ಯೋಜನೆ ಅನುಷ್ಠಾನ, ಹೊಸ ತಾಲ್ಲೂಕುಗಳ ರಚನೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರ ಪಾತ್ರವಿಲ್ಲ, ಈ ಕುರಿತು ಮಾತನಾಡುವ ಯಾವ ಹಕ್ಕು ಸಹ ಅವರಿಗಿಲ್ಲ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರ್ತಿ ಕೊಲ್ಹಾರ ಸೇತುವೆ, ಮುಳವಾಡ ಏತ ನೀರಾವರಿ ಮೊದಲನೇ ಹಂತ ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ನಾನ್ನ ಹೋರಾಟದ ಪ್ರತಿಫಲವಾಗಿದೆ. ಆದರೆ ಇವುಗಳನ್ನು ತಮ್ಮ ಸಾಧನೆ ಎಂದು ಲೇಬಲ್ ಹಚ್ಚಿಕೊಳ್ಳುವುದನ್ನು ಸಚಿವರು ಬಿಡಬೇಕು ಎಂದರು.
ಈ ಹಿಂದೆ ಸಣ್ಣ ಸೇತುವೆ ಮಳೆಗಾಲದಲ್ಲಿ ಬಂದ್ ಆಗುತ್ತಿತ್ತು. ಇದಕ್ಕೆ ಶಾಶ್ವತವಾಗಿ ಸೇತುವೆ ನಿರ್ಮಾಣ ಮಾಡುವಂತೆ ದೊಡ್ಡ ಹೋರಾಟಗಳನ್ನು ಮಾಡಲಾಗಿದೆ. ಕೊಲ್ಹಾರದಿಂದ ವಿಜಯಪುರ ನಗರಕ್ಕೆ ನೀರು ಸಂಪರ್ಕ ಬಂದ್ ಮಾಡಿದ್ದೇವೆ, ಉಪವಾಸ ಕೂಡ ಮಾಡಿದ್ದೇವೆ ಎಂದರು.
ಮುಳವಾಡ ಮೊದಲನೇ ಹಂತದ ನೀರಾವರಿ ಯೋಜನೆ ಮೂಲಕ 30 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಿಸಿದ್ದು ನನ್ನ ಶಾಸಕತ್ವದ ಅವಧಿಯಲ್ಲಿಯೇ. ನೀರಾವರಿಯಲ್ಲಿಯೂ ಶಾಸಕ ಶಿವಾನಂದ ಪಾಟೀಲರ ಪಾತ್ರ ಎಳ್ಳಷ್ಟೂ ಇಲ್ಲ ಎಂದರು.
ಜಿಲ್ಲೆಯಲ್ಲಿ ಹೊಸ ತಾಲ್ಲೂಕು ಕೇಂದ್ರಗಳ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮನವೊಲಿಸಿದ್ದು ಸಹ ನಾನು, ಬಬಲೇಶ್ವರ, ತಿಕೋಟಾದಲ್ಲಿ ಹೊಸ ಕಚೇರಿ ನಿರ್ಮಾಣಗೊಂಡಿವೆ, ಆದರೆ ಕೊಲ್ಹಾರ, ನಿಡಗುಂದಿಯಲ್ಲಿ ಇನ್ನೂ ಕಚೇರಿ ನಿರ್ಮಾಣಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ಎನ್.ಟಿ.ಪಿ.ಸಿ. ಕೂಡಗಿಯಲ್ಲಿ ತರುವಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹಾಗೂ ನನ್ನ ಪಾತ್ರ ಪ್ರಮುಖವಾಗಿದೆ. ಕೆಲವರು ವಿನಾಕಾರಣ ಎನ್.ಟಿ.ಪಿ.ಸಿಯಂದ ಹಾನಿಯಾಗಲಿದೆ ಎಂದು ಅಪ್ರಚಾರ ನಡೆಸಿದರೂ ಸಹ ಪ್ರಯತ್ನ ಪಟ್ಟು ಎನ್.ಟಿ.ಪಿ.ಸಿ ನಿರ್ಮಿಸಲು ಶ್ರಮಿಸಿದೆ. ಇದರಲ್ಲಿ ಸಚಿವ ಶಿವಾನಂದ ಪಾಟೀಲರ ಪಾತ್ರವಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಕಲ್ಲಪ್ಪ ಸೊನ್ನದ, ಇಸ್ಮಾಯಿಲ್ ತಹಶೀಲ್ದಾರ, ಪರಶುರಾಮ ಗಣಿ ಉಪಸ್ಥಿತರಿದ್ದರು.
ಬಹಿರಂಗ ಚರ್ಚೆಗೆ ಸಿದ್ಧ:
ಕೊಲ್ಹಾರ ಸೇತುವೆ ನಿರ್ಮಾಣ ನೀರಾವರಿ ಯೋಜನೆ ಅನುಷ್ಠಾನ ಹೊಸ ತಾಲ್ಲೂಕುಗಳ ರಚನೆ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ ಪೆಂಡಾಲ್ ಸಹ ನಾನೇ ಹಾಕುವೆ ಅವರು ಚರ್ಚೆಗೆ ಬರಲಿ ಸಾಕು ಎಂದರು ಸವಾಲು ಹಾಕಿದರು. ನಾನು ಬೇಜವಾಬ್ದಾರಿತನದಿಂದ ಮಾತನಾಡುವುದಿಲ್ಲ ಅವರು ವೇದಿಕೆಗೆ ಬರಲಿ ನಾನು ಬರುವೆ ಈ ಸಾಧನೆ ಅವರ ಸಾಧನೆ ಎಂದು ಸಚಿವ ಶಿವಾನಂದ ಪಾಟೀಲರು ಸಾಬೀತು ಪಡಿಸಿದರೆ ಅಲ್ಲಿಯೇ ‘ಪಿಸ್ತೂಲ್’ ಮೂಲಕ ನಾನು ಹೊಡೆದುಕೊಂಡು ಸಾಯುತ್ತೇನೆ. ಸಾವಿಗೆ ನಾನು ಹೆದರುವ ಮಗ ನಾನಲ್ಲ ಈ ಸವಾಲು ಅವರು ಸ್ವೀಕರಿಸಲಿ ಎಂದರು.
ಸಚಿವರಿಗೆ ಸನ್ಮಾನ ಮಾಡುವೆ:
ಆಲಮಟ್ಟಿ ಜಲಾಶಯ ಎತ್ತರಿಸಲಿ ಮನೆ ಆಸ್ತಿ ಕಳೆದುಕೊಳ್ಳುವವರಿಗೆ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ₹1 ಲಕ್ಷ ಕೋಟಿ ಅನುದಾನ ನೀಡುವುದು ಹಾಗೂ ಮುಳವಾಡ ಏತ ನೀರಾವರಿ ಮೂರನೇಯ ಹಂತವನ್ನು ಅನುಷ್ಠಾನಗೊಳಿಸಿದರೆ ನಾನೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವ ಶಿವಾನಂದ ಪಾಟೀಲರಿಗೆ ಸನ್ಮಾನ ಮಾಡುವೆ ಎಂದರು. ಬಾಂಡ್ ಮೂಲಕ ಹಣ ಸಂಗ್ರಹಿಸುತ್ತಿರೋ ಸಾಲ ಮಾಡುತ್ತಿರೋ ಗೊತ್ತಿಲ್ಲ ಏನೇ ಮಾಡಲಿ ಒಟ್ಟಾರೆ ಯೋಜನೆ ಅನುಷ್ಠಾನಗೊಳಿಸಿ ಎಂದರು. ಕೊಲ್ಹಾರ ಪುನರ್ ವಸತಿ ಕೇಂದ್ರಕ್ಕಾಗಿ ಹೊಸದಾಗಿ 100 ಎಕರೆ ಜಮೀನು ಖರೀದಿ ಮಾಡಿ ಅಲ್ಲಿ ವಿವಿಧ ಕಟ್ಟಡ ನಿರ್ಮಿಸಬೇಕು. ನಾಳೆ ಈ ಘೋಷಣೆಯನ್ನು ಉಪಮುಖ್ಯಮಂತ್ರಿಗಳಿಂದ ಘೋಷಣೆ ಮಾಡಿದರೆ ನಾನೇ ಸನ್ಮಾನ ಮಾಡುವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.