ADVERTISEMENT

ಹಾಳು ಕೊಂಪೆಯಾದ ತಾವರಖೇಡ ಪುನರ್ವಸತಿ ಕೇಂದ್ರ

ಶಾಲಾ ಕಟ್ಟಡವಿದ್ದರೂ ಕಲಿಯಲು ಮಕ್ಕಳಿಲ್ಲ, ದೇವಸ್ಥಾನವಿದ್ದರೂ ಗಂಟೆ ನಾದವಿಲ್ಲ!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 4:45 IST
Last Updated 23 ಏಪ್ರಿಲ್ 2025, 4:45 IST
ಮಕ್ಕಳ ಓಡಾಟವಿಲ್ಲದೆ‌ ಬಣಗುಡುತ್ತಿರುವ ತಾವರಖೇಡ ಪುನರ್ ವಸತಿ ಕೇಂದ್ರದ ಶಾಲೆಯ ನೋಟ
ಮಕ್ಕಳ ಓಡಾಟವಿಲ್ಲದೆ‌ ಬಣಗುಡುತ್ತಿರುವ ತಾವರಖೇಡ ಪುನರ್ ವಸತಿ ಕೇಂದ್ರದ ಶಾಲೆಯ ನೋಟ   

ಆಲಮೇಲ: ತಾಲ್ಲೂಕಿನ ತಾವರಖೇಡ ಗ್ರಾಮವು ಭೀಮಾ ಹಿನ್ನೀರಿನಿಂದ ಮುಳುಗಡೆಯಾಗುವುದು, ಪ್ರತಿವರ್ಷ ಮಳೆಗಾಲದಲ್ಲಿ ಭೀಮೆ ಉಕ್ಕಿ ಬಂದಾಗ ಇಲ್ಲಿನ ಜನರು ಸಂಕಷ್ಟಕೀಡಾಗುವುದು ಸಾಮಾನ್ಯ ಎಂಬಂತಾಗಿದೆ.
ಸೊನ್ನದ ಹತ್ತಿರ ನಿರ್ಮಿಸಿದ ಬ್ಯಾರೇಜು ನೀರು ಸಂಗ್ರಹದಿಂದಾಗಿ ಹಿನ್ನೀರು ಈ ಗ್ರಾಮಕ್ಕೆ ಸುತ್ತುವರೆಯುತ್ತದೆ. ಇದರಿಂದಾಗುವ ತೊಂದರೆಯನ್ನು ಗಮನಿಸಿದ ಭೀಮಾ ಏತನೀರಾವರಿ ನಿಗಮವು ಕಡಣಿ ಸಮೀಪ 54 ಎಕರೆ ಭೂಮಿಯನ್ನು ಖರೀದಿಸಿ ಪುನರ್ವಸತಿ ಕೇಂದ್ರ ನಿರ್ಮಿಸಿದೆ. ಮೂಲ ಸೌಕರ್ಯಗಳನ್ನು, ಶಾಲೆ, ದೇಗುಲ, ರಸ್ತೆ ಇತ್ಯಾದಿಗಳನ್ನು ಮಾಡಿ ಎಲ್ಲರಿಗೂ ನಿವೇಶನ ಹಂಚಿಕೆ ಮಾಡಿತ್ತು. ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ದೊಡ್ಡ ಕಾರ್ಯಕ್ರಮ ಮಾಡಿ ಎಲ್ಲರಿಗೂ ಹಕ್ಕುಪತ್ರಗಳನ್ನು ನೀಡಿ ಎಲ್ಲರೂ ಇಲ್ಲಿ ಬಂದು ನೆಲೆಸುವಂತೆ ಹೇಳಿದ್ದರು.
ಈಗ ಹಂಚಿಕೆಯಾದ 500ಕ್ಕೂ ಹೆಚ್ಚು ನಿವೇಶನಗಳಲ್ಲಿ ಯಾರೂ ಮನೆ ಕಟ್ಟಿಸಿಲ್ಲ. ಅಲ್ಲಿಗೆ ಬಂದು ತಳವೂ ಊರಿಲ್ಲ, ಎಲ್ಲರೂ ಹಳೆ ತಾವರಖೇಡದಲ್ಲಿ ಹಾಗೂ ತೋಟದ ವಸ್ತಿಗಳಲ್ಲಿ ನೆಲೆಯೂರಿದ್ದಾರೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ದೂರುವ ಅಲ್ಲಿನ ಜನರು ನಮಗೆ ಪೂರ್ಣಪ್ರಮಾಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿಕೊಂಡು ಅಲ್ಲಿಗೆ ಹೋಗುತ್ತಿಲ್ಲ.
ಶಾಲಾ ಕಟ್ಟಡವಿದೆ ಅಲ್ಲಿ ಕಲಿಯಲು ಮಕ್ಕಳಿಲ್ಲ. ದೇವಸ್ಥಾನದ ಕಟ್ಟಡಗಳಿವೆ, ಆದರೆ ಗಂಟೆ ಜಾಗಟೆಗಳ ನಾದವಿಲ್ಲ. ಸಮುದಾಯ ಭವನಗಳಿವೆ ಸದ್ದುಗದ್ದಲವಿಲ್ಲ. ಡಾಂಬರು ಬಳೆದ ರಸ್ತೆಗಳು ಇವೆ, ಒಂದೂ ವಾಹನ ಸಂಚರಿಸುವುದಿಲ್ಲ. ಇದೊಂದು ಹಾಳುಕೊಂಪೆ ತರಹ ಭಾಸವಾಗುತ್ತಿದೆ.
‘ಎಲ್ಲ ಕಡೆಗೂ ಮುಳ್ಳಿನ ಗಿಡಗಳು ಆವರಿಸಿಕೊಂಡು ಬೆಳೆಯುತ್ತಿವೆ. ಸರ್ಕಾರಿ ಕಟ್ಟಡಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಈ ಹೊಸ ಪ್ರದೇಶಕ್ಕೆ ತಾವರಖೇಡದ ಎಲ್ಲಾ ಕುಟುಂಬಗಳು ಇಲ್ಲಿ ನೆಲೆಸಿದರೆ ಮಾತ್ರ ಸರ್ಕಾರದ ಈ ಬೃಹತ್ ಯೋಜನೆಗೆ ಸಾರ್ಥಕತೆ ಸಿಗುತ್ತದೆ’ ಎನ್ನುತ್ತಾರೆ ಕಡಣಿಯ ಉಮೇಶ ಕ್ಷತ್ರಿ.
‘ನಾವು ಬರಲು ರೆಡಿ ಇದ್ದೇವೆ. ಅಲ್ಲಿ ಮೊದಲು ದಿನದ 24 ಗಂಟೆ ನೀರು ಬರುವಂತಾಗಬೇಕು’ ಎಂದು ಅಣ್ಣಾರಾಯ ಅಫಜಲಪುರ ಹೇಳುತ್ತಾರೆ. ಈ ಕುರಿತು ಕಡಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ಅವರನ್ನು ವಿಚಾರಿಸಿದರೆ, ‘ಪಂಚಾಯತಿಯಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ನಾವು ನೀಡಲು ಸಿದ್ಧರಿದ್ದೇವೆ. ಅಲ್ಲಿ ಹತ್ತರಷ್ಟಾದರೂ ಕುಟುಂಬಗಳು ಬಂದು ನೆಲೆಸಲಿ, ಅವರಿಗೆ ತೊಂದರೆಯಾಗದಂತೆ ನಾವು ಎಲ್ಲ ರೀತಿಯಿ ಸಹಕಾರ ನೀಡುತ್ತೇವೆ’ ಎಂದರು.
ತಾವರಖೇಡ ಗ್ರಾಮದ ನಿವಾಸಿ ಬಸವಂತ್ರಾಯ ಬಿರಾದಾರ ಮಾತನಾಡಿ, ‘ಬಹಳ ವರ್ಷಗಳ ಹಿಂದೆಯೇ ಪುಡಿಗಾಸು ನೀಡಿದ್ದಾರೆ. ನಮಗೆ ಮನೆ ಕಟ್ಟಲು ಹಣ ನೀಡಬೇಕು. ಪಂಚಾಯಿತಿಯಿಂದ ಮನೆಗಳನ್ನು ಕಟ್ಟಿಕೊಡಬೇಕು’ ಎಂದರು.
‘ಹಳೆ ಊರಲ್ಲಿನ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು, ಮಕ್ಕಳನ್ನು ಶಾಲೆಗೆ ಇಲ್ಲಿಂದ ಕರೆದುಕೊಂಡು ಹೋಗುವುದು ಕಷ್ಟ, ಹಾಗಾಗಿ ಮುಳುಗಡೆ ಪ್ರದೇಶದಲ್ಲಿಯೇ ತರಗತಿಗಳು ನಡೆಯುತ್ತಿದ್ದು ಆ ಬಗ್ಗೆಯೂ ಶಿಕ್ಷಣ ಇಲಾಖೆ ಕ್ರಮವಹಿಸಬೇಕಿದೆ. ದೀಢಿರನೇ ನೀರು ಬಂದು ಅನಾಹುತ ಮಾಡುವುದಕ್ಕೂ ಮುಂಚೆ ಎಲ್ಲರನ್ನು ಪುನರ್ವಸತಿ ಕೇಂದ್ರಕ್ಕೆ ಬರುವಂತೆ ಜನಪ್ರತಿನಿಧಿಗಳು ಮನವೊಲಿಸುವ ಅಗತ್ಯವಿದೆ.

ತಾವರಖೇಡ ಪುನರ್ ವಸತಿ ಕೇಂದ್ರದಲ್ಲಿ ನೂತನವಾಗಿ ದೇವಾಲಯ ನಿರ್ಮಿಸಿದ್ದರೂ ಗಂಟೆ ಜಾಗಟೆಗಳ ನಾದವಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.