ADVERTISEMENT

ಉಸ್ತುವಾರಿ ಸಚಿವರ ಬಗ್ಗೆ ಅಂಗಡಿಗೆ ಮಾಹಿತಿ ಕೊರತೆ: ಮಾಜಿ ಶಾಸಕ ಪ್ರೊ. ರಾಜು ಆಲಗೂರ

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:15 IST
Last Updated 28 ಮೇ 2025, 15:15 IST
ರಾಜು ಆಲಗೂರ
ರಾಜು ಆಲಗೂರ   

ವಿಜಯಪುರ: ‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ಯಾರನ್ನೂ ಬೆಳೆಸಿಲ್ಲ, ತಾವಷ್ಟೇ ಬೆಳೆದಿದ್ದಾರೆ ಎಂಬ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿಕೆ ಖಂಡನೀಯ. ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ಎಷ್ಟು ಜನರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಯಾರನೆಲ್ಲ ಶಾಸಕರನ್ನಾಗಿ ಮಾಡಿದ್ದಾರೆ ಎಂಬುದರ ಮಾಹಿತಿ ಇಲ್ಲದೇ ಮಾತನಾಡಿದ್ದಾರೆ’ ಎಂದು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಹೇಳಿಕೆ ಸಂ‍ಪೂರ್ಣ ಸುಳ್ಳು. ಎಂ.ಬಿ.ಪಾಟೀಲ ಅವರ ತಂದೆ ಬಿ.ಎಂ. ಪಾಟೀಲ ಅವರ ಅವಧಿಯಿಂದಲೂ ಜಿಲ್ಲೆಯಲ್ಲಿ ಹಲವು ನಾಯಕರು ರಾಜಕೀಯವಾಗಿ ಬೆಳೆದಿದ್ದಾರೆ. ತಂದೆಯಂತೆ ಎಂ.ಬಿ.ಪಾಟೀಲರು 2002ರಿಂದ ಇಲ್ಲಿಯ ವರೆಗೆ ಅನೇಕರನ್ನು ಬೆಳೆಸಿದ್ದಾರೆ. ಅನೇಕರಿಗೆ ಟಿಕೆಟ್ ನೀಡಿದ್ದಾರೆ, ಚುನಾವಣೆ ಮಾಡಿದ್ದಾರೆ, ತಮ್ಮ ಸಮುದಾಯ ಹೊರತು ಬೇರೆ ಬೇರೆ ಸಮುದಾಯಗಳಿಗೂ ಆದ್ಯತೆ ನೀಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಎಂ.ಬಿ.ಪಾಟೀಲರು ಹಿಂದು ವಿರೋಧಿಗಳಾಗಿದ್ದಾರೆ ಎಂಬುದೂ ಖಂಡನೀಯ. ಸಂವಿಧಾನದ ಆಶಯದಂತೆ ಎಲ್ಲ ಧರ್ಮದವರನ್ನು ಕಾಂಗ್ರೆಸ್ ಮುಖಂಡರು ವಿಶ್ವಾಸದಿಂದ ನೋಡುತ್ತಾರೆ. ಎಲ್ಲ ಧರ್ಮಿಯರಿಗೂ ಸಮಾನ ಅವಕಾಶ ನೀಡಿ ಒಟ್ಟಿಗೆ ಕರೆದುಕೊಂಡು ಹೋಗಿದ್ದಾರೆ’ ಎಂಬುದನ್ನು ಅಂಗಡಿ ಅವರು ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಖರ್ಗೆ ವಿರುದ್ಧ ಕುತಂತ್ರ:

‘ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯವನ್ನು ಎತ್ತಿ ತೋರಿಸುತ್ತಿರುವ, ಪ್ರಶ್ನಿಸುವ ಮೂಲಕ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿಯವರಿಗೆ ಬಿಸಿ ತುಪ್ಪವಾಗಿದ್ದಾರೆ. ಇದನ್ನು ಸಹಿಸಲಾಗದೇ ಬಿಜೆಪಿ ಮುಖಂಡರು ಅವರ ವಿರುದ್ಧ ಕುಂತ್ರ ರೂಪಿಸಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ರಾಜ್ಯ ಮುಖಂಡರು ಖರ್ಗೆ ಅವರನ್ನು ಗುರಿಯಾಗಿಸಿ, ದಲಿತ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ದಲಿತರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮಾಡಿದರೆ ಬಿಜೆಪಿಯನ್ನು ವಿರೋಧಿಸುವ ಕೆಲಸ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ‌ಹಲವು ವರ್ಷ ಖರ್ಗೆ ಅವರ ಮನೆ ಬಾಗಿಲು ಕಾದರು‌. ಇದೀಗ ಬಿಜೆಪಿಗೆ ಹೋಗಿ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನಾರಾಯಣಸ್ವಾಮಿ ಅವರು ಎಂದು ಆರ್‌ಎಸ್‌ಎಸ್‌ನವರ  ಚಡ್ಡಿ ತಲೆ ಮೇಲೆ ಹೊತ್ತರೋ ಅಂದೇ ಅವರು ತತ್ವ ಭ್ರಷ್ಟರಾಗಿದ್ದಾರೆ’ ಎಂದರು.

‘ಬಿಜೆಪಿ ನಾಯಕರು ತಾವೇ ಖಾಸಗಿಯಾಗಿ ಸಮೀಕ್ಷೆ ಮಾಡಿ, ಪಕ್ಷ 160 ಸ್ಥಾನ ಗೆಲ್ಲುತ್ತೇವೆ, ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ತಿಳಿಯದಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ‘ಸಚಿವ ಎಂ.ಬಿ.ಪಾಟೀಲ ಅವರು ಎಲ್ಲ ಸಮಾಜದವರನ್ನು ಬೆಳೆಸಿದ್ದಾರೆ. ಜಿಲ್ಲೆಯನ್ನು ನೀರಾವರಿ ಮಾಡಿದ್ದಾರೆ. ಬಿಜೆಪಿಯವರ ಹಾಗೆ ಕೋಮುವಾದಿಗಳಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಗಂಗಾಧರ ಸಂಬಣ್ಣಿ, ಅಸ್ಪಾಕ್ ಮನಗೂಳಿ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.