ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅರ್ಥಹೀನ ಬೀದಿ ಮಾತುಗಳು ಜಿಲ್ಲೆ, ರಾಜ್ಯದ ಜನರಿಗೆ ವಾಕರಿಗೆ ತರಿಸಿದೆ ಎಂದು ಎನ್‌ಸಿಪಿ ಜಿಲ್ಲಾ ಘಟಕದ ಅಧ್ಯಕ್ಷ, ಪಂಚಮಸಾಲಿ ಸಮಾಜದ ಮುಖಂಡ ಬಿ.ಎಂ.ಬಿರಾದಾರ ಮನಗೂಳಿ ಹೇಳಿದರು.
ಯತ್ನಾಳ ಅವರು ಇನ್ನು ಮುಂದಾದರೂ ವಿಜಯಪುರ ಕ್ಷೇತ್ರದ ಅಭಿವೃದ್ಧಿ, ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು. ತಮ್ಮ ವಿರೋಧಿ ರಾಜಕಾರಣಿಗಳನ್ನು ವೈಯಕ್ತಿಕ ನಿಂದನೆ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಸಚಿವ ಶಿವಾನಂದ ಪಾಟೀಲ ಅವರ ವೈಯಕ್ತಿಕ ವಿಷಯವನ್ನು ಯತ್ನಾಳ ಅವರು ರಾಜಕೀಯಕ್ಕೆ ತಂದು ಅವಾಚ್ಯ ಶಬ್ಧ ಬಳಕೆ ಮಾಡಿರುವುದು ಖಂಡನೀಯ. ಒಂದೇ ಜಾತಿಯ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಅಹಿತಕರ ಸಂಘರ್ಷ ಪಂಚಮಸಾಲಿ ಸಮಾಜ, ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದರು.
ಶಿವಾನಂದ ಅವರು ಒಬ್ಬ ಮುತ್ಸದ್ಧಿ ರಾಜಕಾರಣಿ, ಮೃದು ಸ್ವಾಭಾವದ ವ್ಯಕ್ತಿತ್ವ, ಚಾಣಕ್ಷ ರಾಜಕೀಯ ನಡೆಯಿಂದ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಬಗ್ಗೆ ಯತ್ನಾಳ ಅವರು ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿರುವುದು ಖಂಡನೀಯ ಎಂದರು.
ಯತ್ನಾಳ ಅವರ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿವಾನಂದ ಪಾಟೀಲ ತಮ್ಮ ನೈತಿಕತೆ ಪ್ರದರ್ಶಿಸಿದ್ದಾರೆ. ಸಚಿವರ ನಿಲುವು ಯೋಗ್ಯವಾಗಿದೆ. ಯತ್ನಾಳ ಅವರಿಗೆ ತಮ್ಮ ಮಾತಿನ ಬಗ್ಗೆ, ಸವಾಲಿನ ಬಗ್ಗೆ ಕಿಂಚಿತ್ತು ಗೌರವ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸವಾಲು ಸ್ವೀಕರಿಸಬೇಕು. ಇಲ್ಲವಾದರೆ ಶಿವಾನಂದ ಪಾಟೀಲರನ್ನು ಬಹಿರಂಗವಾಗಿ ಕ್ಷಮೆ ಕೇಳಬೇಕು, ಮುಂದಿನ ದಿನಗಳಲ್ಲಿ ನಾಲಿಗೆ ಹರಿಬಿಡುವುದನ್ನು ನಿಲ್ಲಿಸಬೇಕು ಎಂದರು.
ರಾಜ್ಯ ರಾಜಕಾರಣಕ್ಕೆ ವಿಜಯಪುರ ಇದುವರೆಗೂ ಮೇಲ್ಪಂಕ್ತಿಯಲ್ಲಿದೆ. ಯತ್ನಾಳ ಅವರ ಇತ್ತೀಚಿನ ನಡೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬರತೊಡಗಿದೆ. ನಾಲಿಗೆ ಹರಿಬಿಡುವುದರಿಂದ ಜನರಿಗೆ, ಕ್ಷೇತ್ರಕ್ಕೆ ಯಾವುದೇ ಲಾಭವಿಲ್ಲ. ಇದೇ ರೀತಿ ವರ್ತನೆಯನ್ನು ಯತ್ನಾಳ ಮುಂದುವರಿಸಿದರೆ ಜನ ಬೆನ್ನುಹತ್ತಿ ಹೊಡೆಯುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ ಮತ್ತು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನಡೆಯಿಂದ ಪಂಚಮಸಾಲಿ ಸಮಾಜ ಎಂದರೆ ರಾಜ್ಯದಲ್ಲಿ ನಗೆಪಾಟೀಲಿಗೆ ಒಳಗಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.