ADVERTISEMENT

ಕೋವಿಡ್‌ನಿಂದ ಮೂವರು ಮಕ್ಕಳು ಅನಾಥ: ಡಿಸಿ

ಕೋವಿಡ್ ಮೂರನೇ ಅಲೆ; ಮಕ್ಕಳ ಚಿಕಿತ್ಸೆಗೆ ಅಗತ್ಯ ಕ್ರಮ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:31 IST
Last Updated 10 ಜೂನ್ 2021, 17:31 IST
ಪಿ.ಸುನೀಲ್‌ ಕುಮಾರ್
ಪಿ.ಸುನೀಲ್‌ ಕುಮಾರ್   

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೂವರು ಮಕ್ಕಳು ತಂದೆ, ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ ಹಾಗೂ 289 ಮಕ್ಕಳು ತಮ್ಮ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಚಿವರ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಪೋಷಕರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಪೋಷಕರಿಬ್ಬರನ್ನು ಕಳೆದುಕೊಂಡಿರುವ ಮಕ್ಕಳಿಗಾಗಿಇಂಡಿ ನಗರದ ಶ್ರೀದಾನಮ್ಮದೇವಿ ಮಕ್ಕಳ ತೆರೆದ ತಂಗುದಾಣ ಸಂಸ್ಥೆಯನ್ನು ಗುರುತಿಸಲಾಗಿದೆ. 6 ವರ್ಷದ ಮಕ್ಕಳಿಗಾಗಿ ಶ್ರೀ ಸಿದ್ದೇಶ್ವರ ದತ್ತು ಸ್ವೀಕಾರ ಕೇಂದ್ರದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ADVERTISEMENT

ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಪೋಷಕರು ಇಲಾಖೆಯಿಂದ ಸಹಾಯ ಬಯಸಿದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ: 1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರವಾಣಿ ಸಂ: 08352-276354 ಹಾಗೂ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

1653 ಮಕ್ಕಳಿಗೆ ಪಾಸಿಟಿವ್‌:

ಜಿಲ್ಲೆಯಲ್ಲಿ 18 ವರ್ಷದೊಳಗಿನ 1653 ಮಕ್ಕಳಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಹೇಳಿದರು.

ಕೊರೊನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ ಜಿಲ್ಲಾಡಳಿತದ ವತಿಯಿಂದ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಕೋವಿಡ್ ಭಾದಿತ ಮಕ್ಕಳಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ವಿಜಯಪುರದ ಐಶ್ವರ್ಯ ಮಹಿಳಾ ಸಂಸ್ಥೆ ಮತ್ತು ವಿಜಯಲಕ್ಷಿ ಎಜ್ಯುಕೇಶನ್ ಆ್ಯಂಡ್‌ ಸೋಷಿಯಲ್ ವೆಲ್‌ಫೇರ್ ಸೊಸೈಟಿಯಲ್ಲಿ ಎರಡು ಕ್ವಾರಂಟೈನ್ ಸೆಂಟರ್‌ಗಳನ್ನು ಆರಂಭಿಸಲಾಗಿದೆ ಎಂದರು.

652 ಹಾಸಿಗೆ:

ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗಾಗಿ ಒಟ್ಟು 612 ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ 40 ಸೇರಿದಂತೆ ಒಟ್ಟು 652 ಹಾಸಿಗೆಗಳು ಲಭ್ಯ ಇವೆ. ಖಾಸಗಿ ಆಸ್ಪತ್ರೆಗಳಲ್ಲಿ 344, ಸರ್ಕಾರಿ ಆಸ್ಪತ್ರೆಗಳಲ್ಲಿ 15 ಸೇರಿದಂತೆ ಒಟ್ಟು 359 ಜನರಲ್ ಬೆಡ್‌ಗಳಿವೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ 136, ಸರ್ಕಾರಿ ಆಸ್ಪತ್ರೆಗಳಲ್ಲಿ 19 ಸೇರಿದಂತೆ ಒಟ್ಟು 155 ಎನ್‌ಐಸಿಯು ಬೆಡ್ ಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ 124, ಸರ್ಕಾರಿ ಆಸ್ಪತ್ರೆಗಳಲ್ಲಿ 6 ಸೇರಿದಂತೆ ಒಟ್ಟು 130 ಪಿಐಸಿಯು ಬೆಡ್ ಹಾಗೂಖಾಸಗಿ ಆಸ್ಪತ್ರೆಗಳಲ್ಲಿ ಎನ್‌ಐಸಿಯು 16 ವೆಂಟಿಲೇಟರ್‌ಗಳಿವೆ ಎಂದರು.

ಮಕ್ಕಳಿಗಾಗಿ ಮಾಸ್ಕ್‌ ವ್ಯವಸ್ಥೆ, ಆಕ್ಸಿಜನ್ ಪೈಪ್‌ ಮತ್ತು ಮಕ್ಕಳ ವಯೋ ಗುಂಪಿನ ಅನುಗುಣವಾಗಿ ಔಷಧ ದಾಸ್ತಾನು ಮಾಡಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಒಬ್ಬ ತಜ್ಞ ವೈದ್ಯರು, ಸ್ಟಾಫ್‌ ನರ್ಸ್‌ ಮತ್ತು ಗ್ರುಪ್ ‘ಡಿ’ ನೌಕರರು ಚಿಕ್ಕಮಕ್ಕಳ ಆರೈಕೆಗಾಗಿ ಲಭ್ಯವಿರುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 25 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿದ್ದು, ಪ್ರಸ್ತುತ 11 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕೋವಿಡ್‌ನಿಂದಾಗಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಉಳಿದ 14 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ 44 ಹೆಣ್ಣು ಮತ್ತು 40 ಗಂಡು ಮಕ್ಕಳು ಇದ್ದಾರೆ ಹಾಗೂ ಜಿಲ್ಲೆಯಲ್ಲಿ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ಸಲುವಾಗಿ ಒಟ್ಟು 17 ಸರ್ಕಾರಿ, ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.