ADVERTISEMENT

ಕಾಯಕಲ್ಪಕ್ಕೆ ಕಾದಿರುವ ಅಂಬೇಡ್ಕರ್ ವೃತ್ತ..!

​ಪ್ರಜಾವಾಣಿ ವಾರ್ತೆ
Published 11 ಮೇ 2019, 19:45 IST
Last Updated 11 ಮೇ 2019, 19:45 IST
ತಿಕೋಟಾದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ
ತಿಕೋಟಾದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ   

ತಿಕೋಟಾ:ಗ್ರಾಮದ ಹಳೆ ಬಸ್‌ ನಿಲ್ದಾಣದಲ್ಲಿ ವಿಜಯಪುರ–ಅಥಣಿ ರಸ್ತೆಗೆ ಹೊಂದಿಕೊಂಡಂತೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತವಿದೆ.

ಹಲವು ದಶಕಗಳ ಅಂಬೇಡ್ಕರ್‌ ವೃತ್ತದ ಕನಸು ನನಸಾಗಿದ್ದು 2003ರಲ್ಲಿ. ಹಂತ ಹಂತವಾಗಿ ವೃತ್ತದ ಅಭಿವೃದ್ಧಿ ನಡೆದಿದ್ದು, ಕಾಯಕಲ್ಪಕ್ಕೆ ಇಂದಿಗೂ ಕಾದಿದೆ.

2003ರಲ್ಲಿ ತಿಕೋಟಾ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದ ಮುಕೇಶ ಪರನಾಕರ, ದಿ.ಸಿದ್ದಾರ್ಥ ಮಲಕನವರ, ಯಮನಪ್ಪ ಮಲಕನವರ, ಮನೋಜ ಪರನಾಕರ, ರಮೇಶ ಧರನಾಕರ, ಸಿದ್ದಾರ್ಥ ಪರನಾಕರ ಮತ್ತಿತರ ಸ್ನೇಹಿತರು ಹಲ ದಶಕಗಳಿಂದ ನಿರ್ಮಿಸಬೇಕು ಎಂದುಕೊಂಡಿದ್ದ ಅಂಬೇಡ್ಕರ್‌ ವೃತ್ತದ ಕನಸಿನ ಸಾಕಾರಕ್ಕೆ ಮುಂದಾದರು.

ADVERTISEMENT

ಕಬ್ಬಿಣದ ಬ್ಯಾರಲೊಂದನ್ನು ತಂದು, ಅದರೊಳಗೆ ಧ್ವಜದ ಕಂಬವನ್ನಿಟ್ಟು, ಸುತ್ತಲೂ ಕಾಂಕ್ರೀಟ್‌ನಿಂದ ಧ್ವಜ ಭದ್ರಗೊಳಿಸಿ, ನೀಲಿ ಧ್ವಜವೊಂದನ್ನು ಹಾರಿಸುವ ಮೂಲಕ ಅಂಬೇಡ್ಕರ್‌ ವೃತ್ತಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಸೇರಿದಂತೆ ಹಲವರು ಇದಕ್ಕೆ ಸಾಕ್ಷಿಯಾದರು.

ಈ ವೃತ್ತ ನಿರ್ಮಾಣದ ಬಳಿಕ, ತಿಕೋಟಾ ಪೊಲೀಸ್ ಠಾಣೆಗೆ ಪಿಎಸ್‌ಐ ಆಗಿ ವರ್ಗವಾಗಿ ಬಂದ ಸೋಮಲಿಂಗ ಕರದಳ್ಳಿ ಅಂಬೇಡ್ಕರ್‌ ವೃತ್ತದ ಅಭಿವೃದ್ಧಿಗೆ ಮುನ್ನುಡಿ ಬರೆದರು. ಆರ್ಥಿಕ ಸಹಕಾರ ಒದಗಿಸಿ, ವೃತ್ತಕ್ಕೆ ಗ್ರಾನೈಟ್ ಕಲ್ಲು ಅಳವಡಿಸುವಂತೆ ಸ್ಥಳೀಯ ಮುಖಂಡರಿಗೆ ಜವಾಬ್ದಾರಿ ನೀಡಿದರು. ರವಿಗೌಡ ಪಾಟೀಲ, ಮುಕೇಶ, ಮನೋಜ ಪರನಾಕರ ಮುತುವರ್ಜಿಯಿಂದ ಈ ಕೆಲಸ ನಿರ್ವಹಿಸಿದರು.

ಅಂದಿನಿಂದ ಇಂದಿನವರೆಗೂ ಅಂಬೇಡ್ಕರ್‌ ವೃತ್ತದಲ್ಲಿ ನೀಲಿ ಧ್ವಜ ನಿತ್ಯ ಹಾರಾಡುತ್ತಿದೆ. ದಲಿತ ಶಕ್ತಿಯ ಪ್ರೇರಕವಾಗಿ ‘ಜೈ ಭೀಮ್‌’ ಬರಹವೂ ಈ ವೃತ್ತದಲ್ಲಿರುವುದು ವಿಶೇಷ.

ಮಹಾ ಮಾನವತಾವಾದಿ, ಸಮಾನತೆಯ ಹರಿಕಾರ, ಶಿಕ್ಷಣ–ಸಂಘಟನೆ–ಹೋರಾಟದ ಸೂತ್ರವನ್ನು ದಲಿತ ಸಮುದಾಯಕ್ಕೆ ಬೋಧಿಸಿದ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ವೃತ್ತ ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ. ಗ್ರಾಮ ಪಂಚಾಯ್ತಿಯಲ್ಲಿ ಹೆಚ್ಚಿನ ಅನುದಾನವಿಲ್ಲ. ಆದ್ದರಿಂದ ಚುನಾಯಿತ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.

ಡಾ.ಬಿ.ಆರ್.ಅಂಬೇಡ್ಕರ್‌ ಕಂಚಿನ ಮೂರ್ತಿ ವೃತ್ತದಲ್ಲಿ ಪ್ರತಿಷ್ಠಾಪನೆಗೊಳ್ಳಬೇಕಿದೆ. ಈ ವೃತ್ತದ ಸುತ್ತಲೂ ಕಬ್ಬಿಣದ ಗ್ರಿಲ್‌ ಅಳವಡಿಸಿ, ಪುಟ್ಟ ಸುಂದರ ಉದ್ಯಾನ ನಿರ್ಮಿಸಿ, ಆಕರ್ಷಣೀಯ ತಾಣವನ್ನಾಗಿ ಮಾಡಬೇಕಿದೆ. ಸನಿಹದಲ್ಲೇ ಹೈಮಾಸ್ಟ್‌ ಅಳವಡಿಸುವ ಜತೆ, ವಿದ್ಯುತ್‌ ದೀಪಾಲಂಕಾರವನ್ನು ಮಾಡಬೇಕಿದೆ ಎಂಬ ಆಗ್ರಹ ಮುಕೇಶ ಪರನಾಕರ, ರಮೇಶ ಧರನಾಕರ, ಯಮನಪ್ಪ ಮಲಕನವರ, ಮಹಾಂತೇಶ ಪರನಾಕರ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.