ADVERTISEMENT

ಎಂಟು ತಿಂಗಳಲ್ಲಿ 21 ಸಾವು; 90 ಜನರಿಗೆ ಗಾಯ!

ಸಾವಿನ ದಾರಿಯಾಗುತ್ತಿರುವ ವಿಜಯಪುರ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ

ಬಸವರಾಜ ಎಸ್.ಉಳ್ಳಾಗಡ್ಡಿ
Published 3 ಸೆಪ್ಟೆಂಬರ್ 2022, 13:09 IST
Last Updated 3 ಸೆಪ್ಟೆಂಬರ್ 2022, 13:09 IST
ರಾಷ್ಟ್ರೀಯ ಹೆದ್ದಾರಿ 218 ರ ಗಾಣದೇವಿ ವೃತ್ತದ ಬಳಿ ವಾಹನಗಳು, ಬಸ್ಸುಗಳು ಕೊಲ್ಹಾರ ಪಟ್ಟಣ ಪ್ರವೇಶಿಸುವ ಹಾಗೂ ನಿರ್ಗಮಿಸುವ ಅಪಾಯಕಾರಿ ತಿರುವಿನ ಸ್ಥಳ
ರಾಷ್ಟ್ರೀಯ ಹೆದ್ದಾರಿ 218 ರ ಗಾಣದೇವಿ ವೃತ್ತದ ಬಳಿ ವಾಹನಗಳು, ಬಸ್ಸುಗಳು ಕೊಲ್ಹಾರ ಪಟ್ಟಣ ಪ್ರವೇಶಿಸುವ ಹಾಗೂ ನಿರ್ಗಮಿಸುವ ಅಪಾಯಕಾರಿ ತಿರುವಿನ ಸ್ಥಳ   

ಕೊಲ್ಹಾರ(ವಿಜಯಪುರ): ಪಟ್ಟಣದ ಯುಕೆಪಿ ಕ್ರಾಸ್‌ ಮೂಲಕಹಾದು ಹೋಗಿರುವ ರಾಜ್ಯದ ಪ್ರಮುಖ ಹೆದ್ದಾರಿಯಾದ ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಪ್ರತಿನಿತ್ಯ ಅಪಘಾತಗಳು ಸಾಮಾನ್ಯವಾಗಿದ್ದು, ಸಾವುನೋವುಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿವೆ. ಈ ಹೆದ್ದಾರಿಯಲ್ಲಿ ಸಂಚರಿಸುವ ಅಮಾಯಕ ಪ್ರಯಾಣಿಕರಿಗೆ ಹಾಗೂ ರೈತರ ಪಾಲಿಗೆ ಸಾವಿಗೆಆಹ್ವಾನ ನೀಡುವ ರಹದಾರಿಯಾಗಿದೆ.

ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ 2 ರವರೆಗೆ ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 36 ಅಪಘಾತಗಳು ನಡೆದಿವೆ. 21 ಜನ ಸಾವಿಗೀಡಾಗಿ 90 ಜನ ಗಾಯಗೊಂಡಿರುವ ಆಘಾತಕಾರಿ ಅಂಕಿ ಅಂಶಗಳು ಬೆಳಕಿಗೆ ಬಂದಿವೆ. ಅಲ್ಲದೇ, ಒಟ್ಟು 36 ಕುರಿಗಳು ಜೀವ ಕಳೆದುಕೊಂಡು 18 ಕುರಿಗಳು ಗಾಯಗೊಂಡಿವೆ. ಇನ್ನೂ ಹೆದ್ದಾರಿಯಲ್ಲಿ ವಾಹನಗಳಿಗೆ ಸಿಲುಕಿ ಜೀವ ಕಳೆದುಕೊಂಡ ಬೀದಿನಾಯಿಗಳ ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಿವೆ.

ಸ್ಥಳೀಯ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಿಂತ ಪ್ರತಿದಿನ ಸಂಭವಿಸುವ ಹೆದ್ದಾರಿ ಮೇಲಿನ ಅಪಘಾತಗಳ ನಿರ್ವಹಣಾ ಒತ್ತಡವೇ ಹೆಚ್ಚಾಗುತ್ತಿದೆ!

ADVERTISEMENT

ಅಂತರರಾಜ್ಯ ಗಡಿ ಜಿಲ್ಲೆಗಳು, ರಾಜ್ಯದ ಪ್ರಮುಖ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವುದರಿಂದ ಈ ಹೆದ್ದಾರಿಯಲ್ಲಿ ಸರಕುಸಾಗಾಣಿಕೆ ಮತ್ತು ಸಾರ್ವಜನಿಕ ವಾಹನಗಳ ಸಂಚಾರ ಹೆಚ್ಚಿದೆ. ಅಲ್ಲದೇ, ತಾಲ್ಲೂಕಿನ ಹಳ್ಳಿಗಳ ಹೆಚ್ಚಿನ ಹೊಲಗದ್ದೆಗಳ ಸಂಪರ್ಕ ರಸ್ತೆಗಳಿಗೆ ತೆರಳಲು ರೈತರು ಹೆದ್ದಾರಿ ದಾಟಿಕೊಂಡೇ ಹೋಗಬೇಕಾಗಿದ್ದು, ಅಪಘಾತಕ್ಕೀಡಾಗಿ ಸಾಕಷ್ಟು ಅಮಾಯಕ ರೈತರು, ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕೃಷ್ಣಾ ನದಿ ಸೇತುವೆಯಿಂದ ಕಾರಜೋಳ ಕ್ರಾಸ್ ವರೆಗೂ ಹೆದ್ದಾರಿಯಲ್ಲಿ ಹೆಚ್ಚು ಏರಿಳಿತಗಳು, ತಿರುವುಗಳು ಇರುವುದರಿಂದ ಮತ್ತು ರಾತ್ರಿ ಸಮಯದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ. ಅಲ್ಲದೇ, ಹೆದ್ದಾರಿ ಉದ್ದಕ್ಕೂ ಸರಿಯಾದ ಸೂಚನಾಫಲಕಗಳಿಲ್ಲ, ಕೆಲವಡೆ ಸೂಚನಾ ಫಲಕಗಳಿದ್ದರೂ ಸಾಕಷ್ಟು ಜನರಿಗೆ ಅವುಗಳ ಬಗ್ಗೆ ಅರಿವಿಲ್ಲ.

ಹೆದ್ದಾರಿಯಲ್ಲಿ ಅಪಘಾತಗಳು, ಸಾವುನೋವುಗಳು ಹೆಚ್ಚಾಗುತ್ತಿರುವ ಕುರಿತು ಡಿವೈಎಸ್ಪಿ ನೇತೃತ್ವದಲ್ಲಿ ಪಿಡಬ್ಲೂಡಿ ಇಇ ಹಾಗೂ ಇನ್‌ಸ್ಪೆಕ್ಟರ್ ಒಳಗೊಂಡ ಸಮಿತಿ ರಚಿಸಿದ್ದು, ವರದಿ ಪರಿಶೀಲಿಸಿ ಆದಷ್ಟು ಬೇಗ ಕ್ರಮಕೈಗೊಳ್ಳಲಾಗುವುದು

–ಎಚ್.ಡಿ.ಅನಂದಕುಮಾರ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ

ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ಕಡಿಮೆಗೊಳಿಸಲು ಕೃಷ್ಣಾ ನದಿ ಸೇತುವೆಯಿಂದ ಬಸವೇಶ್ವರ ಸಕ್ಕರೆ ಕಾರ್ಖಾನೆ ವರೆಗೂ ಸರ್ವಿಸ್ ರಸ್ತೆ ನಿರ್ಮಿಸಿ, ರೋಡ್ ಬ್ರೇಕರ್ ಅಳವಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ

–ಮಲ್ಲಿಕಾರ್ಜುನ ಬೆಳ್ಳುಬ್ಬಿ,ಮುಖಂಡ, ಕೊಲ್ಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.