ADVERTISEMENT

‘ಯುನಿಟಿ ಮಾರ್ಚ್’ 12ರಂದು: ಸಂಸದ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:42 IST
Last Updated 5 ನವೆಂಬರ್ 2025, 5:42 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯ‍ಪುರ: ‘ಭಾರತ ಸರ್ಕಾರದ ಮೇರಾ ಯುವ ಭಾರತ(ಮೈ ಭಾರತ್‌), ಕೇಂದ್ರ ಸಂವಹನ ಇಲಾಖೆ, ಎನ್.ಎಸ್. ಎಸ್ ಜಿಲ್ಲಾ ಘಟಕ, ಭಾರತ ಸೇವಾ ದಳದಿಂದ ಮಾಜಿ ಗೃಹ ಸಚಿವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 150ನೇ ಜನ್ಮ ಜಯಂತಿ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ಜಿಲ್ಲೆಯಲ್ಲಿ ಆಚರಿಸಲಾಗುವುದು’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 12ರಂದು ಏಕತಾ ನಡಿಗೆ/ ಯೂನಿಟಿ ಮಾರ್ಚ್ ನಡೆಸಲಾಗುವುದು ಎಂದು ತಿಳಿಸಿದರು.

‘ನಗರದ ವಿವಿಧ ಕಾಲೇಜುಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಏಕತಾ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ.  ಶಿವಾಜಿ ವೃತ್ತದಿಂದ ಆರಂಭವಾಗಿ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ಸಮಾಪನಗೊಳ್ಳಲಿದೆ. ನಂತರ ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದರು.

ADVERTISEMENT

ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಸ್ವೀಕಾರ, ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಇರಲಿದೆ ಎಂದು ತಿಳಿಸಿದರು.

ವಜ್ರಹನುಮಾನ್ ದೇವಸ್ಥಾನ ಬಳಿ ರೈಲ್ವೆ ಕೆಳ ಸೇತುವೆ (ಅಂಡರ್ ಪಾಸ್) ನಿರ್ಮಾಣಕ್ಕೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲೆ ಅನುಮೋದನೆ ಪಡೆದು ನಿರ್ಮಾಣ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಇದುವರೆಗೂ ಯಾವುದೇ ಪಕ್ಷದಿಂದ ಒಬ್ಬರೇ ಒಬ್ಬರು ದಲಿತ ಮುಖ್ಯಮಂತ್ರಿ ಆಗಿಲ್ಲದಿರುವುದು ಬೇಸರದ ಸಂಗತಿ. ಆದರೆ, ಭವಿಷ್ಯದಲ್ಲಿ ದಲಿತರೊಬ್ಬರು ಆಗುವುದು ನಿಶ್ಚಿತ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತ ಹಿರಿಯ ದಲಿತ ಮನುಷ್ಯ. ಅವರನ್ನು ಸಿಎಂ ಮಾಡಲು ಕಾಂಗ್ರೆಸ್‌ಗೆ ಏನು ದಾಡಿಯಾಗಿದೆ ಎಂದು ಕಿಡಿಕಾರಿದರು.

ಕನೇರಿ ಶ್ರೀಗಳ ನಿರ್ಬಂಧ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ನಾನೊಬ್ಬರ ದಲಿತ ಮನುಷ್ಯ ನನಗೆ ಆ ವಿಷಯ ಕೇಳಬೇಡಿ. ಜಾತಿ, ಸಮಾಜಕ್ಕೆ ಯಾರೂ ಕೈ ಹಚ್ಚಬಾರದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೈ ಭಾರತನ ಜಿಲ್ಲಾ ಯುವ ಅಧಿಕಾರಿ ಗೌತಮ ರೆಡ್ಡಿ, ಕೇಂದ್ರ ಸಂವಹನ ಇಲಾಖೆಯ ಸಿ. ಕೆ. ಸುರೇಶ್, ವಿಜಯ ಜೋಶಿ, ಸಂದೀಪ್ ಪಾಟೀಲ್, ಶ್ರೀಧರ್ ಬಿಜ್ಜರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.