ADVERTISEMENT

ವಿಜಯಪುರ: ಅಪಾಯಕಾರಿ ‘ವಜ್ರ ಹನುಮಾನ್‌’ ರೈಲ್ವೆ ಮೇಲ್ಸೇತುವೆ

ನೈರುತ್ಯ ರೈಲ್ವೆಯಿಂದ ₹ 26.25 ಕೋಟಿ ಮೊತ್ತದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಾಣ

ಬಸವರಾಜ ಸಂಪಳ್ಳಿ
Published 26 ಫೆಬ್ರುವರಿ 2024, 6:39 IST
Last Updated 26 ಫೆಬ್ರುವರಿ 2024, 6:39 IST
ವಿಜಯಪುರ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ವಜ್ರ ಹನುಮಾನ್‌ ರೈಲ್ವೆ ಮೇಲ್ಸೇತುವೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ವಜ್ರ ಹನುಮಾನ್‌ ರೈಲ್ವೆ ಮೇಲ್ಸೇತುವೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಇಲ್ಲಿನ ಬಾಗಲಕೋಟೆ ರಸ್ತೆಯ(ಹುಬ್ಬಳ್ಳಿ ಮಾರ್ಗ) ವಜ್ರ ಹನುಮಾನ್‌ ಮಂದಿರದ ಬಳಿ ನೈರುತ್ಯ ರೈಲ್ವೆಯು ₹ 26.25 ಕೋಟಿ ಮೊತ್ತದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ವಾಹನಗಳ ಸಂಚಾರಕ್ಕೆ ಉಪಯೋಗವಾಗಿರುವುದಕ್ಕಿಂತ ಅಪಾಯಕಾರಿಯಾಗಿರುವುದೇ ಹೆಚ್ಚು!

ಹೌದು, ರೈಲು ಮಾರ್ಗ ಹಾದುಹೋಗಿರುವುದು ವಜ್ರಹನುಮಾನ್‌ ಗುಡಿಯ ಹತ್ತಿರ. ವಾಸ್ತವವಾಗಿ ವಜ್ರ ಹನುಮಾನ್‌ ಗುಡಿ ಬಳಿ ಕೆಳ ಸೇತುವೆ (ಅಂಡರ್‌ ಪಾಸ್‌) ಅಥವಾ ಮೇಲ್ಸೇತುವೆ ನಿರ್ಮಾಣವಾಗಬೇಕಿತ್ತು. ಆದರೆ, ಸುಮಾರು 500 ಮೀಟರ್‌ ಆಚೆಗೆ ರಿಂಗ್‌ ರೋಡ್‌ಗೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಇದರಿಂದ ಬೆಂಗಳೂರು ರಸ್ತೆ ಕಡೆಯಿಂದ ಬಬಲೇಶ್ವರ–ಅಥಣಿ ರಸ್ತೆಯತ್ತ ರಿಂಗ್‌ ರೋಡ್‌ನಲ್ಲಿ ತೆರಳುವ ವಾಹನಗಳಿಗ ಮಾತ್ರ ಉಪಯೋಗವಾಗುತ್ತದೆಯೇ ಹೊರತು, ಹುಬ್ಬಳ್ಳಿ ಕಡೆಯಿಂದ ವಿಜಯಪುರ ನಗರಕ್ಕೆ ಪ್ರವೇಶಿಸುವ ವಾಹನಗಳಿಗೆ ಯಾವುದೇ ಅನುಕೂಲವಿಲ್ಲ. ಬದಲಿಗೆ ನಿತ್ಯ ತೊಂದರೆಯಾಗುತ್ತದೆ.

ಈಗಲೂ ರೈಲುಗಳು ತೆರಳುವ ಸಂದರ್ಭದಲ್ಲಿ ವಜ್ರಹನುಮಾನ್‌ ಗುಡಿ ಬಳಿ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಇದೆ. ಅಲ್ಲದೇ, ರೈಲ್ವೆ ಗೇಟ್‌ ತೆರೆದ ಬಳಿಕ ಒಮ್ಮೆಗೆ ಎರಡೂ ಕಡೆಯಿಂದ ವಾಹನಗಳು ಪ್ರವೇಶಿಸುವುದರಿಂದ ಸಂಚಾರ ದಟ್ಟಣೆಯಾಗಿ ವಾಹನ ಸವಾರರು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾದ ಸ್ಥಿತಿ ಇದೆ.

ADVERTISEMENT

ಮೇಲ್ಸೇತುವೆ ಮತ್ತು ಕೆಳಸೇತುವೆ ಎರಡನ್ನೂ ಒಳಗೊಂಡಿರುವ  ವಜ್ರಹನುಮಾನ್‌ ರೈಲ್ವೆ ಸೇತುವೆಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನಗಳು ಸಂಚರಿಸಲು ಹಾವು–ಏಣಿ ಆಟವಾಡಬೇಕಾದ ಸ್ಥಿತಿ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಸೇತುವೆಗೆ ಡಿಕ್ಕಿ ಹೊಡೆಯುವ ಅಥವಾ ಸೇತುವೆ ನಡುವೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು.

ಚಾಲಕ ಎಷ್ಟೇ ಚಾಲಾಕಿಯಾಗಿದ್ದರೂ ಈ ರೈಲ್ವೆ ಸೇತುವೆಯಲ್ಲಿ ವಾಹನಗಳನ್ನು ಒಮ್ಮೆ ನಿಲ್ಲಿಸಿ, ರಿವರ್ಸ್‌ ಬಂದು ಮತ್ತೆ ಮುಂದಕ್ಕೆ ಹೋಗಬೇಕಾದ ಸ್ಥಿತಿ ಇದೆ. ಅಷ್ಟೊಂದು ಅವೈಜ್ಞಾನಿಕ ಐಡಿಯಾದೊಂದಿಗೆ ನಮ್ಮ ಎಂಜಿನಿಯರ್‌ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸಿದ್ದಾರೆ ಎಂದರೆ ಅಚ್ಚರಿಯೇ ಸರಿ.

ಈ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಿ ಕೇವಲ ಮೂರು ವರ್ಷವಾಗುವುದರಲ್ಲೇ ಸೇತುವೆ ಮೇಲ್ಭಾಗದಲ್ಲೇ ಬೃಹತ್‌ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ನಿರ್ವಹಣೆ ಇಲ್ಲದೇ ದಿನದಿಂದ ದಿನಕ್ಕೆ ಈ ರೈಲ್ವೆ ಮೇಲ್ಸೇತುವೆ ಶಿಥಿಲಗೊಳ್ಳತೊಡಗಿದೆ.

ಈ ರೈಲ್ವೆ ಸೇತುವೆ ಕೆಳಭಾಗದಲ್ಲಿ (ಅಂಡರ್‌ ಪಾಸ್‌) ವಿಜಯಪುರ ನಗರದಿಂದ ಹುಬ್ಬಳ್ಳಿಯತ್ತ ವಾಹನಗಳು ನೇರವಾಗಿ ತೆರಳಲು ಆಗದೇ, ಸುತ್ತಿ ಬಳಸಿ ಚಲಿಸಬೇಕಾದ ಸ್ಥಿತಿ ಇದೆ. ಅದರಲ್ಲೂ ಇಕ್ಕಟ್ಟಾದ ಕೆಳಸೇತುವೆಯಲ್ಲಿ ಬಸ್ಸು, ಲಾರಿ, ಗೂಡ್ಸ್‌ ವಾಹನಗಳು ನೇರವಾಗಿ ತೆರಳಲು ಆಗದೇ, ಒಮ್ಮೆ ನಿಂತು, ರಿವರ್ಸ್‌ ಬಂದು ಮತ್ತೆ ಮುಂದಕ್ಕೆ ಹೋಗಬೇಕಾಗುತ್ತದೆ. ಸ್ವಲ್ಪ ಹೆಚ್ಚು–ಕಡಿಮೆಯಾದರೂ ವಾಹನಗಳು ಸೇತುವೆಯನ್ನು ಸವರಿ, ನಡುವೆ ಸಿಲುಕಿಕೊಳ್ಳುವ ಅಪಾಯಕಾರಿ ಸ್ಥಿತಿ ಇದೆ.

ರೈಲ್ವೆ ಕೆಳಸೇತುವೆಯಲ್ಲಿ ವಿಜಯಪುರ ನಗರದ ಕಡೆಯಿಂದ ಹುಬ್ಬಳ್ಳಿ ಮಾರ್ಗದತ್ತ ತೆರಳುವಾಗ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಕಾಣಿಸುವುದೇ ಇಲ್ಲ. ಇದರಿಂದ ಪ್ರತಿ ವಾಹನ ಚಾಲಕರು ಅನಿವಾರ್ಯವಾಗಿ ಕಿವಿಗಡಚಿಕ್ಕುವ ಹಾರ್ನ್‌ ಮಾಡಲೇ ಬೇಕು. ಇದು ಸುತ್ತಮುತ್ತಲಿನ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳು ಇಲ್ಲಿ ಪ್ರತಿದಿನ ಅಡಚಣೆ ಅನುಭವಿಸುವುದನ್ನು ನೋಡಬಹುದಾಗಿದೆ.  

ಹುಬ್ಬಳ್ಳಿ ಕಡೆಯಿಂದ ವಜ್ರ ಹನುಮಾನ್‌ ರೈಲ್ವೆ ಗೇಟ್‌ ಕಡೆ ಬರಲೂ ಮೇಲ್ಸೇತುವೆ ಪಕ್ಕದಲ್ಲಿ ಕಿರಿದಾದ ರಸ್ತೆ ಇದ್ದು, ಇಲ್ಲಿಯೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಜೊತೆಗೆ ಸೋಲಾಪುರ– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ(ಬೆಂಗಳೂರು ರಸ್ತೆ) ಕಡೆಯಿಂದ ರಿಂಗ್‌ ರಸ್ತೆ ಮೂಲಕ ಬರುವ ವಾಹನಗಳು ವಜ್ರಹನುಮಾನ್‌ ರೈಲ್ವೆ ಗೇಟ್‌ ಕಡೆ ಬರಲು ಇರುವ ರೈಲ್ವೆ ಕಳೆಸೇತುವೆ ಕೂಡ ಇಕ್ಕಟ್ಟಾಗಿದೆ. ಒಟ್ಟಾರೆ ಇಲ್ಲಿ ವಾಹನಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಹಾವು–ಏಣಿ ಆಟವಾಡಬೇಕಾದ ಸ್ಥಿತಿ ಇದೆ.

ಯೋಜನಾಬದ್ಧವಾಗಿ ಈ ರೈಲ್ವೇ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣವಾಗದೇ ಇರುವುದರಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸಬೇಕಾಗಿದೆ. ರೈಲ್ವೆ ಮೇಲ್ಸೇತುವೆ ಸುತ್ತಮುತ್ತಲು ಇರುವ ರಸ್ತೆಗಳು ಸಂಪೂರ್ಣ ಕಿತ್ತುಹೋಗಿದ್ದು, ಗುಂಡಿಗಳು ಬಿದ್ದಿವೆ. ಅಲ್ಲದೇ, ಸರಿಯಾದ ಮಾರ್ಗಸೂಚಿ ಫಲಕಗಳು ಕೂಡ ಇಲ್ಲದೇ ಇರುವುದರಿಂದ ರಾತ್ರಿ ವೇಳೆಯಂತೂ ಈ ಮಾರ್ಗದಲ್ಲಿ ವಾಹನ ಸವಾರರು ಭಯದಿಂದ ಸಂಚರಿಸಬೇಕಾದ ಸ್ಥಿತಿ ಇದೆ.

ಇದೇ ರೈಲ್ವೆ ಮೇಲ್ಸೇತುವೆಯಲ್ಲಿ ಬೆಂಗಳೂರು, ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಬೇಗಂ ತಲಾಬ್‌ ಕಡೆಯಿಂದ ವಜ್ರ ಹನುಮಾನ್‌ ರೈಲ್ವೆ ಗೇಟ್‌ ಕಡೆ ‘ಯು’ ಟರ್ನ್‌ ಆಗಬೇಕೆಂದರೂ ಒಮ್ಮೆ ನಿಲ್ಲಿಸಿ, ರಿವರ್ಸ್‌ ಹೋಗಿ ಬಳಿಕ ವಾಹನಗಳನ್ನು ತಿರುಗಿಸಬೇಕಾದ ಸ್ಥಿತಿ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಯಾಗುವುದು ಖಚಿತ. ಇಷ್ಟೇ ಅಲ್ಲದೇ, ರೈಲ್ವೆ ಮೇಲ್ಸೇತುವೆ ಮೇಲೂ ವಾಹನಗಳು ವೇಗವಾಗಿ ಹೋಗದಂತೆ ಹಂಪ್ಸ್‌ ಅಳವಡಿಸಿರುವುದು ವಿಶೇಷ!

ಅಷ್ಟಕ್ಕೂ ಈ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿರುವ ಉದ್ದೇಶವಾದರೂ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ. 

₹57 ಲಕ್ಷದಲ್ಲಿ ದುರಸ್ತಿ: ಸೌದಾಗರ

ವಿಜಯಪುರ: ವಜ್ರ ಹನುಮಾನ್‌ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ಬಳಿಕ ನೈರುತ್ಯ ರೈಲ್ವೆಯು  ಪಾಲಿಕೆಗೆ ಹಸ್ತಾಂತರಿಸಿದೆ. ಹೀಗಾಗಿ ಸೇತುವೆ ಮತ್ತು ಸೇತುವೆ ಅಕ್ಕಪಕ್ಕದ ರಸ್ತೆಗಳನ್ನು ಪಾಲಿಕೆಯಿಂದ ದುರಸ್ತಿ ಮಾಡಬೇಕಾಗಿದೆ ಎಂದು ಆಯುಕ್ತ ಬದ್ರುದ್ದೀನ್‌ ಸೌದಾಗರ ‘ಪ್ರಜಾವಾಣಿ’ಗೆ ತಿಳಿಸಿದರು.

ಸೇತುವೆ ರಸ್ತೆ ದುರಸ್ತಿಗೆ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅಂದಾಜು ₹ 57 ಲಕ್ಷ ಅಗತ್ಯ ಇದೆ. ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಲೆಕ್ಕಾಚಾರದ ಪ್ರಕಾರ ಈ ಸೇತುವೆಯನ್ನು ನೈರುತ್ಯ ರೈಲ್ವೆಯೇ ನಿರ್ವಹಣೆ ಮಾಡಬೇಕಿತ್ತು. ಇಲ್ಲವೇ ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡಬೇಕಿತ್ತು. ಪಾಲಿಕೆಗೆ ಹಸ್ತಾಂತರಿಸಿರುವುದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದರು.

ವಜ್ರಹನುಮಾನ್‌ ರೈಲ್ವೇ ಸೇತುವೆ ಕೆಳಗಿ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲು ಆಗದೇ ಅಡಚಣೆಯಾಗಿರುವುದು –ಪ್ರಜಾವಾಣಿ ಚಿತ್ರ
ವಜ್ರಹನುಮಾನ್‌ ರೈಲ್ವೆ ಕೆಳ ಸೇತುವೆ(ಅಂಡರ್ ಪಾಸ್‌)ನಲ್ಲಿ ಗೂಡ್ಸ್‌ ವಾಹನ ತೆರಳಲು ಆಗದೇ ನಿಂತಿರುವುದು –ಪ್ರಜಾವಾಣಿ ಚಿತ್ರ
ವಜ್ರ ಹನುಮಾನ್‌ ರೈಲ್ವೆ ಮೇಲ್ಸೇತುವೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ –ಪ್ರಜಾವಾಣಿ ಚಿತ್ರ
ವಜ್ರಹನುಮಾನ್‌ ರೈಲ್ವೆ ಗೇಟ್‌ ಬಳಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಅಧಿಕವಾಗುತ್ತಿದ್ದು ಇಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ಮುಂದಾಗಬೇಕು 
–ಚಂದ್ರಶೇಖರ ಪೂಜಾರಿ ಜಲನಗರ ನಿವಾಸಿ ವಿಜಯಪುರ
ವಜ್ರಹನುಮಾನ್‌ ರೈಲ್ವೆ ಮೇಲ್ಸೇತುವೆ ಮೇಲೆ ಪ್ರತಿದಿನ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಗುಂಡಿಬಿದ್ದು ಹದಗೆಟ್ಟಿರುವ ಮೇಲ್ಸೇತುವೆಯನ್ನು ಆದಷ್ಟು ಬೇಗ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು
-ರಮೇಶ ಬಿರಾದಾರ, ರಾಮನಗರ ನಿವಾಸಿ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.