ಮುದ್ದೇಬಿಹಾಳ (ಜಿ.ವಿಜಯಪುರ): ಮಂಗಳವಾರ ಪ್ರಕಟಗೊಂಡ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮುದ್ದೇಬಿಹಾಳ ತಾಲ್ಲೂಕು ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ 482ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಫಲಿತಾಂಶದ ಖುಷಿಯನ್ನು ‘ಪ್ರಜಾವಾಣಿ‘ಯೊಂದಿಗೆ ಹಂಚಿಕೊಂಡು ಮಾತನಾಡಿದ ಅವರು, ‘ಸಾರ್ವಜನಿಕ ಸೇವೆ ಮಾಡಬೇಕು ಎಂಬ ಗುರಿ ನಾನು ಸಕಲೇಶಪುರದಲ್ಲಿ ಕೆಲಸ ಮಾಡುವಾಗಲೇ ಮೂಡಿತ್ತು. ಎಂ.ಬಿ.ಬಿ.ಎಸ್ ಓದುತ್ತಿದ್ದಾಗಲೇ ಐಎಎಸ್ ಕನಸು ಹೊಂದಿದ್ದೆ’ ಎಂದು ತಿಳಿಸಿದರು.
ಮೂಲತಃ ಸಿಂದಗಿ ತಾಲ್ಲೂಕು ಹೊನ್ನಳ್ಳಿ ಗ್ರಾಮದ ಡಾ.ಮಹೇಶ ಅವರು ಜನಿಸಿದ್ದು ಜುಲೈ2, 1994ರಲ್ಲಿ. ತಂದೆ ರೇವಣಸಿದ್ಧ ಮಡಿವಾಳರ ಕೃಷಿ ಕುಟುಂಬದವರಾಗಿದ್ದಾರೆ. ತಾಯಿ ಯುಮುನಾಬಾಯಿ ಗೃಹಿಣಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಸಿಂದಗಿ ತಾಲ್ಲೂಕು ಹೊನ್ನಳ್ಳಿಯಲ್ಲಿ, ಪ್ರೌಢಶಿಕ್ಷಣ ಹೊರ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ,ಪಿಯು ಶಿಕ್ಷಣವನ್ನು ವಿಜಯಪುರದ ಎಂ.ಡಿ.ಆರ್.ಎಸ್ ಕಾಲೇಜಿನಲ್ಲಿ, ವೈದ್ಯಕೀಯ ಶಿಕ್ಷಣವನ್ನು ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿದ್ದಾರೆ. ಸಕಲೇಶಪುರ ತಾಲ್ಲೂಕು ಕೆಲಗಳಲೆ ಪಿಎಚ್‌ಸಿಯಲ್ಲಿ ವೈದ್ಯರಾಗಿ ಸೇವೆಗೆ ಸೇರ್ಪಡೆಯಾದರು. ಸದ್ಯಕ್ಕೆ ಮಡಿಕೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
‘ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಒಳ್ಳೆಯ ಸೇವೆ ನೀಡುತ್ತಿದ್ದ ದಿ.ಡಿ.ಕೆ.ರವಿ ಅವರನ್ನು ಸರ್ಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿದಾಗ ಅವರ ವರ್ಗಾವಣೆ ವಿರೋಧಿಸಿ ಅಲ್ಲಿನ ಜನರು ನಡೆಸಿದ ಪ್ರತಿಭಟನೆ, ರವಿ ಅವರ ಪರವಾಗಿ ತೋರಿದ ಅಭಿಮಾನ, ಗೌರವ ಪ್ರೀತಿ ನನಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುವುದಕ್ಕೆ ಸ್ಫೂರ್ತಿಯಾಯಿತು’ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 482ನೇ ರ‍್ಯಾಂಕ್ ಪಡೆದುಕೊಂಡಿರುವ ಮುದ್ದೇಬಿಹಾಳ ತಾಲ್ಲೂಕು ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ ಹೇಳಿದರು.
ನಿತ್ಯ 10 ಗಂಟೆ ಅಧ್ಯಯನ: ‘ಕೋವಿಡ್ ಸಮಯದಲ್ಲಿ ಬೆಂಗಳೂರು ಇನಸೈಟ್ ಐಎಎಸ್ ತರಬೇತಿ ಕೇಂದ್ರದಲ್ಲಿ ಆರು ತಿಂಗಳು ಜನರಲ್ ಸ್ಟಡಿ, ಬೆಂಗಳೂರಿನ ಉಪನ್ಯಾಸಕ ಡಾ.ರಾಕೇಶ ಅವರ ಬಳಿ ಕನ್ನಡ ಆಪ್ಶನಲ್ ತರಬೇತಿ ಪಡೆದುಕೊಂಡಿದ್ದೇನೆ‘ ಎಂದು ತಿಳಿಸಿದರು.
‘ವೈದ್ಯಕೀಯ ಸೇವೆಯ ಅವಧಿಯಲ್ಲಿ ಆರು ಗಂಟೆ, ರಜಾ ದಿನಗಳಲ್ಲಿ ನಿತ್ಯ 10 ಗಂಟೆ ಓದುತ್ತಿದ್ದೆ. ಇದು ನನ್ನ ಐದನೇ ಪ್ರಯತ್ನದಲ್ಲಿ ಯಶಸ್ಸು ದೊರೆತಿದೆ. 2022, 2023ರಲ್ಲಿ ಸಂದರ್ಶನದ ಅಂತಿಮ ಸುತ್ತಿನಲ್ಲಿ ವೈಫಲ್ಯ ಅನುಭವಿಸಿದ್ದೆ. ಆದರೆ ಈಗ ಯಶಸ್ಸು ದೊರೆತಿರುವುದು ಸಂತಸವನ್ನುಂಟು ಮಾಡಿದೆ‘ ಎಂದು ಹೇಳಿದರು.
ಪ್ರಜಾವಾಣಿ ಅಚ್ಚುಮೆಚ್ಚು: ‘ನನಗೆ ಮೊದಲಿನಿಂದಲೂ ‘ಪ್ರಜಾವಾಣಿ‘ ದಿನಪತ್ರಿಕೆ ಎಂದರೆ ಅಚ್ಚುಮೆಚ್ಚು. ಅದರಲ್ಲಿ ಬರುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಮಾಹಿತಿ ತಪ್ಪದೇ ಓದುತ್ತಿದ್ದೆ. ವಿಶೇಷವಾಗಿ ಡಿ.ಕೆ.ರವಿ ಅವರ ಕುರಿತಾಗಿ ವಿವರವಾದ ವರದಿಗಳು ನನಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುವುದಕ್ಕೆ ಮತ್ತಷ್ಟು ಪ್ರೋತ್ಸಾಹಿಸಿದವು’ ಎಂದು ತಿಳಿಸಿದರು.
ಫಲಿತಾಂಶ ಖುಷಿ ತಂದಿದೆ. ಒಬಿಸಿ ಕೆಟಗರಿಯಲ್ಲಿ ಬರುತ್ತಿರುವ ಕಾರಣ ನನಗೆ ಐಪಿಎಸ್ ಹುದ್ದೆ ದೊರೆಯುವ ವಿಶ್ವಾಸ ಇದೆ- ಡಾ.ಮಹೇಶ ಮಡಿವಾಳರ ಯುಪಿಎಸ್‌ಸಿಯಲ್ಲಿ 482ನೇ ರ‍್ಯಾಂಕ್ ಪಡೆದ ಅಭ್ಯರ್ಥಿ
ಮುದ್ದೇಬಿಹಾಳ ತಾಲ್ಲೂಕು ಆಡಳಿತದಲ್ಲಿ ಇದೊಂದು ಹರ್ಷದಾಯಕ ಸಂಗತಿ. ಡಾ.ಮಹೇಶ ಮಡಿವಾಳರ ಸಾಧನೆ ನಮಗೆ ಹೆಮ್ಮೆ ತಂದಿದೆಡಾ.ಅನೀಲಕುಮಾರ ಶೇಗುಣಸಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.