ADVERTISEMENT

ವಿಜಯಪುರ | 'ಸುಧಾರಿತ ತಂತ್ರಜ್ಞಾನ ಬಳಕೆ; ಪರಿಸರ ಮಾಲಿನ್ಯ ತಡೆ'

ಕೂಡಗಿ ಎನ್‌ಟಿಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ ಝಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:51 IST
Last Updated 19 ಜುಲೈ 2025, 5:51 IST
ಕೂಡಗಿ ಎನ್‌ಟಿಪಿಸಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ ಝಾ ವಾರ್ಷಿಕ ವರದಿ ಬಿಡುಗಡೆ ಮಾಡಿದರು 
ಕೂಡಗಿ ಎನ್‌ಟಿಪಿಸಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ ಝಾ ವಾರ್ಷಿಕ ವರದಿ ಬಿಡುಗಡೆ ಮಾಡಿದರು    

ವಿಜಯಪುರ: ಪರಿಸರ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಾಗ ಕೂಡಗಿ ಎನ್‌ಟಿಪಿಸಿ ಸ್ಥಾವರವು ಸುಧಾರಿತ ತಂತ್ರಜ್ಞಾನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಕೂಡಗಿ ಎನ್‌ಟಿಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ ಝಾ ಹೇಳಿದರು.

ಕೂಡಗಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಟಿಪಿಸಿಯು ಪರಿಸರ ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಸುಧಾರಿತ ಸೂಪರ್‌ಕ್ರಿಟಿಕಲ್ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ, ಉನ್ನತ ಮಟ್ಟದ ಸಂಸ್ಕರಣಾ ವ್ಯವಸ್ಥೆ ಮೂಲಕ ಎಲ್ಲಾ ತ್ಯಾಜ್ಯ ನೀರನ್ನು ಮರುಬಳಕೆ ಮಾಡಲಾಗುತ್ತಿದೆ ಎಂದರು.

ಡಿಜಿಟಲ್ ಬಳಕೆಗೆ ಆದ್ಯತೆ ನೀಡಿರುವುದರಿಂದ ಕಾಗದ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ವಾರ್ಷಿಕವಾಗಿ 3.3 ಕೋಟಿ ಕಾಗದದ ಹಾಳೆಗಳನ್ನು ಉಳಿಸಲಾಗುತ್ತಿದೆ, ಇದು 4 ಸಾವಿರ ಮರಗಳನ್ನು ಉಳಿಸುವುದಕ್ಕೆ ಸಮನಾಗಿರುತ್ತದೆ ಎಂದು ಹೇಳಿದರು.

ADVERTISEMENT

ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸುಮಾರು 1580 ಎಕರೆಗಳಲ್ಲಿ 9.5 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ. ಇದರಲ್ಲಿ ಸ್ಥಾವರ ಆವರಣದ ಒಳಗೆ 350 ಎಕರೆ, ಮಮದಾಪುರ ಮೀಸಲು ಅರಣ್ಯದ 432 ಎಕರೆ ಮತ್ತು ಕರ್ನಾಟಕ ಅರಣ್ಯ ಇಲಾಖೆ ಗುರುತಿಸಿದ ಇತರ ಸ್ಥಳಗಳಲ್ಲಿ ಮರಗಿಡಗಳನ್ನು ಬೆಳೆಸಲಾಗುತ್ತಿದೆ ಎಂದರು.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ವಿದ್ಯುತ್‌ ಸಂಗ್ರಹಣೆಗಾಗಿ ಭಾರತದ ಮೊದಲ ಸಿಒ2 ಆಧಾರಿತ ಬ್ಯಾಟರಿ ಶಕ್ತಿ ಸಂಗ್ರಹಣಾ ವ್ಯವಸ್ಥೆಯು ನಿರ್ಮಾಣ ಹಂತದಲ್ಲಿದೆ ಎಂದರು.

ಹೆಚ್ಚುವರಿಯಾಗಿ 2000 ಮೆಗಾವ್ಯಾಟ್‌ (ಎಂಡಬ್ಲ್ಯುಎಚ್‌) ಬ್ಯಾಟರಿ ಶಕ್ತಿ ಸಂಗ್ರಹಣಾ ವ್ಯವಸ್ಥೆ (ಬಿಇಎಸ್‌ಎಸ್‌)ಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಎಸ್‌ಆರ್‌ ಕಾರ್ಯಕ್ರಮ:

ಸಿಎಸ್‌ಆರ್‌ ಮೂಲಕ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ತರಗತಿ ಕೊಠಡಿಗಳು, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಪ್ರಯೋಗಾಲಯಗಳನ್ನು ಮಾಡಿಕೊಡಲಾಗಿದೆ. ‘ಉತ್ಕರ್ಷ್’ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ ವಾರ್ಷಿಕವಾಗಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹3 ಸಾವಿರ ಮತ್ತು ನೋಟ್‌ಬುಕ್‌, ಬೆಂಚ್‌, ಕಂಪ್ಯೂಟರ್‌ ಮತ್ತು ಹುಡುಗಿಯರಿಗೆ ಬೈಸಿಕಲ್‌ಗಳು ಸೇರಿದಂತೆ ಅಗತ್ಯ ಕಲಿಕಾ ಸಾಧನಗಳನ್ನು ವಿತರಿಸಿದ್ದೇವೆ ಎಂದರು.

ಮಹಿಳೆಯರ ಸಬಲೀಕರಣ ಯೋಜನೆಯಡಿ 500ಕ್ಕೂ ಹೆಚ್ಚು ಮಹಿಳೆಯರಿಗೆ ಟೈಲರಿಂಗ್‌ನಲ್ಲಿ ತರಬೇತಿ ನೀಡಲಾಗಿದೆ ಮತ್ತು ಅವರ ಜೀವನೋಪಾಯಕ್ಕೆ ಬೆಂಬಲ ನೀಡಲು ಹೊಲಿಗೆ ಯಂತ್ರಗಳನ್ನು ಒದಗಿಸಲಾಗಿದೆ. ಬ್ಯೂಟಿಷಿಯನ್ ತರಬೇತಿ ಕೋರ್ಸ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಸಮುದಾಯ ಭವನಗಳು, ಆಂತರಿಕ ರಸ್ತೆಗಳು ಮತ್ತು ಶಾಲೆ ಮತ್ತು ಸಮುದಾಯ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ತೆಲಗಿ ಮತ್ತು ಮಸೂತಿ ಶಾಲೆಗಳಲ್ಲಿ ನೀರಿನ ಶುದ್ಧೀಕರಣ ಯಂತ್ರಗಳನ್ನು ಸ್ಥಾಪಿಸಿದ್ದೇವೆ, ಸುತ್ತಮುತ್ತಲಿನ ಹಳ್ಳಿಗಳಿಗೆ ಕಸ ವಿಲೇವಾರಿ ವಾಹನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ 10 ಸಾವಿರ ಬೆಂಚ್‌ಗಳನ್ನು ಒದಗಿಸಲಾಗಿದೆ ಮತ್ತು ಹೊಸ ಕೊಠಡಿಗಳ ನಿರ್ಮಾಣ ಮಾಡಲಾಗಿದೆ ಎಂದರು.

ಕೊಪ್ಪಳದ ಗವಿಮಠದ ಬಾಲಕಿಯರ ಪಿಯು ವಸತಿ ಕಾಲೇಜು ನಿರ್ಮಾಣಕ್ಕೆ ಧನ ಸಹಾಯ ನೀಡಲಾಗಿದೆ. ಹಾನಗಲ್‌ನಲ್ಲಿ ಸಿಬಿಎಸ್‌ಇ ಶಾಲೆ ನಿರ್ಮಾಣ, ವಿಜಯಪುರದ ಐಟಿಐ ಕಾಲೇಜಿಗೆ ಮೂಲಸೌಕರ್ಯ, ವಿಜಯಪುರ ಸೈನಿಕ್ ಶಾಲೆಗೆ ಸೋಲಾರ್ ಇನ್ವರ್ಟರ್ ಸ್ಥಾಪನೆ, ಬಾಲಕಿಯರ ಎನ್‌ಸಿಸಿ ಶೆಡ್ ನಿರ್ಮಾಣ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಬಸವನ ಬಾಗೇವಾಡಿ ಬಸ್‌ ನಿಲ್ದಾಣದಲ್ಲಿ ಹೈಟೆಕ್‌ ಶೌಚಾಲಯ, ಕೂಡಗಿಯಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದರು.

ಎನ್‌ಟಿಪಿಸಿ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ತಿವಾರಿ, ಕಾರ್ಯಾಚರಣೆ ಮತ್ತು ಹಣಕಾಸು ವಿಭಾಗದ ವ್ಯವಸ್ಥಾಪಕ ಆಗಮ್ ಪ್ರಕಾಶ್ ತಿವಾರಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕಲಿಯಾ ಎಸ್. ಮೂರ್ತಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪೂಜಾ ಪಾಂಡೆ ಇದ್ದರು.

ಎನ್‌ಟಿಪಿಸಿ ವಿದ್ಯುತ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಆಧುನಿಕ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಗೆ ಬದ್ಧವಾಗಿದೆ 

- ಬಿದ್ಯಾನಂದ ಝಾ ಕಾರ್ಯನಿರ್ವಾಹಕ ನಿರ್ದೇಶಕ ಎನ್‌ಟಿಪಿಸಿ ಕೂಡಗಿ  

ಎನ್‌ಟಿಪಿಸಿಗೆ ಪ್ರಶಸ್ತಿಗಳ ಗರಿ ಕೂಡಗಿ ಎನ್‌ಟಿಪಿಸಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ. ಸಿಐಐ ಜಲ ಪ್ರಶಸ್ತಿ ಪಡೆದ ಏಕೈಕ ಎನ್‌ಟಿಪಿಸಿ ನಿಲ್ದಾಣವಾಗಿದೆ. ಸಮುದಾಯದ ಉನ್ನತಿ ಕೌಶಲ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಎನ್‌ಟಿಪಿಸಿ ಕೊಡುಗೆಗಾಗಿ ಪ್ರತಿಷ್ಠಿತ ಸಿಎಸ್‌ಆರ್‌ ಶ್ರೇಷ್ಠತೆ ಪ್ರಶಸ್ತಿ  ಬಂದಿದೆ. ಜೊತೆಗೆ ಅಪೆಕ್ಸ್‌ ಇಂಡಿಯಾ ಸಿಎಸ್‌ಆರ್‌ ಶ್ರೇಷ್ಠತೆ ಪ್ರಶಸ್ತಿಗಳ ಅಡಿಯಲ್ಲಿ ಚಿನ್ನದ ಪ್ರಶಸ್ತಿ ಪಡೆದುಕೊಂಡಿದೆ.

ಮೊಬೈಲ್ ವೈದ್ಯಕೀಯ ಘಟಕ ಸೇವೆ ಕೂಡಗಿ ಎನ್‌ಟಿಪಿಸಿಯು ಆರೋಗ್ಯ ಸೇವೆಯಡಿ ಪ್ರಾರಂಭಿಸಲಾದ ಮೊಬೈಲ್ ವೈದ್ಯಕೀಯ ಘಟಕವು ಪ್ರತಿ ತಿಂಗಳು 1100ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಮನೆ ಬಾಗಿಲಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ. ಕೂಡಗಿ ಪಿಎಚ್‌ಸಿಯ ಸೇವೆಗಳನ್ನು ಬಲಪಡಿಸಿದ್ದೇವೆ ಮತ್ತು ಕ್ಷಯ ರೋಗಿಗಳು ಮತ್ತು ಗರ್ಭಿಣಿಯರಿಗೆ ಪೌಷ್ಠಿಕಾಂಶ ಕಿಟ್‌ಗಳನ್ನು ವಿತರಿಸುತ್ತಿದೆ.

240ಕ್ಕೂ ಹೆಚ್ಚು ಬಾಲಕಿಯರಿಗೆ ಸಹಾಯ ಕೂಡಗಿ ಎನ್‌ಟಿಪಿಸಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಯಡಿ ಪ್ರತಿ ವರ್ಷ ಹತ್ತಿರದ ಹಳ್ಳಿಗಳ ಬಾಲಕಿಯರಿಗಾಗಿ ಕಾರ್ಯಾಗಾರವನ್ನು ನಡೆಸುತ್ತದೆ. ಈ ವರ್ಷ 80 ಹುಡುಗಿಯರಿಗೆ ಒಂದು ತಿಂಗಳ ತರಬೇತಿ ನೀಡಿದೆ. ಇದುವರೆಗೆ ₹50 ಲಕ್ಷಗಳಿಗೂ ಹೆಚ್ಚು ಹೂಡಿಕೆ ಮಾಡಿದೆ. ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 240ಕ್ಕೂ ಹೆಚ್ಚು ಬಾಲಕಿಯರಿಗೆ ಪ್ರಯೋಜನ ಪಡೆದಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.