ವಿಜಯಪುರ: ಅಭಿವೃದ್ದಿ ಕಾರ್ಯಗಳಿಗಾಗಿ ವಿವಿಧ ಇಲಾಖೆಗಳಡಿ ಹಂಚಿಕೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಯಾವ ಉದ್ದೇಶಕ್ಕಾಗಿ ಅನುದಾನ ಹಂಚಿಕೆಯಾಗಿದೆಯೋ ಅದೇ ಕಾರ್ಯಗಳಿಗೆ ಅನುದಾನ ಬಳಕೆ ಮಾಡುವಂತೆ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಹೇಳಿದರು.
5ನೇ ರಾಜ್ಯ ಹಣಕಾಸು ಆಯೋಗದಿಂದ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಿಷಯಗಳ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯ ಮತ್ತು ಜಿಲ್ಲಾ ವಲಯ ಯೋಜನೆಯಡಿಯ ಅನುದಾನದ ಸದ್ಬಳಕೆ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೀದಿ ದೀಪ ಹಾಗೂ ಕುಡಿಯುವ ನೀರಿನ ಬಾಕಿ ಇರುವ ಬಿಲ್ಲುಗಳ ಪಾವತಿಗಾಗಿ ಸರ್ಕಾರ ಆದೇಶಿಸಿದ್ದು, ಈ ಕುರಿತು ಪರಿಶೀಲನೆ ನಡೆಸಿದ ಆಯೋಗ ಯಾವುದೇ ಬಾಕಿ ಉಳಿಯದಂತೆ ನೋಡಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಯಿತು.
ಜಿಲ್ಲಾ ವಲಯದಡಿ ವಿಜಯಪುರ ಜಿಲ್ಲಾ ಪಂಚಾಯಿತಿ ನಿಗದಿತ ಗುರಿ ಸಾಧಿಸಿರುವುದನ್ನು ಪರಿಶೀಲಿಸಿ, ಆಯೋಗವು ಮೆಚ್ಚುಗೆ ವ್ಯಕ್ತಪಡಿಸಿತು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ, ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ಪುರಸಭೆ, ಪಟ್ಟಣ ಪಂಚಾಯಿತಿಗಳ ಆರ್ಥಿಕ ಸ್ಥಿತಿಗತಿ, ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಅದರ ಕಾರ್ಯಚಟುವಟಿಕೆಗಳ ಸಂಪನ್ಮೂಲಗಳ ಕ್ರೋಢೀಕರಣ, ಹಂಚಿಕೆ ಮತ್ತು ಮೂಲಸೌಕರ್ಯ, ಸೇವೆ ಒದಗಿಸುವಲ್ಲಿ ತಾಂತ್ರಿಕ ಕೌಶಲದ ಸಾಮರ್ಥ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಯೋಗ ಪರಿಶೀಲನೆ ನಡೆಸಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರು ಮತ್ತು ಬೀದಿ ದೀಪಗಳ ವಿದ್ಯುತ್ ಬಳಕೆ ಬಿಲ್ ಬಾಕಿ ಇದ್ದಲ್ಲಿ ಪರಿಶೀಲನೆ ನಡೆಸುವ ಮೂಲಕ ಪಾವತಿಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ವಿಷಯಗಳು ಹಾಗೂ ಸಮಸ್ಯೆಗಳ ಕುರಿತು ಆಯೋಗದ ಗಮನಕ್ಕೆ ತಂದರು.
ಸಭೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಕೊರತೆ ನೀಗಿಸಿ, ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ಮನವಿ ಮಾಡಿಕೊಂಡರು.
5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮಹ್ಮದ್ ಸನಾವುಲ್ಲಾ, ಆರ್.ಎಸ್.ಪೋಂಡೆ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ, ಆಯೋಗದ ಸಮಾಲೋಚಕ ಎಂ.ಕೆ.ಕೆಂಪೇಗೌಡ, ಸಿ.ಜಿ.ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ ಸೇರಿದಂತೆ ಅವಳಿ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.