ವಿಜಯಪುರ: ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಹಾಗೂ ಕಳೆದ 30 ವರ್ಷಗಳ ನಿರಂತರ ಹೋರಾಟಕ್ಕೆ ಸಂದ ಜಯ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಒಳಮೀಸಲಾತಿ ಜಾರಿಗಾಗಿ ಅನೇಕ ದಶಕಗಳ ಹೋರಾಟವೇ ನಡೆದಿತ್ತು. ಈಗ ಸುಪ್ರೀಂಕೋರ್ಟ್ ಸಹ ಈ ಒಳ ಮೀಸಲಾತಿ ಜಾರಿಗೊಳಿಸಲು ಅನುಮತಿ ನೀಡಿರುವುದು ಮತ್ತಷ್ಟು ಸಂತಸ ತರಿಸಿದೆ. ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಸಾಮಾಜಿಕ ನ್ಯಾಯಕ್ಕೆ ನವ ಶಕ್ತಿ ಹಾಗೂ ಭಾರತೀಯ ಸಂವಿಧಾನದ ಆಶಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಚಿನ್ನಯ್ಯ ತೀರ್ಪನ್ನು ರದ್ದುಗೊಳಿಸಿದ್ದು, ದೇವೀಂದ್ರ ಸಿಂಗ್ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿದೆ. ಭಾರತದ ಸಂವಿಧಾನವು ಎಸ್‌ಸಿಗಳಲ್ಲಿ ಒಳ ಮೀಸಲಾತಿಯನ್ನು ಅನುಮತಿಸುತ್ತದೆ ಎಂದು ತೀರ್ಪು ಪ್ರಕಟಿಸಿದೆ. ನ್ಯಾಯಾಲಯದ ಈ ಆದೇಶ ಸಮಸ್ತ ಎಸ್.ಸಿ. ಸಮುದಾಯಗಳಲ್ಲಿ ಹರುಷ ತರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದಿಗ ಸಮಾಜಕ್ಕೆ ನ್ಯಾಯ: ಜಿಗಜಿಣಗಿ
ವಿಜಯಪುರ: ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಸಮರ್ಥನೀಯ ಎಂದು ಒಳಮೀಸಲಾತಿ ಪರ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಸುಮಾರು 3 ದಶಕಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹರ್ಷ ವ್ಯಕ್ತಪಡಿಸಿದರು.
ಮಾದಿಗ ಸಮಾಜದ ಬೇಡಿಕೆಯನ್ನು ಪರಿಗಣಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ವಿಶೇಷ ಪೀಠ ಸ್ಥಾಪನೆಗೆ ಕಾರಣರಾಗುವ ಮೂಲಕ ಬೇಡಿಕೆ ಸ್ಪಂದಿಸಿದ್ದಾರೆ. ನೀಡಿದ ಭರವಸೆಯಂತೆ ಕಾಲಮಿತಿ ಒಳಗೆ ಆದೇಶ ಹೊರಬರಲು ಕಾರಣವಾಗಿದ್ದಾರೆ. ಈ ತೀರ್ಪಿನಿಂದ ಇಡೀ ದೇಶದ ಮಾದಿಗ ಸಮಾಜದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಕೂಡಲೇ ತಕ್ಷಣ ಜಾರಿಗೆ ಮಾಡಬೇಕು. ಮುಖ್ಯಮಂತ್ರಿಗಳು ಹಾಗೂ ಕಾನೂನು ಮಂತ್ರಿಗಳು ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.