ADVERTISEMENT

ಬತ್ತಿದ ಭೀಮಾ ನದಿ; ನೀರಿಗಾಗಿ ಹಾಹಾಕಾರ!

ಚಡಚಣ ಪಟ್ಟಣಕ್ಕೆ 15 ದಿನಗಳಿಂದ ನೀರು ಪೂರೈಕೆ ಸ್ಥಗಿತ

ಅಲ್ಲಮಪ್ರಭು ಕರ್ಜಗಿ
Published 29 ಸೆಪ್ಟೆಂಬರ್ 2023, 7:50 IST
Last Updated 29 ಸೆಪ್ಟೆಂಬರ್ 2023, 7:50 IST
ಚಡಚಣ ಸಮೀಪದ ಹಿಂಗಣಿ ಗ್ರಾಮದ ಹತ್ತಿರ ಭೀಮಾ ನದಿಗೆ ನಿರ್ಮಿಸಲಾದ ಬಾಂದಾರ ಸಂಪೂರ್ಣ ಬತ್ತಿ ಹೋಗಿರುವುದು
ಚಡಚಣ ಸಮೀಪದ ಹಿಂಗಣಿ ಗ್ರಾಮದ ಹತ್ತಿರ ಭೀಮಾ ನದಿಗೆ ನಿರ್ಮಿಸಲಾದ ಬಾಂದಾರ ಸಂಪೂರ್ಣ ಬತ್ತಿ ಹೋಗಿರುವುದು   

ಚಡಚಣ: ಪಟ್ಟಣದ ಕುಡಿಯುವ ನೀರಿನ ಮೂಲವಾದ ಭೀಮಾ ನದಿ ಸುಮಾರು 15 ದಿನಗಳಿಂದ ಬತ್ತಿ ಹೋಗಿರುವುದರಿಂದ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಉಜನಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯ ಮಳೆಯಾಗದಿರುವುದರಿಂದ ಜಲಾಶಯದಲ್ಲಿ ನೀರು ಸಂಗ್ರಹ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರಿಂದಾಗಿ ಭೀಮಾ ನದಿಗೆ ಮಹಾರಾಷ್ಟ್ರ ನೀರು ಹರಿಸುವುದನ್ನು ನಿಲ್ಲಿಸಿದೆ.

ಸೋಲಾಪುರ ನಗರಕ್ಕೆ ಉಜನಿ ಜಲಾಶಯದಿಂದ ಸೀನ ನದಿಯ ಮೂಲಕ ಪರ್ಯಾಯವಾಗಿ ನೀರು ಪೂರೈಕೆ ಮಾಡುತ್ತಿರುವುದಿಂದ ಭೀಮಾ ನದಿಗೆ ನೀರು ಬಿಡದಿರುವುದು ನದಿ ಪಾತ್ರದ ಜನರಿಗೆ ಮತ್ತಷ್ಟು ಸಂಕಷ್ಟವನ್ನುಂಟು ಮಾಡಿದೆ.

ADVERTISEMENT

ಭೀಮಾ ನದಿ ಬತ್ತಿರುವುದರಿಂದ ಚಡಚಣ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಜನ ಹಾಗೂ ಜಾನುವಾರುಗಳಿಗೂ ಕುಡಿಯುವ ನೀರಿನ ತಾತ್ವಾರ ಉಂಟಾಗಿದೆ.

ಕೃಷ್ಣಾ ಎಡ ದಂಡೆ ಕಾಲುವೆ ಮೂಲಕ ನೀರು ಬಿಡಲಾಗುತ್ತಿದ್ದರೂ ಚಡಚಣ ತಾಲ್ಲೂಕಿನ ಕೊನೆ ಹಳ್ಳಿಗಳ ವರೆಗೆ ನೀರು ಹರಿಯುತ್ತಿಲ್ಲ.

ನೀರಿನ ಕೊರತೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆಗಳು ಒಣಗಲಾರಂಭಿಸಿವೆ. ಇನ್ನು ಹಲವಾರು ರೈತರು ನದಿ ನೀರು ಅವಲಂಬಿಸಿ ತೊಗರಿ, ಸೂರ್ಯಕಾಂತಿ, ಗೋಧಿ, ಶೇಂಗಾ ಮುಂತಾದ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಅವುಗಳೂ ಬಾಡಲಾರಂಭಿಸಿವೆ. ಇತ್ತ ಮಳೆಯೂ ಇಲ್ಲ, ಭೀಮಾ ನದಿಯಲ್ಲಿ ನೀರು ಇಲ್ಲದಿರುವುದರಿಂದ ರೈತರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಕೂಡಲೇ ಜಿಲ್ಲಾಡಳಿತ ಚಡಚಣ ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾರ್ವಜನಿಕರ ಆಗ್ರಹವಾಗಿದೆ.

ಮುಂಗಾರು ಸಂಪೂರ್ಣವಾಗಿ ಕೈ ಕೊಟ್ಟದ್ದರಿಂದ ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ. ಹಳ್ಳ ಕೊಳ್ಳಗಳಲ್ಲಿ ಹನಿ ನೀರು ಇಲ್ಲ. ಬಾವಿಗಳು ಬರಿದಾಗಿವೆ. ಶೇ 75ರಷ್ಟು ಮಳೆ ಕೊರತೆಯಿಂದ ಬಿತ್ತನೆಯೂ ಆಗದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಆಗೊಮ್ಮೆ, ಈಗೊಮ್ಮೆ ಮಳೆಯ ಸಿಂಚನವಾಗುತ್ತಿದ್ದರೂ ಅದು ಬಿತ್ತನೆಗೆ ಅನುಕೂಲಕರವಾಗಿಲ್ಲ.

ಚಡಚಣ ಸಮೀಪದ ಹಿಂಗಣಿ ಗ್ರಾಮದ ಹತ್ತಿರ ಭೀಮಾ ನದಿಗೆ ನಿರ್ಮಿಸಲಾದ ಬಾಂದಾರ ಸಂಪೂರ್ಣ ಬತ್ತಿ ಹೋಗಿರುವುದು
ಜತ್‌ ತಾಲ್ಲೂಕಿನ ಬೇವರಗಿ-ಸಂಖ ಗ್ರಾಮಗಳ ಕೆರೆಗೆ ರಾಜ್ಯದ ಕೃಷ್ಣಾ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ಈ ಕೆರೆಗಳಿಂದ ಚಡಚಣ ಮೂಲಕ ಹಾದು ಹೋಗಿ ಭೀಮಾ ನದಿಗೆ ಸೇರುವ ಬೋರಿ ಹಳ್ಳಕ್ಕೆ ನೀರು ಹರಿಸುವುದರಿಂದ ತಾತ್ಕಾಲಿಕವಾಗಿ ಈ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು
-ಚಂದ್ರಶೇಖರ ನಿರಾಳೆ ರೈತ ಚಡಚಣ
ಚಡಚಣ ತಾಲ್ಲೂಕಿನಾದ್ಯಂತ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಸರ್ಕಾರ ಈ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಗುರುತಿಸಿದೆ. ಕೂಡಲೇ ಸರ್ಕಾರ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು
-ಸಿದರಾಯ ಘಂಟಿ ಮುಖಂಡ ಲೋಣಿ(ಬಿ.ಕೆ)
ಚಡಚಣ ಪಟ್ಣಣದಲ್ಲಿರುವ ಸಾರ್ವಜನಿಕ ಬಾವಿಗಳು ಹಾಗೂ ಕೊಳವೆ ಬಾವಿಗಳ ಮೂಲಕ ನಿವಾಸಿಗಳಿಗೆ ನೀರು ಪುರೈಸಲು ಕ್ರಮ ಕೈಗೊಳ್ಳಾಗುತ್ತಿದೆ.
- ಶಿವಾನಂದ ಪೂಜಾರಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯ್ತಿ ಚಡಚಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.