ADVERTISEMENT

ವಿಜಯಪುರ | ಅರಳಿದ ಕಮಲ; ಯತ್ನಾಳ ಮೇಲುಗೈ

ವಿಜಯಪುರ ಮಹಾನಗರ ಪಾಲಿಕೆಗೆ ಎಂ.ಎಸ್‌. ಕರಡಿ ಮೇಯರ್‌, ಸುಮಿತ್ರಾ ಜಾದವ್‌ ಉಪ ಮೇಯರ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 5:56 IST
Last Updated 12 ಆಗಸ್ಟ್ 2025, 5:56 IST
ವಿಜಯಪುರ ಮಹಾನಗರ ಪಾಲಿಕೆ ನೂತನ ಮೇಯರ್‌ ಎಂ.ಎಸ್‌.ಕರಡಿ, ಉಪ ಮೇಯರ್‌ ಸುಮಿತ್ರಾ ಜಾದವ್‌ ಹಾಗೂ ಶಾಸಕ ಯತ್ನಾಳ ಅವರನ್ನು ಅಭಿಮಾನಿಗಳು, ಕಾರ್ಯಕರ್ತರು ಸೋಮವಾರ ಹೂವಿನ ಹಾರ ಹಾಕಿ ಸನ್ಮಾನಿಸಿ, ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ 
ವಿಜಯಪುರ ಮಹಾನಗರ ಪಾಲಿಕೆ ನೂತನ ಮೇಯರ್‌ ಎಂ.ಎಸ್‌.ಕರಡಿ, ಉಪ ಮೇಯರ್‌ ಸುಮಿತ್ರಾ ಜಾದವ್‌ ಹಾಗೂ ಶಾಸಕ ಯತ್ನಾಳ ಅವರನ್ನು ಅಭಿಮಾನಿಗಳು, ಕಾರ್ಯಕರ್ತರು ಸೋಮವಾರ ಹೂವಿನ ಹಾರ ಹಾಕಿ ಸನ್ಮಾನಿಸಿ, ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ    

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ನೂತನ ಮೇಯರ್‌ ಆಗಿ ಎಂ.ಎಸ್‌.ಕರಡಿ ಮತ್ತು ಉಪ ಮೇಯರ್‌ ಆಗಿ ಸುಮಿತ್ರಾ ಜಾದವ್‌ ಅವರು ಸೋಮವಾರ ‘ಗೌನು’ ತೊಡುವ ಮೂಲಕ ಪ್ರಥಮ ಬಾರಿಗೆ ಬಿಜೆಪಿ ಪಾಲಿಕೆ ಗದ್ದುಗೆ ಏರಿದೆ. 

ಮೇಯರ್‌ ಸ್ಥಾನಕ್ಕೆ ಕಳೆದ ಜನವರಿಯಲ್ಲಿ, ಉಪಮೇಯರ್‌ ಸ್ಥಾನಕ್ಕೆ ಫೆಬ್ರುವರಿಯಲ್ಲಿ ಚುನಾವಣೆ ನಡೆದಿತ್ತು. ಇಬ್ಬರೂ ತಲಾ 24 ಮತ ಗಳಿಸಿದರು. 

ಕಾಂಗ್ರೆಸ್‌ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಎಂಟನೇ ವಾರ್ಡನ ಪಕ್ಷೇತರ ಸದಸ್ಯ ಅಶೋಕ ನ್ಯಾಮಗೊಂಡ ಪರವಾಗಿ 22 ಮತಗಳು ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದ 24ನೇ ವಾರ್ಡನ ಪಕ್ಷೇತರ ಸದಸ್ಯೆ ವಿಮಾಲಾ ಕಾಣೆಗೆ ಯಾವುದೇ ಮತಗಳು ಚಲಾವಣೆಯಾಗಿರಲಿಲ್ಲ.

ADVERTISEMENT

ಆಸ್ತಿ ವಿವರ ಸಲ್ಲಿಸದ ಕಾರಣ ಬಿಜೆಪಿಯ 18, ಕಾಂಗ್ರೆಸ್‌ನ 10, ಎಐಎಂಐಎಂ 2, ಜೆಡಿಎಸ್‌ 1 ಹಾಗೂ ಪಕ್ಷೇತರ 5 ಸದಸ್ಯರು ಸೇರಿ ಎಲ್ಲ 35 ಸದಸ್ಯರನ್ನು ರಾಜ್ಯ ಸರ್ಕಾರ ಅನರ್ಹಗೊಳಿಸಿ ಫೆಬ್ರುವರಿಯಲ್ಲಿ ಆದೇಶ ಹೊರಡಿಸಿತ್ತು. ಅದೇ ಸಂದರ್ಭದಲ್ಲಿ ನಡೆದಿದ್ದ ಮೇಯರ್‌, ಉಪ ಮೇಯರ್‌ ಚುನಾವಣೆ ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು. ಕೋರ್ಟ್ ಆದೇಶದ ಮೇರೆಗೆ ಸೋಮವಾರ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಫಲಿತಾಂಶ ಪ್ರಕಟಿಸಿದರು.

ಯತ್ನಾಳ ಬೆಂಬಲಿಗರು:

ನೂತನ ಮೇಯರ್‌, ಉಪ ಮೇಯರ್‌ ಇಬ್ಬರೂ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಟ್ಟಾ ಬೆಂಬಲಿಗರು. ಸೋಮವಾರ ಯತ್ನಾಳ ಅವರೊಂದಿಗೆ ಪಾಲಿಕೆಗೆ ಬಂದು, ಅಧಿಕಾರ ಸ್ವೀಕರಿಸಿದರು. ಬಳಿಕ ಯತ್ನಾಳ ಅವರೊಂದಿಗೆ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಯಾವೊಬ್ಬ ಮುಖಂಡರೂ ಪಾಲಿಕೆಯಲ್ಲಿ ಹಾಜರಿರಲಿಲ್ಲ. ಯತ್ನಾಳ ಭಾವಚಿತ್ರ ಮತ್ತು ಬಿಆರ್‌ಪಿ ಎಂಬ ಅಕ್ಷರ ಇರುವ ಶಾಲು ಹೊದ್ದ ನೂರಾರು ಯತ್ನಾಳ ಅಭಿಮಾನಿಗಳು ‘ಜೈಹಿಂದ್‌, ಜೈ ಯತ್ನಾಳ’ ಎಂಬ ಘೋಷಣೆ ಮೊಳಗಿಸಿದರು. ಯತ್ನಾಳ ಬೆಂಬಲಿಗರು ಗುಲಾಲ್‌ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಾಂಗ್ರೆಸ್‌, ಬಿಜೆಪಿ ನಡುವಿನ ಕಾದಾಟದಲ್ಲಿ ಪಾಲಿಕೆಯಲ್ಲಿ ಶಾಸಕ ಯತ್ನಾಳ ಮೇಲುಗೈ ಸಾಧಿಸಿದರು.

ಅಗತ್ಯ ಸಹಕಾರ:

ಕಾಂಗ್ರೆಸ್‌ನ ಮಾಜಿ ಉಪ ಮೇಯರ್‌ ದಿನೇಶ್‌ ಹಳ್ಳಿ ಮಾತನಾಡಿ, ‘ಕೋರ್ಟ್‌ ಆದೇಶಕ್ಕೆ ಗೌರವ ನೀಡುತ್ತೇವೆ. ನೂತನ ಮೇಯರ್‌, ಉಪಮೇಯರ್‌ ಅವರು ಎಲ್ಲ ವಾರ್ಡ್‌ಗಳಿಗೂ ಸಮಾನ ಆದ್ಯತೆ ನೀಡಬೇಕು. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ವಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು. ವಿರೋಧ ಪಕ್ಷವಾದ ಕಾಂಗ್ರೆಸ್‌ ಅಗತ್ಯ ಸಹಕಾರ ನೀಡಲಿದೆ’ ಎಂದರು. 

ನೂತನ ಮೇಯರ್‌ ಉಪಮೇಯರ್‌ ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡಲು ಶ್ರಮಿಸಲಿದ್ದಾರೆ. ಮಳೆಯಿಂದ ತೊಂದರೆಗೆ ಒಳಗಾದ ಪ್ರದೇಶದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದಾರೆ 
ಬಸನಗೌಡ ಪಾಟೀಲ ಯತ್ನಾಳ ಶಾಸಕ
ಸಚಿವರುಶಾಸಕರು ಅಧಿಕಾರಿಗಳು ಹಾಗೂ ವಿರೋಧ ಪಕ್ಷದ ಬೆಂಬಲದೊಂದಿಗೆ ವಿಜಯಪುರ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು 
ಎಂ.ಎಸ್‌.ಕರಡಿ ಮೇಯರ್‌

ಹಿಂದುತ್ವಕ್ಕೆ ಜಯ: ಯತ್ನಾಳ

ವಿಜಯಪುರ: ‘ಪಾಲಿಕೆಯಲ್ಲಿ ಬಿಜೆಪಿ–ಕಾಂಗ್ರೆಸ್‌ ಹೊಂದಾಣಿಕೆ ರಾಜಕಾರಣಕ್ಕೆ ತಡೆ ಬಿದ್ದಿದೆ. ಮೊದಲ ಬಾರಿಗೆ ಹಿಂದುತ್ವಕ್ಕೆ ಜಯ ಒಲಿದಿದೆ’ ಎಂದು ಶಾಸಕ ಯತ್ನಾಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಚಿವ ಎಂ.ಬಿ.ಪಾಟೀಲ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಅವರು ಬಿಜೆಪಿಯವರು ಮೇಯರ್‌ ಉಪ ಮೇಯರ್‌ ಆಗಬಾರದು ಎಂದು ಬಹಳಷ್ಟು ತೊಂದರೆ ನೀಡಿದರು. ಪ್ರಜಾತಾಂತ್ರಿಕವಾಗಿ ಆಯ್ಕೆಯಾದರೂ ಕೋರ್ಟ್‌ನಿಂದ ತಡೆತಂದು ಬಿಜೆಪಿ ಅಧಿಕಾರಕ್ಕೆ ಏರದಂತೆ ತಡೆದರು. ಆದರೆ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಕ್ಕಿದೆ' ಎಂದು ಹೇಳಿದರು. ‘ಈ ಹಿಂದೆ ಬಿಜೆಪಿ ಶಾಸಕರಾಗಿದ್ದವರು ಪಕ್ಷಕ್ಕೆ ಮೋಸ ಮಾಡಿ ಪಾಲಿಕೆ ಅಧಿಕಾರ ಕಾಂಗ್ರೆಸ್‌ಗೆ ಹೋಗುವಂತೆ ಕುತಂತ್ರ ಮಾಡಿದ್ದರು. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದವರು ಈಗ ಆ ಪಕ್ಷದಲ್ಲಿ ಮಾನ ಮರ್ಯಾದೆ ಇಲ್ಲದೇ ರಾಜಾರೋಸವಾಗಿ ಸುತ್ತಾಡುತ್ತಿದ್ದಾರೆ’ ಎಂದು ಆರೋಪಿಸಿದರು. ‘ಪಕ್ಷದ ಪರವಾಗಿ ನಿಷ್ಠೆಯಿಂದ ಇರುವ ನೈಜ ಬಿಜೆಪಿಯವರು ನನ್ನ ಜೊತೆ ಇದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಸೋತ ನಕಲಿಗಳು ಬಿಜೆಪಿ ಜಿಲ್ಲಾಧ್ಯಕ್ಷರ ಜೊತೆಯಲ್ಲಿ ಸುತ್ತಾಡುತ್ತಿದ್ದಾರೆ’ ಎಂದು ಆರೋಪಿಸಿದರು. ‘ಪಾಲಿಕೆ ಈ ಹಿಂದಿನ ಮೇಯರ್‌ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ನಮ್ಮ ಬಳಿ ದಾಖಲೆ ಇವೆ ತನಿಖೆ ಮಾಡಿಸಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ’ ಎಂದರು.

ಮೇಯರ್‌ ಉಪಮೇಯರ್‌ಗೆ ಬಿಜೆಪಿ ಸನ್ಮಾನ

ವಿಜಯಪುರ: ಮಹಾನಗರ ಪಾಲಿಕೆ ನೂತನ ಮೇಯರ್ ಎಂ.ಎಸ್. ಕರಡಿ ಹಾಗೂ ಉಪಮೇಯರ್  ಸುಮಿತ್ರಾ ಜಾಧವ ಅವರು ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಭಾರತ ಮಾತೆಯ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲಿಕೆಯ ಬಿಜೆಪಿ ಸದಸ್ಯರು ಅವರನ್ನು ಸನ್ಮಾನಿಸಿದರು. ಮೇಯರ್ ಎಂ.ಎಸ್. ಕರಡಿ ಮಾತನಾಡಿ ‘ಬಿಜೆಪಿ ದೇಶಾಭಿಮಾನ ಉಸಿರಾಗಿಸಿಕೊಂಡ ಪಕ್ಷ ಈ ಪಕ್ಷದ ಸದಸ್ಯನಾಗಿರುವುದೇ ನನಗೆ ಹೆಮ್ಮೆ ಸಮಸ್ತ ಪಕ್ಷದ ಮುಖಂಡರ ಪದಾಧಿಕಾರಿಗಳು ಪಾಲಿಕೆ ಬಿಜೆಪಿ ಸದಸ್ಯರ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದ ಬಲದಿಂದ ಈ ಹುದ್ದೆ ಒಲಿದು ಬಂದಿದೆ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮುಖಂಡರಾದ ಚಂದ್ರಶೇಖರ ಕವಟಗಿ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ ಶಿವರುದ್ರ ಬಾಗಲಕೋಟ ಮಳುಗೌಡ ಪಾಟೀಲ ರಾಹುಲ್ ಜಾಧವ ಸ್ವಪ್ನಾ ಕಣಮುಚನಾಳ ಪ್ರೇಮಾನಂದ ಬಿರಾದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.