ವಿಜಯಪುರ: ಕುಡಿಯುವ ನೀರಿಗಾಗಿ ಆಲಮಟ್ಟಿ ಜಲಾಶಯದಿಂದ ಕಾಲುವೆ ಜಾಲಗಳ ಮೂಲಕ ಕೆರೆಗಳನ್ನು ತುಂಬಿಸಲಾಗುತಿದ್ದು, ನೀರಿನ ವ್ಯಯವಾಗದಂತೆ ಅಧಿಕಾರಿಗಳು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಅವರು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಜಲಾಶಯದ ಸಂಗ್ರಹಣೆಯಲ್ಲಿ ಕೆರೆಗಳನ್ನು ಭರ್ತಿಗೊಳಿಸಲು 2.50 ಟಿ.ಎಂ.ಸಿ.ನೀರು ಕಾಲುವೆ ಜಾಲಗಳ ಮೂಲಕ ಕೆರೆಗಳನ್ನು ನೀರು ತುಂಬಿಸಲಾಗುತ್ತಿದ್ದು, ಜಲಾಶಯದಿಂದ ಹರಿಬಿಡಲಾದ ನೀರು ಉದ್ದೇಶಿತ ಸ್ಥಳಕ್ಕೆ ತಲುಪುವಂತೆ ನಿಗಾವಹಿಸಬೇಕು ಎಂದರು.
ನೀರಿನ ವ್ಯಯವಾಗದಂತೆ ನೋಡಿಕೊಳ್ಳಲು ರಚಿಸಲಾದ ಸಣ್ಣ ನೀರಾವರಿ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆ, ಹೆಸ್ಕಾಂ, ಪೊಲೀಸ್ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯನ್ನೊಳಗೊಂಡ ವಾಚ್ ಅಂಡ್ ವಾರ್ಡ್ ಸಮಿತಿ ತೀವ್ರ ನಿಗಾ ಇರಿಸಬೇಕು. ಅನಧಿಕೃತವಾಗಿ ಅಳವಡಿಸಲಾದ ಪಂಪ್‌ಸೆಟ್‍ಗಳನ್ನು ಹೆಸ್ಕಾಂ ಇಲಾಖೆಯಿಂದ ತೆರವುಗೊಳಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ಧ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ಪ್ರಥಮಾದ್ಯತೆ ನೀಡಬೇಕು. ಜಿಲ್ಲೆಯಾದ್ಯಂತ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲು ಗ್ರಾಮ ಪಂಚಾಯಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ತೆರೆದ ಕೊಳವೆ ಬಾವಿಗಳಿದ್ದಲ್ಲಿ ಕೂಡಲೇ ಯಾವುದೇ ಅನಾಹುತಕ್ಕೆ ಆಸ್ಪದ ಒದಗಿಸದೇ ಇಂತಹ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.