ADVERTISEMENT

ವಿಜಯಪುರಕ್ಕೆ ಮರೀಚಿಕೆಯಾದ ಸಚಿವ ಸ್ಥಾನ

ಬಿಜೆಪಿ ಆಂತರಿಕ ಕಚ್ಚಾಟ; ಅಧಿಕಾರಿ, ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ

ಬಸವರಾಜ ಸಂಪಳ್ಳಿ
Published 13 ಜನವರಿ 2021, 19:30 IST
Last Updated 13 ಜನವರಿ 2021, 19:30 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಸಂಕ್ರಾಂತಿಗೆ ಉತ್ತರಾಯಣ ಆರಂಭವಾಗಲಿದ್ದು, ಉತ್ತರ ಕರ್ನಾಟಕಕ್ಕೆ ಅದರಲ್ಲೂ, ವಿಜಯಪುರ ಜಿಲ್ಲೆಗೆ ಒಳಿತಾಗಲಿದೆ. ಐತಿಹಾಸಿಕ ಬದಲಾವಣೆಗಳಾಗುತ್ತವೆ’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ರಾಜಕೀಯ ಭವಿಷ್ಯವಾಣಿ ಸದ್ಯದ ಮಟ್ಟಿಗೆ ಸುಳ್ಳಾಗಿದೆ.

ಹೌದು, ಮುಖ್ಯಮಂತ್ರಿ ಗಾದಿಯ ಕನಸು ಕಂಡಿದ್ದ ಜಿಲ್ಲೆಗೆ ಒಂದೇ ಒಂದು ಮಂತ್ರಿ ಸ್ಥಾನವೂ ಯಡಿಯೂರಪ್ಪ ಸಂಪುಟದಲ್ಲಿ ಲಭಿಸಿಲ್ಲದಿರುವುದುಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.

ಬಸನಗೌಡ ಪಾಟೀಲ ಯತ್ನಾಳ, ಎ.ಎಸ್‌.ಪಾಟೀಲ ನಡಹಳ್ಳಿ ಮತ್ತು ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಜಿಲ್ಲೆಯಲ್ಲಿ ಮೂವರು ಬಿಜೆಪಿ ಘಟಾನುಘಟಿ ಶಾಸಕರಿದ್ದರೂ ಯಾರೊಬ್ಬರಿಗೂ ಸಚಿವ ಸ್ಥಾನ ಲಭಿಸದಿರುವುದು ಹತಾಸೆಗೆ ಕಾರಣವಾಗಿದೆ.

ADVERTISEMENT

ಜಿಲ್ಲೆಯಲ್ಲಿ ಬಿಜೆಪಿ ಶಾಸಕರು, ಸಂಸದರು ಹಾಗೂ ಪ್ರಭಾವಿ ಮುಖಂಡರ ನಡುವಿನ ಆಂತರಿಕ ಕಚ್ಚಾಟದ ಪರಿಣಾಮವೇ ಸಚಿವ ಸ್ಥಾನ ಜಿಲ್ಲೆಗೆ ಲಭಿಸದಿರುವುದಕ್ಕೆ ಮುಖ್ಯ ಕಾರಣ ಎಂದು ಪಕ್ಷದೊಳಗೆ ವಿಶ್ಲೇಷಿಸಲಾಗುತ್ತಿದೆ.

ಮೂವರು ಶಾಸಕರಲ್ಲಿಯಾರೊಬ್ಬರಿಗೂ ಸಚಿವ ಸ್ಥಾನ ಲಭಿಸದೇ ಇರುವುದರಿಂದ ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹಿಡಿತ, ಪ್ರಾಬಲ್ಯ ಜಿಲ್ಲೆಯಲ್ಲಿ ಮತ್ತಷ್ಟು ಗಟ್ಟಿಯಾದಂತಾಗಿದೆ.

ಪ್ರಸ್ತುತ ಬಿಜೆಪಿ ಆಡಳಿತಾವಧಿಯಲ್ಲಿ ಜಿಲ್ಲೆಯ ಯಾರೊಬ್ಬರೂ ಸಚಿವರಾಗಿರದೇ ಇರುವುದು ಜಿಲ್ಲೆಯ ಅಭಿವೃದ್ಧಿಗೂ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ, ಶೀಘ್ರದಲ್ಲೇ ಎದುರಾಗಲಿರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಬಸನ ಗೌಡ್ರು ಸ್ವಲ್ಪ ದಿನ ಸುಮ್ಮನಿದ್ದರೆ ಸಚಿವ ಸ್ಥಾನ ಸುಲಭವಾಗಿ ಲಭಿಸುತ್ತಿತ್ತು. ಆದರೆ, ಅದನ್ನು ಬಿಟ್ಟು ಅನಗತ್ಯವಾಗಿ ಮುಖ್ಯಮಂತ್ರಿ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಅವಕಾಶ ವಂಚಿತರಾದರು’ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ನಿರಾಸೆ ವ್ಯಕ್ತಪಡಿಸಿದರು.

ಶಾಸಕ ಯತ್ನಾಳ ಅವರು ಮುಖ್ಯಮಂತ್ರಿ ವಿರುದ್ಧಇದೀಗ ಮತ್ತೆ ಗಂಭೀರ ಆರೋಪಗಳನ್ನು ಮಾಡಿರುವುದರಿಂದ ಯಡಿಯೂರಪ್ಪ ಅಧಿಕಾರವಧಿಯಲ್ಲಿ ಜಿಲ್ಲೆ ಮತ್ತಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡರ ಲೆಕ್ಕಾಚಾರವಾಗಿದೆ.

ಕಡೆಗಣನೆ:ಜಿಲ್ಲೆಯ ಯಾರೊಬ್ಬರೂ ಸಚಿವರಿಲ್ಲದ ಕಾರಣ ಅನ್ಯ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನಿಯೋಜಿಸಲಾಗುತ್ತದೆ. ಅವರು, ತಿಂಗಳಿಗೆ ಒಂದೆರಡು ಬಾರಿ ಕಾಟಾಚಾರಕ್ಕೆ ಎಂಬಂತೆ ಬಂದು ಹೋಗುತ್ತಾರೆ. ಹೀಗಾಗಿ ಅನುದಾನವೂ ಬರುತ್ತಿಲ್ಲ, ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಅಧಿಕಾರಿಗಳದ್ದೇ ದರ್ಬಾರ್‌, ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿವೆ.

ವಿಜಯಪುರ ನಗರ ಮತ್ತು ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ದುರಸ್ತಿಗೆ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೂ ಸಮಸ್ಯೆಯಾಗತೊಡಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲೆಗೆ ಸಿಕ್ಕಿದ್ದು ನಿಗಮ ಮಂಡಳಿ ಮಾತ್ರ:ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಹಿರಿಯ ಮುಖಂಡ ವಿಜುಗೌಡ ಪಾಟೀಲ ಮತ್ತು ಅಶೋಕ ಅಲ್ಲಾಪುರ ಸೇರಿದಂತೆ ಮೂವರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಕ್ಕಿರುವುದನ್ನು ಬಿಟ್ಟರೆ ಬೇರಾವ ಅಧಿಕಾರ ಇಲ್ಲದೇ ಇರುವುದರಿಂದ ಪಕ್ಷದ ಕಾರ್ಯಕರ್ತರು, ಮುಖಂಡರ ಬೇಡಿಕೆಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ದೂರು ಕೇಳಿಬಂದಿದೆ.

ಕಾಂಗ್ರೆಸ್, ಜೆಡಿಎಸ್‌‌ ಅವಧಿಯಲ್ಲಿ ಅಧಿಕಾರ ಭಾಗ್ಯ‌

ಈ ಹಿಂದಿನಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಎರಡು, ಮೂರು ಸಚಿವ ಸ್ಥಾನದ ಭಾಗ್ಯ ಲಭಿಸಿತ್ತು. ರಾಜಕೀಯವಾಗಿ ಜಿಲ್ಲೆ ರಾಜ್ಯದ ಗಮನ ಸೆಳೆದಿತ್ತು. ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿದ್ದವು. ಹತ್ತು, ಹಲವು ಯೋಜನೆಗಳು, ಸಾವಿರಾರು ಕೋಟಿ ಅನುದಾನಜಿಲ್ಲೆಗೆ ಹರಿದು ಬಂದಿತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಅಧಿಕಾರ, ಅನುದಾನ, ಯೋಜನೆಗಳು ಲಭಿಸಿದರೆ ಜಿಲ್ಲೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.