ADVERTISEMENT

ವಿಜಯಪುರ: ಪ್ರವಾಹ ಪರಿಹಾರ ಕಾರ್ಯಕ್ಕೆ ಸೂಚನೆ

ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:18 IST
Last Updated 10 ಆಗಸ್ಟ್ 2025, 3:18 IST
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ಅವರನ್ನು ತರಾಟೆಗೆ ತೆಗೆದುಕೊಂಡರು –ಪ್ರಜಾವಾಣಿ ಚಿತ್ರ
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ಅವರನ್ನು ತರಾಟೆಗೆ ತೆಗೆದುಕೊಂಡರು –ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ ಹಾನಿ ಕುರಿತಂತೆ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆಯಿಂದಾದ ಹಾನಿ ಹಾಗೂ ಅದರ ಪರಿಣಾಮಗಳ ಕುರಿತು ಮಾಹಿತಿ ಪಡೆದುಕೊಂಡರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಾಳಾಗಿರುವ ರಸ್ತೆಗಳ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸಬೇಕು. ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆ ನಡೆಸಬೇಕು. ಜಿಪಿಎಸ್ ಫೋಟೊ ಬಳಸಿ ಯಾವುದೇ ರೈತರಿಂದ ದೂರು ಬರದಂತೆ ನೋಡಿಕೊಂಡು ಎಚ್ಚರಿಕೆ ವಹಿಸಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ಪಿಡಿಒ ಸೇರಿದಂತೆ ತಮ್ಮ ಅಧೀನದ ಅಧಿಕಾರಿಗಳಿಂದ ಕೂಡಲೇ ಮಾಹಿತಿ ಪಡೆದು, ನಿಯಮಾನುಸಾರ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಸಮರ್ಪಕವಾಗಿ ಸಮೀಕ್ಷೆ ನಡೆಸಿ ನಿಗದಿತ ಅವಧಿಯಲ್ಲಿ ವಿಳಂಬ ಮಾಡದೇ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.

ಮುನ್ನೆಚ್ಚರಿಕೆ ವಹಿಸಿ

ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಿ ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. 

ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು 11 ಕಿ.ಮೀ. ಕೋಟೆಗೋಡೆ ಕಂದಕ ಸಂಪೂರ್ಣ ಸರ್ವೇ ಮಾಡಿಸಿ, ಈಗಾಗಲೇ ಮಾರ್ಕ್ ಮಾಡಿಸಲಾಗಿದೆ. ಮನಗೂಳಿ ಅಗಸಿಯಿಂದ ಸಿಂದಗಿ ರೈಲ್ವೆ ಸ್ಟೇಷನ್‍ವರೆಗೆ ಕೋಟೆಗೋಡೆ ಕಂದಕ ಹೂಳು ತೆಗೆಯುವುದು ಮತ್ತು ಸಮತಟ್ಟುಗೊಳಿಸಿ ನೀರನ್ನು ಸಂಪೂರ್ಣವಾಗಿ ಹೊರ ಹಾಕಲು ಈಗಾಗಲೇ ಯೋಜನೆ ರೂಪಿಸಿ ಚಾಲನೆ ನೀಡಲಾಗಿದ್ದು, ಈ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕೋಟೆಗೋಡೆ ಸ್ವಚ್ಛತೆ, ಹೂಳು ತೆಗೆಯುವುದು, ಕಂಟಿ-ಮುಳ್ಳುಗಳನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ನಗರದ ಕೆ.ಸಿ.ನಗರ, ಗಚ್ಚಿನಕಟ್ಟಿ ಕಾಲೊನಿ ವಾರ್ಡ್‌ ನಂ.10ರಲ್ಲಿ ಮಳೆ ನೀರು ಚರಂಡಿ ನಿರ್ಮಿಸುವ ಕಾಮಗಾರಿಯನ್ನು ಕೈಗೊಂಡು ಈ ಭಾಗದಲ್ಲಿ ಪ್ರವಾಹ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ವಾರ್ಡ್‌ ನಂ.24ರ ಬಾಗಾಯತ್ ಗಲ್ಲಿಯಲ್ಲಿ ಅತಿಕ್ರಮಣ ತೆರವುಗೊಳಿಸಿ ಮಳೆ ಚರಂಡಿ ನಿರ್ಮಿಸುವ ಮೂಲಕ ಪ್ರವಾಹ ಪರಿಸ್ಥಿತಿ ಎದುರಾಗದಂತೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. 

ರಾಮನಗರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೊಳ್ಳಲು ₹1 ಕೋಟಿ ಅವಶ್ಯಕತೆ ಇದ್ದು, ಮಹಾನಗರ ಪಾಲಿಕೆಯಿಂದ ತುರ್ತು ಅನುದಾನವನ್ನು ಬಳಸಿಕೊಂಡು ಕೂಡಲೇ ಅಗತ್ಯ ಕಾಮಗಾರಿ ಕೈಗೊಂಡು ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಇಬ್ರಾಹಿಂರೋಜಾ ಹತ್ತಿರ ಕೋಟೆಗೋಡೆ ಪ್ರದೇಶದಲ್ಲಿ ಅತಿಕ್ರಮಣ ಮಾಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗಲು ಜಾಗವಿಲ್ಲದೇ ನೀರು ನಿಂತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿಕ್ರಮಣ ತೆರವುಗೊಳಿಸದಂತೆ ಕೆಲವರು ಕೋರ್ಟ್‌ ಮೊರೆ ಹೋಗಿರುವುದರಿಂದ  ಕೋರ್ಟ್‌ ಆದೇಶ ಬರುವವರೆಗೆ ಕಾಯ್ದು ಕುಳಿತುಕೊಳ್ಳದೇ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ವಹಿಸಿ, ಅತಿಕ್ರಮಣ ಮಾಡಿಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು. 

ಆಲಮಟ್ಟಿ ಜಲಾಶಯದಿಂದ ಜಿಲ್ಲೆಯಲ್ಲಿ ಅವಶ್ಯಕತೆ ಇರುವ ಕೆರೆಗಳನ್ನು ತುಂಬಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಡಾ. ಆನಂದ್‌ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ್ ಉಪಸ್ಥಿತರಿದ್ದರು.

ಮಳೆಯಿಂದ ಹಾನಿಯಾಗುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಈ ಕುರಿತು ರೈತರಿಂದ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು.
–ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಪಾಲಿಕೆ ಆಯುಕ್ತರ ವಿರುದ್ಧ ಸಚಿವ ಗರಂ

ವಿಜಯಪುರ: ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ಅವರನ್ನು ಸಚಿವ ಎಂ.ಬಿ.ಪಾಟೀಲ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ‘ವಿಜಯಪುರ ನಗರದಲ್ಲಿ ಕೋಟೆಗೋಡೆ ರಾಜಕಾಲುವೆ ಒತ್ತುವರಿ ತೆರವು ವಿಷಯದಲ್ಲಿ ನೀವು ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ನಿಮ್ಮ ಕೆಲಸದ ಬಗ್ಗೆ ನನಗೆ ಖುಷಿ ಇಲ್ಲ ಈ ಹಿಂದೆ ಸುದ್ದಿ ಮಾಧ್ಯಮಗಳ ಎದುರು ಒತ್ತುವರಿ ತೆರವು ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಇದಕ್ಕೆ ನೀವು ಸ್ಪಂದಿಸುತ್ತಿಲ್ಲ. ಇದು ನಿಮಗೆ ಕೊನೇ ಅವಕಾಶ ಇಲ್ಲವಾದರೆ ವರ್ಗಾವಣೆ ಗ್ಯಾರಂಟಿ’ ಎಂದು ಸಚಿವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.