ADVERTISEMENT

ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 14:02 IST
Last Updated 9 ಜನವರಿ 2026, 14:02 IST
   

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು, ಉದ್ದೇಶಿತ ಖಾಸಗಿ–ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ) ಕೈಬಿಡಬೇಕು ಎಂದು ಆಗ್ರಹಿಸಿ 115 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ವಿಜಯಪುರ ನಗರದ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರತಿಷ್ಠಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಅನಾವರಣ, ಸೈಕ್ಲಿಂಗ್‌ ವೆಲೋಡ್ರೋಮ್‌ ಉದ್ಘಾಟನೆ ಹಾಗೂ ₹870 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಪಿಪಿಪಿ ವಿರೋಧಿಸಿ ವಿಜಯಪುರದಲ್ಲಿ ನಡೆದ ದೀರ್ಘ ಹೋರಾಟ ನನ್ನ ಗಮನಕ್ಕೆ ಬಂದಿದೆ. ಪಿಪಿಪಿ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಯಾಗಿತ್ತು. ಅದನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. ಇನ್ನು ಮುಂದೆ ಹೋರಾಟ ಮಾಡುವ ಅಗತ್ಯವಿಲ್ಲ’ ಎಂದು ಪ್ರತಿಭಟನಾಕಾರರಲ್ಲಿ ಮನವಿ‌ ಮಾಡಿದರು.

‘ರಾಜ್ಯದ 22 ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ. ವಿಜಯಪುರ ಸೇರಿದಂತೆ ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಹೈಕಮಾಂಡ್‌ ಆಶೀರ್ವಾದ:

‘ರಾಜ್ಯದ ಜನತೆ, ಕಾಂಗ್ರೆಸ್‌ ಹೈಕಮಾಂಡ್‌, ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಶೀರ್ವಾದದಿಂದ ದೀರ್ಘಾವಧಿ ಮುಖ್ಯಮಂತ್ರಿಯಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆ ಮುರಿದ್ದು, ಹೆಚ್ಚುವರಿ ಮೂರು ದಿನ ಆಡಳಿತ ನಡೆಸಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.

ಸನ್ಮಾನ:

ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಜನತೆ ಪರವಾಗಿ ಸಚಿವ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ಜಿಲ್ಲೆಯ ಶಾಸಕರು ಬಸವಣ್ಣನ ಬೆಳ್ಳಿಯ ಮೂರ್ತಿ ನೀಡಿ ಸಿದ್ದರಾಮಯ್ಯಗೆ ವಿಶೇಷ ಸನ್ಮಾನ ಮಾಡಿದರು. 

ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಮನೆಯಲ್ಲೇ ತಯಾರಿಸಿ ತಂದಿದ್ದ ವಿಶೇಷ ಲಾಡನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜೊತೆ ಸೇರಿ ತಿನ್ನಿಸಿದರು.  

ಹೋರಾಟಗಾರರ ಬಿಡುಗಡೆಗೆ ಆಗ್ರಹ

ಖಾಸಗಿ –ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ) ವಿರೋಧಿಸಿ ಹೋರಾಟ ನಡೆಸುತ್ತಿರುವವರನ್ನು ಬಂಧಿಸಿ ಜೈಲಿಗೆ ಕಳಿಸಿರುವರನ್ನು ಬೇಷತ್ತಾಗಿ ಬಿಡುಗಡೆ ಮಾಡಬೇಕು, 27 ಜನರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣವನ್ನು ಕೈಬಿಡಬೇಕು ಎಂದು ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.

ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜನ್ನೇ ಮಾಡುತ್ತೇವೆ. ಪಿಪಿಪಿ ಮಾದರಿಯಲ್ಲಿ ಮಾಡಲ್ಲ. ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಹೋರಾಟ ಸಮಿತಿ ಸ್ವಾಗತಿಸುತ್ತವೆ ಮತ್ತು ಅವರಿಗೆ ಧನ್ಯವಾದ ತಿಳಿಸುತ್ತದೆ ಎಂದು ಹೇಳಿದೆ.

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ಯಾಗುವವರೆಗೂ ಹೋರಾಟ ಸಮಿತಿಯು ಅಸ್ತಿತ್ವದಲ್ಲಿರುತ್ತದೆ ಮತ್ತು‌ ಅದಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಬೇರೆ ಬೇರೆ ಸ್ವರೂಪಗಳಲ್ಲಿ ಮುಂದುವರೆಸಲಾಗುತ್ತದೆ ಎಂದು ಹೋರಾಟ ಸಮಿತಿ ಸದಸ್ಯ ಎಚ್.ಟಿ.ಭರತಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.