
ವಿಜಯಪುರ ನಗರದ ದರ್ಬಾರ್ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರು, ಸ್ವಾಮೀಜಿಗಳು ಇದ್ದರು
ಪ್ರಜಾವಾಣಿ ಚಿತ್ರ
ವಿಜಯಪುರ: 115 ದಿನಗಳ ಅವಿರತ ಜನ ಹೋರಾಟಕ್ಕೆ ಜಯ ಸಿಕ್ಕಿದೆ. ಜಿಲ್ಲೆಯ ಜನತೆಯ ದಶಕಗಳ ಕನಸು ನನಸಾಗಿದೆ. ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಗರಕ್ಕೆ ಶುಕ್ರವಾರ ಬಂದು ಘೋಷಣೆ ಮಾಡಿದ್ದಾರೆ.
‘ಉದ್ದೇಶಿತ ಖಾಸಗಿ–ಸಾರ್ವಜನಿಕ ಸಹಭಾಗಿತ್ವವನ್ನು ಸಂಪೂರ್ಣ ಕೈಬಿಡುತ್ತೇವೆ. ಹೋರಾಟವನ್ನು ಕೈಬಿಡಿ’ ಎಂದು ಮನವಿ ಮಾಡಿದರು.
‘ರಾಜ್ಯದ 22 ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ವಿಜಯಪುರ ಸೇರಿದಂತೆ ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲೂ ಸರ್ಕಾರವೇ ವೈದ್ಯಕೀಯ ಕಾಲೇಜು ಸ್ಥಾಪಿಸಲಿದೆ. ಜೊತೆಗೆ ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯುತ್ತೇವೆ’ ಎಂದು ಭರವಸೆ ನೀಡಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜ್ಯಕ್ಕೆ ಅನ್ನಭಾಗ್ಯ ನೀಡಿರುವ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆರೋಗ್ಯ ಭಾಗ್ಯ ನೀಡಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ’ ಎಂದರು.
‘ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿ, ಅಗತ್ಯ ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಯವರಿ ಸರ್ಕಾರಿ ಕಾಲೇಜು ಘೋಷಣೆ ಮಾಡಿರುವುದಕ್ಕೆ ಹೋರಾಟ ಸಮಿತಿ ಸ್ವಾಗತಿಸಿದೆ. ಜೈಲಿನಲ್ಲಿರುವ ಎಲ್ಲಾ ಹೋರಾಟಗಾರರನ್ನು ಬೇಷರತ್ತಾಗಿ ಕೂಡಲೇ ಬಿಡುಗಡೆಗೊಳಿಸಬೇಕು. ಎಲ್ಲಾ 27 ಜನರ ಮೇಲಿನ ಸುಳ್ಳು ಪ್ರಕರಣಗಳನ್ನು ಶಾಶ್ವತವಾಗಿ ಕೈ ಬಿಡಬೇಕು ಎಂದು ಹೋರಾಟ ಸಮಿತಿಯು ಆಗ್ರಹಿಸಿದೆ.
ಮುಖ್ಯಮಂತ್ರಿಗಳ ವಾಗ್ದಾನದಿಂದ ಇಂದಿನಿಂದ ಅನಿರ್ದಿಷ್ಟ ಧರಣಿ ಹಿಂಪಡೆಯಲಾಗಿದೆ. ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆ ಯಾಗುವವರೆಗೂ ಹೋರಾಟ ಸಮಿತಿಯು ಅಸ್ತಿತ್ವದಲ್ಲಿರುತ್ತದೆ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಬೇರೆ ಬೇರೆ ಸ್ವರೂಪಗಳಲ್ಲಿ ಮುಂದುವರೆಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
‘ಎಲ್ಲಾ ಹೋರಾಟಗಾರರು ಜೈಲಿನಿಂದ ಬಿಡುಗಡೆಯಾಗಿ ಬರುವವರೆಗೂ ಯಾವುದೇ ವಿಜಯೋತ್ಸವ ಹೋರಾಟ ಸಮಿತಿಯಿಂದ ಇರುವುದಿಲ್ಲ. ಅವರು ಜೈಲಿನಿಂದ ಬಂದ ಮೇಲೆ ಸಭೆ ಸೇರಿ ನಿರ್ಧರಿಸಲಾಗುವುದು’ ಎಂದು ಹೋರಾಟ ಸಮಿತಿ ಸದಸ್ಯ ಎಚ್.ಟಿ.ಭರತ್ ಕುಮಾರ್ ‘ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವರಾದ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ರಾಮಲಿಂಗಾರೆಡ್ಡಿ, ಎಚ್.ಸಿ.ಮಹಾದೇವಪ್ಪ, ಡಾ.ಎಂ.ಸಿ.ಸುಧಾಕರ, ಬೈರತಿ ಸುರೇಶ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಯಶವಂತ ರಾಯಗೌಡ ಪಾಟೀಲ, ವಿಠಲ ಕಟಕದೊಂಡ, ಅಶೋಕ ಮನಗೂಳಿ, ಸಿ.ಎಸ್.ನಾಡಗೌಡ, ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ, ಪ್ರಕಾಶ ಹುಕ್ಕೇರಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕೌಶಲಾಭಿವೃದ್ಧಿ ನಿಗಮದ ಕಾಂತಾ ನಾಯಕ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮಲ್ಲಿಕಾರ್ಜುನ ಲೋಣಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಬುರಾಣಪುರದ ಯೋಗಿಶ್ವರಿ ಮಾತಾ, ಮನಗೂಳಿಯ ಸಂಗನಬಸವ ಸ್ವಾಮೀಜಿ ಉಪಸ್ಥಿತರಿದ್ದರು.
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಷ್ಠಾಪಿಸಿರುವ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರು ಸ್ವಾಮೀಜಿಗಳು ಇದ್ದರು
ಸಿಪಾಯಿ ದಂಗೆಗೂ 33 ವರ್ಷಗಳ ಮೊದಲೇ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಕೆಚ್ಚೆದೆ ಬದ್ಧತೆ ಛಲದೊಂದ ಹೋರಾಡಿದ ಕೀರ್ತಿ ಕಿತ್ತೂರು ರಾಣಿ ಚನ್ನಮ್ಮಗೆ ಸಲ್ಲುತ್ತದೆಸಿದ್ದರಾಮಯ್ಯ ಮುಖ್ಯಮಂತ್ರಿ
ಬೆಂಗಳೂರು ವಿಧಾನಸೌಧದ ಎದುರು ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಲು ಮುಖ್ಯಮಂತ್ರಿ ಸರ್ಕಾರ ಆದ್ಯತೆ ನೀಡಬೇಕು. ಈ ಮೂಲಕ ಗೌರವ ಸಲ್ಲಿಸಬೇಕುವಚನಾನಂದ ಸ್ವಾಮೀಜಿ ಪಂಚಮಸಾಲಿ ಪೀಠಹರಿಹರ
ಚನ್ನಮ್ಮ ಕೇವಲ ಒಂದು ಸಮಾಜದ ಸ್ವತ್ತಲ್ಲ ಬ್ರಿಟೀಷರ ವಿರುದ್ದ ಹೋರಾಡಿದ ದಿಟ್ಟ ಮಹಿಳೆ. ಜಾತ್ಯತೀತ ಮಾನವೀಯ ಮೌಲ್ಯ ಹೊಂದಿರುವ ಮಹಿಳೆಶಿವಾನಂದ ಪಾಟೀಲ ಸಚಿವ
ಬಸವಣ್ಣನವರ ನಾಡಿನಲ್ಲಿ ಎಲ್ಲಾ ಧರ್ಮ ಜಾತಿಗಳನ್ನು ಅನೇಕ ಶ್ರೀಗಳು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿದ್ದು ಈ ಜಿಲ್ಲೆಗಳು ಸರ್ವಜನಾಂಗದ ಶಾಂತಿಯ ತೋಟವಾಗಿದೆಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
₹870 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ
ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಕಿತ್ತೂರು ರಾಣಿಚೆನ್ನಮ್ಮ ಮೂರ್ತಿ ಅನಾವರಣ ಭೂತನಾಳ ಸಮೀಪ ನಿರ್ಮಾಣವಾಗಿರುವ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ ಹಾಗೂ ₹870 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸಚಿವರು ಚಾಲನೆ ನೀಡಿದರು.
ಬೆಳ್ಳಿ ಮೂರ್ತಿ ಉಡುಗೊರೆ ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಬಸವಣ್ಣನ ಬೆಳ್ಳಿ ಮೂರ್ತಿಯನ್ನು ಜಿಲ್ಲೆಯ ಜನಪ್ರತಿನಿಧಿಗಳು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು.
ಅಲ್ಲದೇ ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಲಾಡನ್ನು ಸಿಎಂಗೆ ತಿನ್ನಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಾಮೀಜಿಗಳು ಕೂಡ ಸಿಹಿ ತಿನ್ನಿಸಿದರು. ಕಾಂಗ್ರೆಸ್ ಮುಖಂಡರು ಸಾರ್ವಜನಿಕರು ಅಭಿಮಾನಿಗಳು ಕೂಡ ಮುಖ್ಯಮಂತ್ರಿಗೆ ಪೇಟ ಶಾಲು ಹಾರ ತುರಾಯಿ ಹಾಕಿ ಸನ್ಮಾನಿಸಿ ಅಭಿಮಾನ ಮೆರೆದರು.
ಪ್ಲೈಓವರ್‌ಗೆ ₹160 ಕೋಟಿ: ಸಿಎಂ
‘ವಿಜಯಪುರ ನಗರದ ಕನಕದಾಸ ವೃತ್ತದಿಂದ ಶಿವಾಜಿ ವೃತ್ತದ ವರೆಗೆ ಪ್ಲೈಓವರ್ ನಿರ್ಮಾಣಕ್ಕೆ ₹160 ಕೋಟಿ ಅನುದಾನ ನೀಡಬೇಕು’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ನೀಡುವ ಭರವಸೆ ನೀಡಿದರು. ‘ಸಿದ್ದರಾಮಯ್ಯರ ಏಜೆಂಟ್ ಅಲ್ಲ’ ‘ನಾನು ಸಿದ್ದರಾಮಯ್ಯ ಏಜೆಂಟ್ ಎಂದು ಕೆಲವರು ಟೀಕಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಏಜೆಂಟ್ ಅಲ್ಲ ಅವರು ಒಳ್ಳೆಯ ಕೆಲಸ ಮಾಡಿದಾಗ ಅಭಿನಂದಿಸುತ್ತೇನೆ. ಅಭಿನಂದಿಸಲು ನಾನು ಯಾರಿಗೂ ಅಂಜುವುದಿಲ್ಲ’ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.