ವಿಜಯಪುರ: ‘ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ನೀಡಲಾಗಿದ್ದ ಸಚಿವ ಸಂಪುಟ ದರ್ಜೆಗೆ ಸಮನಾದ ಸ್ಥಾನಮಾನವನ್ನು ಹಿಂಪಡೆದಿರುವುದು ಖಂಡನೀಯ ಹಾಗೂ ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಮಾಡಿದ ಘೋರ ಅವಮಾನ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆ-ಗರಿಮೆ, ಘನತೆ-ಗೌರವಗಳನ್ನು ಕಾಪಾಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಮರಳಿ ಕಸಾಪ ರಾಜ್ಯ ಘಟಕದ ಅಧ್ಯಕ್ಷರಿಗೆ ಅದೇ ಸ್ಥಾನಮಾನದಲ್ಲಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.
‘ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವುದು ಕಸಾಪ ರಾಜ್ಯ ಘಟಕದ ಅಧ್ಯಕ್ಷರಿಗೇ ಹೊರತು, ಯಾವುದೇ ವ್ಯಕ್ತಿಗಲ್ಲ’ ಎಂದು ಹೇಳಿದರು.
‘28 ಜಿಲ್ಲೆಗಳ ಕಸಾಪ ಅಧ್ಯಕ್ಷರು ಮತ್ತು ಜೋಶಿಯವರು ಸಮನ್ವಯತೆಯಿಂದ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಯಾವತ್ತೂ ಜೋಶಿಯವರು ಸರ್ವಾಧಿಕಾರಿಯಂತೆ ವರ್ತಿಸಿಲ್ಲ. ಅತೃಪ್ತರು ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ’ ಎಂದರು.
‘ಮಹೇಶ ಜೋಶಿಯವರನ್ನು ವಜಾ ಮಾಡಲು ಆಗ್ರಹಿಸುತ್ತಿರುವ ಸಾಹಿತಿ ಪ್ರೊ ಎಸ್.ಜಿ. ಸಿದ್ಧರಾಮಯ್ಯನವರಿಗೆ ಮತಿಭ್ರಮಣೆಯಾಗಿದೆ. ಜೋಶಿಯವರು ಹಾಗೂ ಎಲ್ಲ ಜಿಲ್ಲೆಯ ಕಸಾಪ ಅಧ್ಯಕ್ಷರು ಚುನಾಯಿತರಾಗಿ ಆಯ್ಕೆಯಾಗಿರುವುದನ್ನು ಅವರು ಮರೆತಂತಿದೆ. ಪ್ರೊ ಎಸ್.ಜಿ. ಸಿದ್ದರಾಮಯ್ಯ ಜಿಲ್ಲಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅವರ ಅವಿವೇಕತನವನ್ನು ಎತ್ತಿ ತೋರಿಸುತ್ತದೆ’ ಎಂದು ದೂರಿದರು.
‘ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಕನಿಷ್ಠ ₹40 ಕೋಟಿ ಬಿಡುಗಡೆ ಮಾಡುವಂತೆ ಜೋಶಿ ಅವರು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಆದರೆ, ಸಮ್ಮೇಳನದ ದಿಕ್ಕು ತಪ್ಪಿಸಿ ಅಕ್ಷರ ಜಾತ್ರೆಯನ್ನು ಹಾಳು ಮಾಡಲು ಸಾಹಿತಿ ಪ್ರೊ. ಎಸ್.ಜಿ ಸಿದ್ದರಾಮಯ್ಯ ಹಾಗೂ ಅವರ ಬಳಗ ಸಂಚು ರೂಪಿಸುತ್ತಿದ್ದಾರೆ. ಇದನ್ನು ಸರ್ಕಾರ ಪರಿಗಣಿಸಬಾರದು’ ಎಂದು ಮನವಿ ಮಾಡಿದರು.
ಕಸಾಪ ಜಿಲ್ಲಾ ಘಟಕದ ಗೌರವ ಅಧ್ಯಕ್ಷೆ ಭಾರತಿ ಪಾಟೀಲ, ಪದಾಧಿಕಾರಿಗಳಾದ ರವಿ ಕಿತ್ತೂರ, ಮಹಮ್ಮದಗೌಸ ಹವಾಲ್ದಾರ, ಸಿದ್ರಾಮಯ್ಯ ಲಕ್ಕುಂಡಿಮಠ, ಆನಂದ ಕುಲಕರ್ಣಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಆಶಾ ಬಿರಾದಾರ, ಅರ್ಜುನ ಶಿರೂರ, ವಿಜಯಲಕ್ಷ್ಮಿ ಹಳಕಟ್ಟಿ, ಬಸವರಾಜ ಬಿರಾದಾರ ಇದ್ದರು.
ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ನೀಡುವ ಅನುದಾನ ಆಯಾ ಜಿಲ್ಲಾಧಿಕಾರಿಯವರ ಅಕೌಂಟ್‌ನಲ್ಲಿರುತ್ತದೆ. ಈ ಹಣದಲ್ಲಿ ಕಸಾಪ ಅವ್ಯವಹಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತುಹಾಸಿಂಪೀರ ವಾಲಿಕಾರಅಧ್ಯಕ್ಷ ಕಸಾಪ ವಿಜಯಪುರ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.