ADVERTISEMENT

ವಿಜಯಪುರ: ಚಿಣ್ಣರ ಕುಂಚದಲ್ಲಿ ಅರಳಿದ ಸ್ಮಾರಕ ವೈಭವ

ಗಗನ್ ಮಹಲ್ ಉದ್ಯಾನದಲ್ಲಿ ಕಲಾ ಶಿಬಿರ: ನೂರಾರು ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:53 IST
Last Updated 17 ನವೆಂಬರ್ 2025, 5:53 IST
ವಿಜಯಪುರದಲ್ಲಿ ವೃಕ್ಷೋಥಾನ್ ಪ್ರಯುಕ್ತ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಚಿತ್ರ ಬಿಡಿಸಿದರು
ವಿಜಯಪುರದಲ್ಲಿ ವೃಕ್ಷೋಥಾನ್ ಪ್ರಯುಕ್ತ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಚಿತ್ರ ಬಿಡಿಸಿದರು   

ವಿಜಯಪುರ: ವಾಸ್ತುಶಿಲ್ಪದ ವೈಭವಕ್ಕೆ ಹೆಸರಾದ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಉಪಲಿ ಬುರುಜ್ ಹೀಗೆ ವಿಜಯಪುರದ ಭವ್ಯ ಸ್ಮಾರಕಗಳ ವೈಭವವನ್ನು ಪುಟಾಣಿ ಕಲಾವಿದರು ತಮ್ಮ ಕುಂಚದಲ್ಲಿ ಅರಳಿಸಿದರು. ವಿಜಯಪುರದ ಸ್ಮಾರಕಗಳು ‘ಲ್ಯಾಂಡ್‌ಸ್ಕೇಪ್‌’ನಲ್ಲಿ ಅರಳಿ ತಮ್ಮದೇ ರೂಪ ಪಡೆದುಕೊಂಡಿದ್ದವು.

ವಿಜಯಪುರದ ಗಗನ್ ಮಹಲ್ ಉದ್ಯಾನದ ಅಂಗಳದಲ್ಲಿ ವೃಕ್ಷೋಥಾನ್ ಅಂಗವಾಗಿ ಬಿಎಲ್‌ಡಿಇ ಸಂಸ್ಥೆ, ವೃಕ್ಷೋಥಾನ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಲಾ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.

ಬೆಳಿಗ್ಗೆಯೇ ಉದ್ಯಾನವನದತ್ತ ಆಗಮಿಸಿದ ವಿದ್ಯಾರ್ಥಿಗಳು, ಹಸಿರು ಹಾಸಿನ ಮೇಲೆ ಕುಳಿತು ಚಿತ್ರ ಬಿಡಿಸುವಲ್ಲಿ ತಲ್ಲೀನರಾದರು. ಕೆಲವರು ಕ್ರೇಯಾನ್ಸ್ ಬಳಸಿ ಸ್ಮಾರಕಗಳಿಗೆ ಬಣ್ಣ ತುಂಬುತ್ತಿದ್ದರೆ, ಕೆಲವೊಬ್ಬರು ಬ್ರಷ್‌ಗಳಿಂದ ವಾಟರ್ ಕಲರ್ ಮೂಲಕ ತಮ್ಮ ಚಿತ್ರಗಳಿಗೆ ಅಂದ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ADVERTISEMENT

ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ್, ಜಾಮೀಯಾ ಮಸೀದಿ, ಉಪಲಿ ಬುರುಜ್, ನವದೆಹಲಿಯ ಕೆಂಪು ಕೋಟೆ ಸೇರಿದಂತೆ ನೂರಾರು ಸ್ಮಾರಕಗಳ ಚಿತ್ರಗಳನ್ನು ವಿದ್ಯಾರ್ಥಿಗಳು ರಚಿಸಿದರು.

ಇನ್ನೂ ಕೆಲವು ವಿದ್ಯಾರ್ಥಿಗಳು ಒಂದೇ ಚಿತ್ರದಲ್ಲಿ ಎಲ್ಲ ಸ್ಮಾರಕಗಳನ್ನು ಕ್ರೋಢೀಕರಿಸಿ ವಿಜಯಪುರ ಸ್ಮಾರಕ ಪರಂಪರೆಯ ವೈಭವ ಪರಿಚಯಿಸುವ ಪ್ರಯತ್ನ ಮಾಡಿದರು. ಒಂದೊಂದು ಚಿತ್ರವೂ ಅದ್ಭುತ ರೀತಿಯಲ್ಲಿತ್ತು. ಇಡೀ ವಿಜಯಪುರದ ಸ್ಮಾರಕಗಳನ್ನೇ ಒಂದೇ ಕಡೆ ನೋಡುವ ಅವಕಾಶ ಎಂಬ ರೀತಿಯಲ್ಲಿ ಆಪ್ತವಾಗಿ ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಿದ್ದರು.

ಲ್ಯಾಂಡ್‌ಸ್ಕೇಪ್‌ನಲ್ಲಿ ಔಟ್‌ಲೈನ್ ಹಾಕಿ, ವಿವಿಧ ಪೂರಕ ಉಪಕರಣಗಳೊಂದಿಗೆ ಅತ್ಯಂತ ತನ್ಮಯರಾಗಿ ಚಿತ್ರಗಳನ್ನು ಬಿಡಿಸಿದರು.

‘ವಿಜಯಪುರದಲ್ಲಿ ಪರಿಸರ ರಕ್ಷಣೆ ಹಾಗೂ ಅರಣ್ಯೀಕರಣ ಉದ್ದೇಶದೊಂದಿಗೆ ಕಳೆದ ಹಲವಾರು ವರ್ಷಗಳಿಂದ ಮ್ಯಾರಥಾನ್ ನಡೆಯುತ್ತಿದ್ದು, ಈ ಬಾರಿಯೂ ಡಿಸೆಂಬರ್ ತಿಂಗಳಲ್ಲಿ ಮ್ಯಾರಥಾನ್ ನಡೆಯುತ್ತಿದ್ದು, ಈ ಕಾರ್ಯಕ್ರಮದ ಭಾಗವಾಗಿ ನಡೆದ ಈ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿತ್ತು’ ಎಂದು ಸಂಘಟಕರಾದ ಪ್ರೊ. ಮುರುಗೇಶ ಪಟ್ಟಣಶೆಟ್ಟಿ ಮಾಹಿತಿ ನೀಡಿದರು.

‘ನಮ್ಮ ಪರಿಸರ ಸಂರಕ್ಷಣೆ ಜೊತೆಗೆ ಸ್ಮಾರಕಗಳ ಸಂರಕ್ಷಣೆಯೂ ಅಗತ್ಯ. ವಿಜಯಪುರ ಸ್ಮಾರಕಗಳು ನಮ್ಮ ವಾಸ್ತುಶಿಲ್ಪದ ವೈಭವದ ಪ್ರತೀಕ. ಅವುಗಳನ್ನು ಉಳಿಸಿ– ಬೆಳೆಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸ್ಮಾರಕಗಳ ಕೇಂದ್ರಿತ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಗುತ್ತಿದೆ’ ಎಂದು ಸಂಘಟಕರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.