ADVERTISEMENT

ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ: ರವೀಂದ್ರ ಲೋಣಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 5:22 IST
Last Updated 11 ನವೆಂಬರ್ 2025, 5:22 IST
<div class="paragraphs"><p>ರವೀಂದ್ರ ಲೋಣಿ</p></div>

ರವೀಂದ್ರ ಲೋಣಿ

   

ವಿಜಯಪುರ: ‘ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಿ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿರುವುದು ನಗರದ ಅಭಿವೃದ್ಧಿ ದೃಷ್ಟಿಯಿಂದ ಅಲ್ಲ, ಕೇವಲ ಭೂಮಾಫಿಯಾ, ರಿಯಲ್ ಎಸ್ಟೇಟ್ ದಂಧೆ ಇದರ ಹಿಂದೆ ಇದೆ’ ಎಂದು ಬಿಜೆಪಿ ಮುಖಂಡ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಾಡಿರುವುದು ಆತುರದ ತಪ್ಪು ಮತ್ತು ಅವೈಜ್ಞಾನಿಕ ನಿರ್ಧಾರವಾಗಿದೆ. ಇದು ಖಂಡನೀಯ’ ಎಂದರು.

ADVERTISEMENT

‘ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಮುನ್ನಾ ಪಾಲಿಕೆಯಲ್ಲಿ ಚರ್ಚೆಯಾಗಿಲ್ಲ, ಸದಸ್ಯರ ಗಮನಕ್ಕೆ ತಂದಿಲ್ಲ, ಸಾರ್ವಜನಿಕರ ಗಮನಕ್ಕೆ ತಂದಿಲ್ಲ, ಆಕ್ಷೇಪಣೆಗೆ ಆಹ್ವಾನಿಸಲಿಲ್ಲ, ಸರ್ಕಾರಕ್ಕೆ ಪ್ರಸ್ತಾವ ಹೋಗಿಲ್ಲ, ಏಕಾಏಕಿ ಪಾಲಿಕೆ ವ್ಯಾಪ್ತಿ ವಿಸ್ತರಣೆಯಾಗಿರುವುದು ಅಚ್ಚರಿ ಮೂಡಿಸಿದೆ’ ಎಂದು ಹೇಳಿದರು.

‘ಪಾಲಿಕೆ ವ್ಯಾಪ್ತಿಗೆ ಸುತ್ತಮುತ್ತಲಿನ ಹಳ್ಳಿಗಳಾದ ಅರಕೇರಿ, ಜಾಲಗೇರಿ, ಇಟ್ಟಂಗಿಹಾಳ, ಮದಭಾವಿ, ತೊರವಿ, ಉಕಮನಾಳ, ಶಿವಗಿರಿ, ಅಲಿಯಾಬಾದ್‌, ಕತಕನಹಳ್ಳಿ, ಹಿಟ್ಟಿನಹಳ್ಳಿ ಸೇರಿದಂತೆ 19 ಹಳ್ಳಿಗಳ ವ್ಯಾಪ್ತಿಯ ಪ್ರದೇಶಕ್ಕೆ ಸೇರಿದ ಸರ್ವೆ ಭೂಮಿಯನ್ನು ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಪ್ರದೇಶಗಳನ್ನು ಸೇರ್ಪಡೆ ಮಾಡುವ ಮುನ್ನಾ ಸಾಕಷ್ಟು ನಿಯಮಗಳಿವೆ.‌ ಆದರೆ, ಇವುಗಳನ್ನು ಪಾಲಿಸಿಲ್ಲ, ಯಾವುದೇ ಪ್ರಕ್ರಿಯೆ ನಡೆದಿಲ್ಲ, ಭೂಮಿಗೆ ಬೆಲೆ ಹೆಚ್ಚಿಸಲು ಮಾಡಲಾಗಿದೆ’ ಎಂದು ಆರೋಪಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿರುವ ಅನೇಕ ವಾರ್ಡ್‌ಗಳ ಬಡಾವಣೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಸರ್ಕಾರದಿಂದ ಪಾಲಿಕೆಗೆ ಅನುದಾನ ಲಭಿಸುತ್ತಿಲ್ಲ, ಸಿಬ್ಬಂದಿ ಕೊರತೆ ಇದೆ, ಒಳ ಚರಂಡಿ, ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ, ಉದ್ಯಾನಗಳು ಹಾಳು ಬಿದ್ದಿವೆ. ಇಂತಹ ಸಂದರ್ಭದಲ್ಲಿ ಹಳ್ಳಿ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಒಳಪಡಿಸುತ್ತಿರುವುದು ಸರಿಯಾದ ನಿರ್ಧಾರವಲ್ಲ’ ಎಂದರು.

‘ಕೋಟೆ ಗೋಡೆ ಆಚೆಗಿನ ಕಾಯಕ ನಗರ, ಯೋಗಾಪುರ, ಆಶ್ರಮ ಭಾಗ, ಅಥಣಿ ರಸ್ತೆ, ಬಾಗಲಕೋಟೆ ರಸ್ತೆ ವ್ಯಾಪ್ತಿಯಲ್ಲಿರುವ ಅನೇಕ ಬಡಾವಣೆ ಹಳ್ಳಿಗಳ ಪರಿಸ್ಥಿತಿ  ನರಕಯಾತನೆಯಾಗಿದೆ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆಗಳು ಇಲ್ಲ. ಇದನ್ನು ಸುಧಾರಿಸುವ ಸಾಮಾರ್ಥ್ಯ ಪಾಲಿಕೆಗೆ ಇಲ್ಲ. ಜೊತೆಗೆ ಮಳೆಗಾಲದಲ್ಲಿ ನಗರದಲ್ಲಿ ಮುಳುಗಡೆ ಪರಿಸ್ಥಿತಿ ಇದೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿ ದೊಡ್ಡ ಸಮಸ್ಯೆಯಾಗುತ್ತಿದೆ. ಟ್ರಾಫಿಕ್‌ ಸಮಸ್ಯೆ ನಗರದಲ್ಲಿ ವ್ಯಾಪಕವಾಗಿದೆ. ನಗರದಲ್ಲಿ ಪಾರ್ಕಿಂಗ್‌ ಸ್ಥಳವೇ ಇಲ್ಲ. ಇದರ ನಿವಾರಣೆಗೆ ಆದ್ಯತೆ ನೀಡದೇ, ಶಾಶ್ವತ ಪರಿಹಾರ ಕಂಡುಕೊಳ್ಳದೇ ಪಾಲಿಕೆ ವ್ಯಾಪ್ತಿ ವಿಸ್ತರಿಸುವುದರಲ್ಲಿ ಅರ್ಥವಿಲ್ಲ’ ಎಂದರು.

‘ಪಾಲಿಕೆಯಲ್ಲಿ ಅಧಿಕಾರಿಗಳು, ಎಂಜಿನಿಯರ್‌, ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ. ಇದರಿಂದ ನಗರದ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದೆ. ಹಣಕಾಸಿನ ತೊಂದರೆ ಇದೆ. ಈ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕಿದೆ’ ಎಂದು ಒತ್ತಾಯಿಸಿದರು.

‘ಪಾಲಿಕೆ ವ್ಯಾಪ್ತಿ ವಿಸ್ತರಿಸುವುದರಿಂದ ನಗರದ ಹಾಲಿ ನಿವಾಸಿಗಳಿಗೆ ಹೊರೆಯಾಗುತ್ತದೆ. ಜೊತೆಗೆ ಹಳ್ಳಿ ಪ್ರದೇಶಗಳ ಜನರಿಗೂ ತೊಂದರೆಯಾಗಲಿದೆ. ಒಟ್ಟಾರೆ ಅಭಿವೃದ್ಧಿ ವಂಚಿತ ನಗರವಾಗಲಿದೆ. ಇದು ಹೇಯ ಕೃತ್ಯ, ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರು ಪಾಲಿಕೆಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲು ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.