ADVERTISEMENT

ಜನರ ಬಳಿ ಕೈ ಚಾಚಿದರೆ ಎಚ್ಚರ: ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ ಖಡಕ್‌ ಸೂಚನೆ

ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಖಡಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:02 IST
Last Updated 12 ಆಗಸ್ಟ್ 2025, 6:02 IST
ವಿಜಯಪುರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿ.ಪಂ.ಸಿಇಒ ರಿಷಿ ಆನಂದ್‌ ಇದ್ದರು 
ವಿಜಯಪುರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿ.ಪಂ.ಸಿಇಒ ರಿಷಿ ಆನಂದ್‌ ಇದ್ದರು    

ವಿಜಯಪುರ: ‘ವಿಜಯಪುರ ಮಹಾನಗರ ಪಾಲಿಕೆ ರಾಜ್ಯದಲ್ಲೇ ಅತ್ಯಂತ ಅಸಮರ್ಥ ಪಾಲಿಕೆಯಾಗಿದೆ. ಇ–ಖಾತೆ ಸೇರಿದಂತೆ ಸಾರ್ವಜನಿಕರ ಮೂರು ಸಾವಿರಕ್ಕೂ ಅಧಿಕ ಅರ್ಜಿ ಬಾಕಿ ಇವೆ, ಪ್ರತಿ ಟೇಬಲ್‌ಗೆ ಬಂದು ನಿಂತು ಬೆಣ್ಣೆ ಹಚ್ಚಿ ಅರ್ಜಿ ಕ್ಲಿಯರ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ, ದುಡ್ಡು ಕೇಳುತ್ತಾರೆ ಎಂದು ಜನ ದೂರಿದ್ದಾರೆ. ನಿಮಗೆ ಯಾವ ಭಯವೂ ಇಲ್ಲದಂತಾಗಿದೆ. ಈಗಾಗಲೇ ರೈಡ್ ಮಾಡಿದ್ದೇವೆ, ಶೀಘ್ರ ನೋಟಿಸ್ ನೀಡುತ್ತೇವೆ, ಸರಿಪಡಿಸಿಕೊಳ್ಳಬೇಕು, ಇಲ್ಲವಾದರೆ ಹೊಣೆ ಮಾಡುತ್ತೇವೆ, ಜನರ ಬಳಿ ಕೈ ಚಾಚದಂತೆ ಎಚ್ಚರ ವಹಿಸಬೇಕು, ಸುಧಾರಣೆಗೆ ಆದ್ಯತೆ ನೀಡಿ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ವಿಜಯಪುರ ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರು ಎಲ್ಲೆಂದರಲ್ಲಿ ಕಸ ಬೀಸಾಕದಂತೆ ಜಾಗೃತಿ ಮೂಡಿಸಬೇಕು, ಜನರು ಕಸ ಎಸೆಯುವ ಬ್ಲಾಕ್‌ಸ್ಫಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ದುಪ್ಪಟ್ಟು ದಂಡ ವಿದಿಸಬೇಕು ಎಂದು ಸೂಚಿಸಿದರು.

ADVERTISEMENT

ವಸತಿ ನಿಲಯಗಳಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ವಸತಿ ನಿಲಯಗಳ ಕಟ್ಟಡಗಳ ಕಿಟಕಿಗಳಿಗೆ ಜಾಳಿಗೆ ಅಳವಡಿಸಿ ಸೊಳ್ಳೆಗಳು ಬರದಂತೆ ನೋಡಿಕೊಂಡು ಎಂದು ಅವರು ತಿಳಿಸಿದರು.

ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಸ್ವಚ್ಛತೆ, ಗುಣಮಟ್ಟ ಆಹಾರ ಹಾಗೂ ಅಗತ್ಯ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಬೇಕು ಎಂದರು.

ಸಂಬಂಧಿಸಿದ ಅಧಿಕಾರಿಗಳು ವಾರಕ್ಕೆ ನಾಲ್ಕು ಬಾರಿ ವಸತಿ ನಿಲಯಕ್ಕೆ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದು ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಕೆರೆ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು, ಅವುಗಳಿಗೆ ಕಲುಷಿತ ನೀರು ಪೂರೈಕೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. 

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 108 ಆಂಬುಲೆನ್ಸ್‌ಗಳ ಸೇವೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ದುರಸ್ತಿ ಕಾರ್ಯ ಕೈಕೊಂಡು ಜನರಿಗೆ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಒದಗುವ ಮೂಲ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆ ಕುರಿತು ತಮಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.

ಲೋಕಾಯುಕ್ತರು ಸಾರ್ವಜನಿಕರ ಕುಂದು-ಕೊರತೆ, ಅಹವಾಲುಗಳನ್ನು ಆಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಲೋಕಾಯುಕ್ತರ ಕಾರ್ಯದರ್ಶಿ ಕೆ.ಶ್ರೀನಾಥ, ಲೋಕಾಯುಕ್ತ ಎಸ್‌.ಪಿ. ಟಿ.ಮಲ್ಲೇಶ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಲೋಕಾಯುಕ್ತ ಡಿವೈಎಸ್‌ಪಿ ಸುರೇಶ ರೆಡ್ಡಿ,  ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಇದ್ದರು.

ಗ್ರಾಮೀಣ ಭಾಗದ ಜನರು ಯಾವುದೇ ಮೂಲ ಸೌಲಭ್ಯಗಳಿಂದ ವಂಚಿತರಾಗಬಾರದು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡಬೇಕು ಶೌಚಾಲಯ ನಿರ್ಮಾಣ ಬಳಕೆ ಕುರಿತು ಜಾಗೃತಿ ಮೂಡಿಸಬೇಕು
ಬಿ.ಎಸ್.ಪಾಟೀಲಲೋಕಾಯುಕ್ತ ನ್ಯಾಯಮೂರ್ತಿ

‘ಕಸ ಕಂಡರೆ ಫೋಟೊ ಕಳಿಸಿ’ ಅಭಿಯಾನ

ವಿಜಯಪುರ: ನಗರ ಸೌಂದರ್ಯಿಕರಣಕ್ಕಾಗಿ ಸ್ವಚ್ಛತೆ ಕಾಪಾಡಲು ‘ಕಸ ಕಂಡರೆ ಫೋಟೊ ಕಳಿಸಿ’ ವಿಶೇಷ ಅಭಿಯಾನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಕರೆದು ಅಗತ್ಯ ಸಲಹೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ತಿಳಿಸಿದರು. ಜಿಲ್ಲೆಯಲ್ಲಿನ 267 ಕೆರೆಗಳ ಪೈಕಿ ಎಲ್ಲಾ ಕೆರೆಗಳ ಅಳತೆ ಹಾಗೂ ಒತ್ತುವರಿ ತೆರವು ಕಾರ್ಯ ಪೂರ್ಣಗೊಳಿಸಲಾಗಿದೆ. 11 ಕೆರೆಗಳ ವಿವಿಧ ಕಾರಣಗಳಿಂದ ಒತ್ತುವರಿ ತೆರವು ಬಾಕಿ ಇದ್ದು ಇರುವ ಅಡೆತಡೆ ನಿವಾರಿಸಿಕೊಂಡು ಕ್ರಮವಹಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ್‌ ಮಾತನಾಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಶನಿವಾರ ಸ್ವಚ್ಛತಾ ಅಭಿಯಾನ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.